ಅವರಿಬ್ಬರೂ ಪ್ರೀತಿಸಿ ಮದುವೆಯಾದವರು. ಪ್ರಿಯಕರನ (paramour) ಮೇಲಿನ ಪ್ರೇಮದ ಹುಚ್ಚಿನಿಂದಾಗಿ ಪತಿ ಹಾಗೂ ಎರಡು ಮಕ್ಕಳನ್ನೂ ಬಿಟ್ಟು ಓಡಿ ಬಂದಿದ್ದ ಮಹಿಳೆ ಆಕೆ. ಇಬ್ಬರಿಗೂ ವಯಸ್ಸಿನಲ್ಲಿ ಸಾಕಷ್ಟು ವ್ಯತ್ಯಾಸವಿದ್ದರೂ ಯಾರ ಮಾತಿಗೂ ಜಗ್ಗದೇ ಮದುವೆಯಾದ ಜೋಡಿಯದು. ಆದರೆ ಆಕೆಯ ಅನುಮಾನಕ್ಕೋ ಅಥವಾ ಅವ ಅನುಭವಿಸಿದ ಮಾನಸಿಕ ಸಮಸ್ಯೆಗೋ ಒಂದು ಕೊಲೆಯೇ (murder) ನಡೆದು ಹೋಗಿದೆ. ಕೊಲೆ ಆಗೋದೇನೋ ಆಗಿ ಹೋಗಿತ್ತು. ಆದರೆ ಮುಂದೆ ನಡೆದದ್ದು ಮಾತ್ರ ಎಂಥವರೂ ಶಾಕ್ ಆಗುವಂಥ ಘಟನೆ. ಪೊಲೀಸರು ಕೊಂಚ ಹುಷಾರಾಗಿ ಕೆಲಸ ಮಾಡಿದರೆ ಹೇಗೆ ಒಂದು ಕೊಲೆಯ ಕೇಸನ್ನು ಬೇಧಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅವತ್ತು ದಿನಾಂಕ ಫೆಬ್ರವರಿ 22. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (haliyal, uttara kannada) ತಾಲೂಕಿನ ತೇರಗಾಂವ್ ಗ್ರಾಮದ ಬಸವ ಓಣಿಯಲ್ಲಿ ಘಟನೆಯೊಂದು ನಡೆದಿತ್ತು. ರಾವುಫ್ ಅನ್ನೋರ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದ ಪತಿ-ಪತ್ನಿ ನಡುವೆ ಜಗಳವಾಗಿತ್ತು. ಸುಮಾರು 9 ಗಂಟೆ ಹೊತ್ತಿಗೆ ಎಂದಿನಂತೆ ಎಲ್ಲವೂ ನಿಶ್ಯಬ್ದವಾಗಿತ್ತು. ಅದರ ಹೊರತಾಗಿಯೂ ಆಗಾಗ ಆ ಮನೆಯಲ್ಲಿ ಜಗಳದ ಸದ್ದು ಕೇಳಿ ಬರುತ್ತಿತ್ತು. ಅವತ್ತು ಕೂಡ ಹಾಗೆಯೇ ಆಗಿತ್ತು (Illicit relation).
ಆದರೆ ಮರುದಿನ ಸುಮಾರು ಮಧ್ಯಾಹ್ನ 12 ಗಂಟೆಗೆ ಪೊಲೀಸರು ಬಂದು ಆ ಮನೆಯ ಮುಂದೆ ನಿಂತಾಗಲೇ ಜನರಿಗೆ ಶಾಕ್ ಆಗಿದ್ದು. ಏಕೆಂದರೆ ತಮ್ಮ ಓಣಿಯಲ್ಲಿಯೇ ಸದ್ದಿಲ್ಲದೇ ಕೊಲೆಯೊಂದು ನಡೆದು ಹೋಗಿತ್ತು. ಹೌದು; ನಾವೀಗ ಹೇಳಲು ಹೊರಟಿರೋ ಸ್ಟೋರಿ ಈ ಜೋಡಿಯದ್ದು. ಈತನ ಹೆಸರು ತುಕಾರಾಮ್ ಮಡಿವಾಳ ದಾಂಡೇಲಿಯ ಶಾಂತಕುಮಾರಿ ಅನ್ನೋರನ್ನು ಮದುವೆಯಾಗಿದ್ದ. ತುಕಾರಾಮ್ ನಿಗೆ 29 ವರ್ಷ, ಶಾಂತಕುಮಾರಿಯ ವಯಸ್ಸು 38. ಮೂಲತಃ ಫೋಟೋಗ್ರಾಫರ್ ಆಗಿದ್ದ ತುಕಾರಾಮ್, ಮದುವೆಯ ಫೋಟೋ ತೆಗೆಯಲು ದಾಂಡೇಲಿಗೆ ಹೋದಾಗ ಶಾಂತಕುಮಾರಿಯ ಪರಿಚಯವಾಗಿತ್ತು.
ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಸಮಸ್ಯೆ ಇದ್ದಿದ್ದು ಶಾಂತಕುಮಾರಿ ಬಳಿ. ಏಕೆಂದರೆ ಅದಾಗಲೇ ಆಕೆಗೆ ಮದುವೆಯಾಗಿ ಸುಮಾರು 20 ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ತುಕಾರಾಮ್ ನ ಮೇಲಿನ ಪ್ರೀತಿಗೆ ಆಕೆ ಪತಿ, ಮಕ್ಕಳನ್ನು ತೊರೆದು ತೇರಗಾಂವ್ ಕ್ಕೆ ಓಡಿ ಬಂದಿದ್ದಳು. ಬಳಿಕ 2021 ರಲ್ಲಿ ರಿಜಿಸ್ಟ್ರಾರ್ ಮದುವೆ ಕೂಡ ಆಗಿದ್ದರು. ಆದರೆ ತುಕಾರಾಮ್ ಮೇಲಿನ ಅತೀ ಪ್ರೀತಿ ಆಕೆಗೆ ಅನುಮಾನದ ರೋಗವನ್ನುಂಟು ಮಾಡಿತ್ತು. ತುಕಾರಾಮ್ ಯಾವುದೇ ಮಹಿಳೆಯರೊಂದಿಗೆ ಮಾತನಾಡಿದರೆ ಜಗಳ ಕಾಯುತ್ತಿದ್ದ ಶಾಂತಕುಮಾರಿ, ಇದೀಗ ಮತ್ತೆ ಯಾವತ್ತೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಫೆಬ್ರವರಿ 22 ರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಪರೀತಕ್ಕೆ ಹೋಗುತ್ತಲೇ ತುಕಾರಾಮ್ ಪತ್ನಿಯ ಕತ್ತನ್ನು ಹಿಸುಕಿದ್ದಾನೆ. ಅಷ್ಟೇ… ಆಕೆ ಸತ್ತೇ ಹೋಗಿದ್ದಾಳೆ. ಘಟನೆಯಿಂದ ಶಾಕ್ ಗೆ ಒಳಗಾದ ತುಕಾರಾಮ್ ಬಾಗಿಲು ಹಾಕಿಕೊಂಡು ರಾತ್ರಿಯಿಡೀ ಯೋಚಿಸಿದ್ದಾನೆ. ಕೊನೆಗೆ ಮನೆಯಲ್ಲಿ ಪ್ಲಾಸ್ಟಿಕ್ ಟ್ಯಾಂಕ್ ಇತ್ತು. ಅದರಲ್ಲಿ ಪತ್ನಿಯ ಶವವನ್ನು ಹಾಕಿ, ಅದನ್ನು ಪ್ಯಾಕ್ ಮಾಡಿದ್ದಾನೆ.
ರಾತ್ರಿಯಿಡೀ ಮನೆಯಲ್ಲಿಯೇ ಪತ್ನಿಯ ಶವದೊಂದಿಗೆ ಕಾಲ ಕಳೆದು, ಬಳಿಕ ಮರುದಿನ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಒಂದು ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದುಕೊಂಡಿದ್ದಾನೆ. ಯಾವುದೋ ಕಾರ್ಯ ಇರೋದ್ರಿಂದ ಕೆಲವು ಸಾಮಾನುಗಳನ್ನು ಹಾಕಿಕೊಂಡು ಹೋಗುತ್ತಿರೋದಾಗಿ ಹೇಳಿದ್ದಾನೆ.
ಆಗ ಟಾಟಾ ಏಸ್ ವಾಹನದ ಚಾಲಕ ರಿಜ್ಚಾನ್ ಕುಂಬಾರಿ, ಹಮಾಲಿ ಸಮೀರ್ ಸಂತೋಷಿ ಜೊತೆ ಸೇರಿ ಡ್ರಮ್ ನ್ನು ವಾಹನಕ್ಕೆ ಹೇರಿಕೊಂಡು ಹೋಗಿದ್ದಾರೆ. ಗೋವಾ ರಸ್ತೆಯ ಅನ್ ಮೋಡ್ ಘಾಟ್ ಬಳಿ ಹೋಗಿ, ಡ್ರಮ್ ನ್ನು ಘಾಟ್ ಗೆ ಉರುಳಿಸಿದ್ದಾರೆ.
ಮರಳಿ ಬಂದು, ಗೋವಾ ಕಡೆಗೆ ಹೋಗಲು ತುಕಾರಾಮ್ ಪ್ಲ್ಯಾನ್ ಮಾಡಿದ್ದ. ಆದರೆ ಅಷ್ಟೊತ್ತಿಗೆ ಅವರು ಭಾರವಾದ ಡ್ರಮ್ ವಾಹನಕ್ಕೆ ಹಾಕುತ್ತಿದ್ದುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಹಳಿಯಾಳ ಪೊಲೀಸರು ಮರಳಿ ಬರುತ್ತಿರೋ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.
ತಪ್ಪು ಮಾಡಿದ್ದರ ಬಗ್ಗೆ ಅರಿವಿದ್ದ ತುಕಾರಾಮ್ ಭಯಗೊಂಡಿದ್ದಾನೆ. ಕೂಡಲೇ ಪೊಲೀಸರು ತಮ್ಮ ಭಾಷೆಯಲ್ಲಿ ಕೇಳುತ್ತಿದ್ದಂತೆಯೇ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು, ಶವವನ್ನು ಕೂಡ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತ ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಇನ್ನು ಈ ಘಟನೆಯಲ್ಲಿ ತಮಗೇನೂ ಗೊತ್ತಿಲ್ಲ ಅನ್ನುತ್ತಿರೋ ರಿಜ್ವಾನ್ ಹಾಗೂ ಸಮೀರ್ ನನ್ನು ಸಾಕ್ಷ್ಯ ನಾಶದ ಕೇಸ್ ನಲ್ಲಿ ಬಂಧಿಸಲಾಗಿದೆ. ಇದೀಗ ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಒಟ್ಟಿನಲ್ಲಿ ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಪ್ರೀತಿ, ಪ್ರೇಮ ಅಂತಾ ಓಡಿ ಬಂದ ಮಹಿಳೆ ಇದೀಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರೋದು ವಿಪರ್ಯಾಸದ ಸಂಗತಿಯೇ ಸರಿ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