ಬೆಂಗಳೂರು: ಉತ್ತರಾಖಂಡ್‌ಗೆ ತೆರಳಿದ್ದ ರಾಜ್ಯದ 60 ಜನ ಸುರಕ್ಷಿತ ಎಂದು ಟಿವಿ9ಗೆ ತುಷಾರ್ ಮಾಹಿತಿ ನೀಡಿದ್ದಾರೆ. ಚಾರ್ಗಾಂಗ್, ಗಂಗಾಘಟ್, ಸೂನ್ನಲ್ಲಿ ಕೆಲವರು ಸಿಲುಕಿದ್ದಾರೆ. ವಿದ್ಯುತ್ ಕಡಿತ ಹಿನ್ನೆಲೆಯಲ್ಲಿ ಕರೆ ಮಾಡಲು ಆಗಿಲ್ಲ. ಸದ್ಯಕ್ಕೆ 60 ಜನ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ತುಷಾರ್ ಹೇಳಿದ್ದಾರೆ. ರಸ್ತೆಗಳು ಬ್ಲಾಕ್ ಆಗಿರುವುದರಿಂದ ತೊಂದರೆ ಆಗಿದೆ. ನಾಳೆ ಬ್ಲಾಕ್ ಮಾಡಿರುವ ರಸ್ತೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಒಂದೆರಡು ದಿನದಲ್ಲಿ ಎಲ್ಲರೂ ಬೆಂಗಳೂರಿಗೆ ಬರುತ್ತಾರೆ ಎಂದು ಅವರು ಧೈರ್ಯ ತಿಳಿಸಿದ್ದಾರೆ.
ಇದುವರೆಗೆ ನನಗೆ 10 ಜನಕಾಲ್ ಮಾಡಿದ್ದಾರೆ. 50 ಜನ ತಂಡ ಭದ್ರಿನಾಥ್ಗೆ ಹೋಗಿದ್ದರು. 50 ಜನರು ಸುರಕ್ಷಿತವಾಗಿದ್ದಾರೆ ಅವರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಇಂದು ಹವಾಮಾನ ಚೆನ್ನಾಗಿದೆ. ಹೀಗಾಗಿ ನಾಳೆ ಬ್ಲಾಕ್ ಮಾಡಿರುವ ರಸ್ತೆಯನ್ನು ತೆಗೆಯುತ್ತಿದ್ದಾರೆ. ರಸ್ತೆ ಬ್ಲಾಕ್ ತೆಗೆದ ನಂತರ ಬೆಂಗಳೂರಿಗೆ ಬರುತ್ತಾರೆ. ಇನ್ನೂ ಎರಡು ದಿನಗಳಲ್ಲಿ ಎಲ್ಲರೂ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಒಟ್ಟು 60 ಜನ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೀದರ್ನಿಂದ ಉತ್ತರಾಖಂಡಕ್ಕೆ ತೆರಳಿದ್ದ 30 ಜನ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. 3 ದಿನಗಳ ಹಿಂದೆ ಉತ್ತರಾಖಂಡ್‌ಗೆ ತೆರಳಿದ್ದ ಯಾತ್ರಿಗಳು, ಸಾಕಷ್ಟು ಮಳೆಯಾಗುತ್ತಿದ್ದರೂ, ಸುರಕ್ಷಿತರಾಗಿರುವ ಮಾಹಿತಿ ಸಿಕ್ಕಿದೆ. ದೇವರ ದರ್ಶನ ಪಡೆದು ಸುರಕ್ಷಿತರಾಗಿರುವ ಬಗ್ಗೆ ಅವರು ತಿಳಿಸಿದ್ದಾರೆ. ಬೀದರ್ ನಗರದ ಆಕಾಶ ಪಾಟೀಲ್, ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ಜಾಸ್ತಿ ವಿಕೋಪಕ್ಕೆ ಹೋದರೆ ವಿಶೇಷ ತಂಡ ರಚನೆ: ಆರ್. ಅಶೋಕ್
ಉತ್ತರಾಖಂಡ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಟಿವಿ9ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಬೆಳಗಿನ ಮಾಹಿತಿ ಪ್ರಕಾರ 6 ಜನರಿಂದ ಹೆಲ್ಪ್ಲೈನ್ ಸಂಪರ್ಕ ಆಗಿದೆ. 