Uttarakhand Rain: ಉತ್ತರಾಖಂಡದಲ್ಲಿ ಭೀಕರ ಮಳೆ; ಪ್ರವಾಹದಿಂದ 46 ಜನ ಸಾವು, 11 ಮಂದಿ ನಾಪತ್ತೆ
Uttarakhand Floods: ಮಳೆ, ಪ್ರವಾಹ, ಭೂಕುಸಿತದಿಂದ ಉತ್ತರಾಖಂಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇನ್ನೂ 11 ಮಂದಿ ನಾಪತ್ತೆಯಾಗಿದ್ದಾರೆ.
ಉತ್ತರಾಖಂಡ್: ಉತ್ತರಾಖಂಡ್ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಬಿಡದೆ ಮಳೆ ಸುರಿಯುತ್ತಿದೆ. ಮಳೆ, ಪ್ರವಾಹ, ಭೂಕುಸಿತದಿಂದ ಉತ್ತರಾಖಂಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇನ್ನೂ 11 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅಕ್ಟೋಬರ್ 26ರವರೆಗೂ ಉತ್ತರಾಖಂಡದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ರಾಜ್ಯ ಸರ್ಕಾರ ಹೆಚ್ಚು ರಕ್ಷಣಾ ತಂಡಗಳನ್ನು ನಿಯೋಜನೆ ಮಾಡಿದೆ.
ಉತ್ತರಾಖಂಡದಲ್ಲಿ ಉಂಟಾಗಿರುವ ಪ್ರವಾಹದಿಂದ ಹಾನಿಗೀಡಾಗಿರುವ ಸ್ಥಳಗಳಿಗೆ ಇಂದು ಕೂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿದ್ದಾರೆ. ನಿನ್ನೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕುಮಾನ್ ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೀಡಾಗಿರುವ ಪ್ರದೇಶಗಳಿಗೆ ಸಿಎಂ ಇಂದು ಭೇಟಿ ನೀಡಿದ್ದಾರೆ. ಪರಿಹಾರಕ್ಕಾಗಿ ಪ್ರವಾಹಪೀಡಿತ ಜಿಲ್ಲೆಗಳಿಗೆ ತಲಾ 10 ಕೋಟಿ ರೂ. ಹಣವನ್ನು ಸಿಎಂ ಪುಷ್ಕರ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
ಉತ್ತರಾಖಂಡದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಉತ್ತರಾಖಂಡ ಸರ್ಕಾರದಿಂದ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 1.9 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಘೋಷಣೆ ಮಾಡಿದ್ದಾರೆ. ಜಾನುವಾರು ಕಳೆದುಕೊಂಡವರಿಗೆ ಅಗತ್ಯ ನೆರವು ಭರವಸೆಯನ್ನೂ ರಾಜ್ಯ ಸರ್ಕಾರ ನೀಡಿದೆ.
Salute to Indian Army..#IndianArmy helping people in rescue and relief in Nainital.#Uttarakhand pic.twitter.com/WvDWAWdZA1
— Arvind Dharmapuri (@Arvindharmapuri) October 19, 2021
ನೈನಿತಾಲ್ನಲ್ಲಿ ಇಂದು ಕೂಡ ಮಳೆ ಕಡಿಮೆಯಾಗಿಲ್ಲ. ನಿನ್ನೆ ಸುರಿದ ಮಳೆಗೆ ನೈನಿತಾಲ್ ಒಂದರಲ್ಲೂ 22ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದ ನೈನಿತಾಲ್ ಹಾಗೂ ಅನೇಕ ನಗರಗಳು, ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಾಮಗಂಗಾ, ಕೋಸಿ, ಚಂದ್ರಭಾಗಾ, ಗೌಲಾ, ಚಲ್ತಿ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಭೂಕುಸಿತದಲ್ಲಿ ಸಿಲುಕಿರುವವರ ರಕ್ಷಣೆ ಇನ್ನಷ್ಟು ಕಷ್ಟವಾಗಿದೆ. ಇಲ್ಲಿಯವರೆಗೆ ಎನ್ಡಿಆರ್ಫ್ ಸಿಬ್ಬಂದಿ 300ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಚಾರ್‌ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಹರಿದ್ವಾರ, ರಿಷಿಕೇಶ್, ಶ್ರೀನಗರ, ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ್, ಗುಪ್ತಕಾಶಿ, ಉಖಿಮಠ, ಕರ್ಣಪ್ರಯಾಗ್, ಜೋಶಿಮಠ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶಗಳಿಗೆ ಬಂದಿದ್ದ ಪ್ರವಾಸಿಗರು ಮಳೆ ನಿಯಂತ್ರಣಕ್ಕೆ ಬರುವವರೆಗೆ ಇದ್ದಲ್ಲೇ ಇರಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ.
