ಮೈಸೂರು: ಸಂಸದ ವಿ. ಶ್ರೀನಿವಾಸ ಪ್ರಸಾದ್ ಆಪ್ತ ಕಾರ್ಯದರ್ಶಿ ಶಂಕರ್ ಕೊರೊನಾ ಸೋಂಕಿಗೆ ತುತ್ತಾಗಿ ನಿಧನ ಹೊಂದಿದ್ದಾರೆ. ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಶಂಕರ್(78) ಕೊನೆಯುಸಿರೆಳೆದಿದ್ದಾರೆ. ಕಳೆದ 40 ವರ್ಷಗಳಿಂದ ಶ್ರೀನಿವಾಸ್ ಪ್ರಸಾದ್ ಬಳಿ ಆಪ್ತ ಸಹಾಯಕರಾಗಿದ್ದ ಶಂಕರ್ ಅವರಿಗೆ ಒಂದು ವಾರದ ಹಿಂದೆ ಕೊವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಬಳಿಕ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಂಕರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುರೇಶ್ ಕುಮಾರ್ ಆಪ್ತ ಕಾರ್ಯದರ್ಶಿ ನಿನ್ನೆ ನಿಧನ ಹೊಂದಿದ್ದರು
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರ ಆಪ್ತ ಕಾರ್ಯದರ್ಶಿ ಹೆಜ್.ಜೆ. ರಮೇಶ್ (53) ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಮಡಿವಾಳದ ಸಮೀಪದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೂಕ್ತ ಸಮಯಕ್ಕೆ ಆಕ್ಸಿಜನ್ ಸಿಗದೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಮೇಶ್ ಸಾವಿಗೀಡಾಗಿದ್ದರು.
ಹೆಜ್.ಜೆ. ರಮೇಶ್ ಅವರು 8 ವರ್ಷಗಳಿಂದ ಎಸ್. ಸುರೇಶ್ ಕುಮಾರ್ ಅವರ ಜೊತೆ ಸೇವೆ ಸಲ್ಲಿಸಿದ್ದರು. ಈ ಬಗ್ಗೆ ಸ್ವತಃ ಸಚಿವ ಸುರೇಶ್ ಕುಮಾರ್ ಅವರೇ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ‘ನಮ್ಮ ಕ್ಷೇತ್ರದ ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ HJ ರಮೇಶ್ ಇನ್ನಿಲ್ಲ. ರಮೇಶ್ ಸುಮಾರು 8 ವರ್ಷ ನನ್ನೊಡನೆ ನಗು ನಗುತ್ತಾ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ’ ಎಂದು ಸಚಿವ ಸುರೇಶ್ ಕುಮಾರ್ ಶ್ರದ್ದಾಂಜಲಿ ಅರ್ಪಿಸಿದ್ದರು.
ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ
ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. 1,761 ರೋಗಿಗಳು ಮೃತ ಪಟ್ಟಿದ್ದು 1,54,761 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯಹೇಳಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ ಪ್ರಕರಣಗಳ ಸಂಖ್ಯೆ 1,53,21,089 ಆಗಿದೆ. ಈವರೆಗೆ 1,80,530 ಮಂದಿ ಮೃತಪಟ್ಟಿದ್ದು 1,31,08,582 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,31,977 ಆಗಿದ್ದು, 12,71,29,113 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ರಾಜ್ಯ ಸರ್ಕಾರ ಅಕ್ಷರಶಃ ತಬ್ಬಿಬ್ಬಾಗಿ ಹೋಗಿದೆ; ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಹೆಚ್. ವಿಶ್ವನಾಥ್ ಕಿಡಿಕಿಡಿ
ಇದನ್ನೂ ಓದಿ: Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣ ಪತ್ತೆ, 1,761 ಸಾವು
Published On - 2:35 pm, Tue, 20 April 21