ಕಾರವಾರ: ಹಾವೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ವಸಂತ್ ಕುಮಾರ್ ಎಂಬುವವನು ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಹಾಗೂ ಗುಳ್ಳಾಪುರದ ಶ್ರೀ ಶಿವವ್ಯಾಘ್ರೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿ ಸೇರಿದಂತೆ ಹಲವು ವಸ್ತುಗಳನ್ನು ದರೋಡೆ ಮಾಡಿದ್ದು, ಇದೀಗ ಯಲ್ಲಾಪುರ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಯಲ್ಲೂರು ನೇತ್ರತ್ವದ ತಂಡ ಇವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೂಲತಃ ಹಾವೇರಿಯ ರಟ್ಟಿಹಳ್ಳಿಯವನಾದ ವಸಂತ್ ಕುಮಾರ ವೃತ್ತಿಯಲ್ಲಿ ಶಿಕ್ಷಕನಾಗಿದ್ದ, ಇನ್ನು ಈತನ ಸಹಚರ ಸಲೀಂ ರಾಣೆಬೆನ್ನೂರಿನ ಗುಡ್ಡದಬೇವಿನಹಳ್ಳಿಯವನು. ಐಷಾರಾಮಿ ಜೀವನದ ಆಸೆಗೆ ಬಿದ್ದ ಈ ಶಿಕ್ಷಕ ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ, ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ ಹಂಸಬಾವಿ, ಹಿರೇಕೆರೂರ ಸೇರಿ ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 18 ಕ್ಕೂ ಹೆಚ್ಚು ದೇವಸ್ಥಾನದ ಕಳ್ಳತನ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ದರೋಡೆ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸುತಿದ್ದು, ಕೊನೆಗೂ ಯಲ್ಲಾಪುರ ಪೊಲೀಸರು ಇವರನ್ನು ಬಂಧಿಸಿ ಒಟ್ಟೂ ₹ 19,20,285 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ₹12 ಲಕ್ಷ ರೂ ಮೌಲ್ಯದ ಎಸ್ ಕ್ರಾಸ್ ಕಾರು, ₹30,000 ಮೌಲ್ಯದ ಬಜಾಜ್ ಪ್ಲಾಟಿನಾ ಕಂಪೆನಿಯ ಮೋಟಾರ್ ಸೈಕಲ್, 2,29,000 ರೂ ನಗದು, ₹50,000 ಮೌಲ್ಯದ 9 ಗ್ರಾಂ ತೂಕದ ದೇವರ ಆಭರಣ, ₹1,80,400 ಮೌಲ್ಯದ 3ಕೆ.ಜಿ. 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣ, ₹1,45,000 ಮೌಲ್ಯದ 140 ಹಿತ್ತಾಳೆಯ ಗಂಟೆಗಳು, ₹39,550 ಮೌಲ್ಯದ 27 ಹಿತ್ತಾಳೆಯ ದೀಪದ ಶಮೆ,
₹9,600 ಮೌಲ್ಯದ 22 ಹಿತ್ತಾಳೆಯ ತೂಗು ದೀಪಗಳು, ₹13,500 ಮೌಲ್ಯದ 7 ತಾಮ್ರದ ಕೊಡಗಳು, ₹13,235 ಮೌಲ್ಯದ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಾಗ್ರಿಗಳು, ₹10,000 ರೂ. ಮೌಲ್ಯದ ಡಿವಿಆರ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:Chikkaballapura: ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನ ಬಂಧಿಸಿದ ಪೊಲೀಸರು
ಹಲವು ತಿಂಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಡಯುತಿದ್ದ ಸರಣಿ ದೇವಸ್ಥಾನಗಳ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಹಾದಿ ತಪ್ಪಿದ ಶಿಕ್ಷಕ ವಸಂತ್ ಕುಮಾರ್, ಸಹಚರ ಸಲೀಂ ಕಂಬಿ ಎಣಿಸುತಿದ್ದಾರೆ. ಆದರೆ ಇವರು ಇವರೆಗೂ ಎಷ್ಟು ದೇವಸ್ಥಾನಗಳ ಕಳ್ಳತನ ಮಾಡಿದ್ದಾರೆ, ಇನ್ನೆಷ್ಟು ಜನರು ಈತನೊಂದಿಗಿದ್ದಾರೆ ಎಂಬ ಮಾಹಿತಿ ಹೆಚ್ಚಿನ ತನಿಖೆಯಿಂದ ಹೊರಬರಬೇಕಾಗಿದೆ. ಸರ್ಕಾರಿ ಕೆಲಸದಲ್ಲಿ ಕೈ ತುಂಬ ಸಂಬಳ ಬಂದರೂ ಐಷಾರಾಮಿ ಜೀವನದ ಆಸೆಯಿಂದ ಜೈಲೂಟ ತಿನ್ನುವ ಸ್ಥಿತಿ ತಂದುಕೊಂಡಿದ್ದು ಮಾತ್ರ ದುರಂತ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