When an #elephant stuck in a swollen river in #Uttarakhand .. But, ultimately it could cross over to forests.. Wild animals have some amazing #adaptations to natural events.#uttarakhandrains pic.twitter.com/DjqhCa6ZJq
— Surender Mehra IFS (@surenmehra) October 19, 2021
ನೈನಿತಾಲ್ ಸೇರಿದಂತೆ ಇತರ ಪ್ರದೇಶಗಳಲ್ಲಿ ರಸ್ತೆ, ಬೀದಿಗಳು, ಸೇತುವೆಗಳು ಮತ್ತು ರೈಲ್ವೇ ಹಳಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮಳೆಗೆ ಬೆಚ್ಚಿಬಿದ್ದಿರುವ ಜನರು ತಮ್ಮ ಮನೆಗಳ ಮಹಡಿಗಳನ್ನು ಹತ್ತಿ ನೆರವಿಗಾಗಿ ಕೂಗುತ್ತಿದ್ದಾರೆ. ಕಾರ್ಬೆಟ್ ನ್ಯಾಷನಲ್ ಪಾರ್ಕ್’ನ ಪಾಕ್ಕಿಂಗ್ ಸ್ಥಳವು ಕೋಸಿ ನದಿ ಪ್ರವಾಹದಿಂದ ಜಲಾವೃತವಾಗಿವೆ.
Scary situation .May God protect them #Uttarakhand #UttarakhandRain #Uttarakhandfloods pic.twitter.com/LVFzqciGh6
— Pamela Bhattacharya (@PamelaBhattac10) October 19, 2021
ಈ ನಡುವೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ 3 ಸೇನಾ ಹೆಲಿಕಾಪ್ಟರ್ಗಳು ಉತ್ತರಾಖಂಡದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಮನೆಗಳು, ರಸ್ತೆಗಳು ಮತ್ತು ಭಾರೀ ಭೂಕುಸಿತದ ಅತಿಹೆಚ್ಚು ಸಾವು-ನೋವು ಕಂಡಿರುವ ನೈನಿತಾಲ್ನಲ್ಲಿ ಎರಡು ಸೇನಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಗಢವಾಲ್ ಪ್ರಾಂತ್ಯದಲ್ಲಿ ಮತ್ತೊಂದು ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದೆ. 15 ಎನ್ಡಿಆರ್ಎಫ್ ತಂಡಗಳು ಪ್ರವಾಹ ಸ್ಥಳಗಳಲ್ಲಿ ದೋಣಿಗಳ ಮೂಲಕ ಹೋಗಿ ಪ್ರವಾಹದ ನೀರಿನ ಮಧ್ಯೆ ಇರುವ ಮನೆಗಳಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ.
Heavy rain wreaks havoc in Nainital.
Our thoughts and prayers are with the people of #Uttarakhand.
I appeal to youth congress volunteers in all affected areas to lend a helping hand. Please stay safe. @IYCUttarakhand pic.twitter.com/QihXeG4XvG
— Srinivas BV (@srinivasiyc) October 19, 2021
ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದಿಂದ ಮಂಗಳವಾರ ಸಹಾಯವಾಣಿ ಆರಂಭಿಸಲಾಗಿದೆ. ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್ಡೆಸ್ಕ್ ಆರಂಭ ಮಾಡಲಾಗಿದೆ. ಉತ್ತರಾಖಂಡ್ ನೆರೆ ಸಂತ್ರಸ್ತರಾಗಿರುವ ಕರ್ನಾಟಕದ ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಸಹಾಯವಾಣಿ ತೆರೆಯಲಾಗಿದೆ. ಉತ್ತರಾಖಂಡ್ನಲ್ಲಿ ಸಿಲುಕಿರುವ ಕನ್ನಡಿಗರು ಅಥವಾ ಅವರ ಸಂಬಂಧಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಹಾಗೂ ಉತ್ತರಾಖಂಡ್ ನೆರೆಯಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಬಹುದು. ಅದನ್ನು ಅಲ್ಲಿನ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಕಾರ್ಯಾಚರಣೆಗೆ ಸಹಾಯವಾಗುವಂತೆ ಕಳುಹಿಸಿಕೊಡಲಾಗುತ್ತದೆ. ಕರ್ನಾಟಕದ ತುರ್ತು ಸಹಾಯವಾಣಿ ಸಂಖ್ಯೆ: 080 – 1070 (Toll Free) ಮತ್ತು 080 – 2234 0676 -ಈ ಸಂಖ್ಯೆಯು ದಿನದ ಎಲ್ಲಾ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ:Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ 34 ಜನ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Uttarakhand Rain: ಮಳೆಯಿಂದ ಬಂಡೆಗಳ ಮಧ್ಯೆ ಸಿಲುಕಿದ ಕಾರಲ್ಲಿದ್ದವರ ರಕ್ಷಣೆ; ಶಾಕಿಂಗ್ ವಿಡಿಯೋ ಇಲ್ಲಿದೆ
Published On - 2:36 pm, Wed, 20 October 21