6 ಜನರ ಪೈಕಿ ಐವರು ಇರುವ ಸ್ಥಳವನ್ನು ಪತ್ತೆ ಮಾಡಲಾಗಿದೆ. ಮತ್ತೊಬ್ಬರನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ವಿಪತ್ತು ನಿರ್ವಹಣಾ ಇಲಾಖೆಯಿಂದ ಹೆಲ್ಪ್ಲೈನ್ ಆರಂಭ ಮಾಡಲಾಗಿದೆ. ನಾವು ಉತ್ತರಾಖಂಡ್‌ನ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಕೇಂದ್ರ ಗೃಹ ಸಚಿವರು ಕೂಡಾ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕನ್ನಡಿಗರ ರಕ್ಷಣೆ ವಿಚಾರ ನಾನು ಪರಿವೀಕ್ಷಣೆ ಮಾಡುತ್ತಿದ್ದೇನೆ. ಕನ್ನಡಿಗರು ಯಾರೇ ಇದ್ದರೂ ಸಹಾಯವಾಣಿ ಸಂಪರ್ಕಿಸಲಿ. ಅಲ್ಲಿ ಭೂಕುಸಿತ ಆಗಿರುವ ಕಾರಣ ವಾಹನ ಸಂಚಾರ ಕಷ್ಟವಾಗಿದೆ. ಐಎಎಸ್ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿ ಜಾಸ್ತಿ ವಿಕೋಪಕ್ಕೆ ಹೋದರೆ ವಿಶೇಷ ತಂಡ ರಚನೆ ಮಾಡುತ್ತೇವೆ. ಉತ್ತರಾಖಂಡ್‌ಗೆ ಇಲ್ಲಿಂದ ವಿಶೇಷ ತಂಡ ಕಳುಹಿಸುತ್ತೇವೆ ಎಂದು ಟಿವಿ9ಗೆ ಕಂದಾಯ ಖಾತೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭಿಸಿದ ಕರ್ನಾಟಕ ಸರ್ಕಾರ
ಉತ್ತರಾಖಂಡ್‌ನಲ್ಲಿ ಜಲಪ್ರಳಯ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದಿಂದ ಮಂಗಳವಾರ ಹೆಲ್ಪ್ಡೆಸ್ಕ್ ಆರಂಭಿಸಲಾಗಿದೆ. ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್ಡೆಸ್ಕ್ ಆರಂಭ ಮಾಡಲಾಗಿದೆ. ಉತ್ತರಾಖಂಡ್ ನೆರೆ ಸಂತ್ರಸ್ತರಾಗಿರುವ ಕರ್ನಾಟಕದ ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಸಹಾಯವಾಣಿ ತೆರೆಯಲಾಗಿದೆ.
ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್‌ನಲ್ಲಿ ಸಿಲುಕಿರುವ ಕನ್ನಡಿಗರು ಅಥವಾ ಅವರ ಸಂಬಂಧಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಹಾಗೂ ಉತ್ತರಾಖಂಡ್ ನೆರೆಯಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಬಹುದು. ಅದನ್ನು ಅಲ್ಲಿನ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಕಾರ್ಯಾಚರಣೆಗೆ ಸಹಾಯವಾಗುವಂತೆ ಕಳುಹಿಸಿಕೊಡಲಾಗುತ್ತದೆ. ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ತುರ್ತು ಸಹಾಯವಾಣಿ ಸಂಖ್ಯೆ: 080 – 1070 (Toll Free) ಮತ್ತು 080 – 2234 0676 -ಈ ಸಂಖ್ಯೆಯು ದಿನದ ಎಲ್ಲಾ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: Uttarakhand Rain: ಉತ್ತರಾಖಂಡದಲ್ಲಿ ಭೀಕರ ಮಳೆ; ಪ್ರವಾಹದಿಂದ 46 ಜನ ಸಾವು, 11 ಮಂದಿ ನಾಪತ್ತೆ
ಇದನ್ನೂ ಓದಿ: Uttarakhand Rain: ಮಳೆಯಿಂದ ಬಂಡೆಗಳ ಮಧ್ಯೆ ಸಿಲುಕಿದ ಕಾರಲ್ಲಿದ್ದವರ ರಕ್ಷಣೆ; ಶಾಕಿಂಗ್ ವಿಡಿಯೋ ಇಲ್ಲಿದೆ
Published On - 3:24 pm, Wed, 20 October 21