
ಬೆಂಗಳೂರು/ದಾವಣಗೆರೆ, (ಜೂನ್ 25): ಪೋಕ್ಸೋ ಪ್ರಕರಣಕ್ಕೆ (POCSO Case) ನಿರೀಕ್ಷಣಾ ಜಾಮೀನು (anticipatory bail) ಪಡೆದಿದ್ದ ವಚನಾನಂದ ಸ್ವಾಮೀಜಿಗೆ (Vachanananda Swamiji) ಹೈಕೋರ್ಟ್ ( karnataka High Court) ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದಶ್ರೀ ನಿರೀಕ್ಷಣಾ ಜಾಮೀನು ಪಡೆದಿದ್ದು, ಇದನ್ನು ಪ್ರಶ್ನಿಸಿ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೇಸ್ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದು, ನಿರೀಕ್ಷಣಾ ಜಾಮೀನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಆದರೆ, ರೆಗ್ಯುಲರ್ ಜಾಮೀನು ಅರ್ಜಿ ಸಲ್ಲಿಸಲು 3 ವಾರಗಳ ಕಾಲಾವಕಾಶ ನೀಡಿದ್ದು, ಅಲ್ಲಿಯವರೆಗೂ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದೆ. ಹೀಗಾಗಿ ಸ್ವಾಮೀಜಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಹಿಂದೆಯೇ ವಚನಾನಂದ ಸ್ವಾಮೀಜಿ ಜಾಮೀನು ಪಡೆದ ರೀತಿಗೆ ಸ್ವತಃ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿತ್ತು. ಮೇ 7ರಂದು ಸ್ವಾಮೀಜಿ ವಿರುದ್ಧ ಪೋಕ್ಸೋ ದೂರು ದಾಖಲಾಗಿದೆ. ಆದ್ರೆ ಶ್ರೀಗಳು ಅದರ ಹಿಂದಿನ ದಿನ ಅಂದರೆ ಮೇ 6ರಂದೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ದೂರು ದಾಖಲು ಮುನ್ನವೇ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದಿದ್ದ ಹೈಕೋರ್ಟ್, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದಿತ್ತು. ಈ ಸಂಬಂಧ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿತ್ತು. . ಆದ್ರೆ, ಇಂದು (ಜೂನ್ 25) ವಿಚಾರಣೆಯಲ್ಲಿ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದೆ.
ಏಪ್ರಿಲ್ ಆರಂಭದಲ್ಲಿ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಭಾಗವಹಿಸಿ ನಿರ್ಣಯ ತೆಗೆದುಕೊಂಡು ಸ್ವಾಮೀಜಿಗಳನ್ನು ಮಠದ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದಕ್ಕೆ ಕಾರಣವಾಗಿದ್ದು 2 ಪೀಠಗಳ ನಿರ್ವಹಣೆಯ ವಿಚಾರ. 2018ರಲ್ಲಿ ಶ್ರೀ ಅವರನ್ನು ಇಲ್ಲಿನ ಟ್ರಸ್ಟಿಗಳು ಜಗದ್ಗುರು ಮಾಡಿದ್ದರು. ಬಳಿಕ ಹಲವಾರು ಬಾರಿ ಎರಡು ಪೀಠಗಳ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರು. ಆದರೆ ಇದನ್ನು ವಚನಾನಂದ ಸ್ವಾಮೀಜಿ ಪಾಲಿಸದ ಆರೋಪದಲ್ಲಿ ಟ್ರಸ್ಟಿಗಳು ಸರ್ವಾನುಮತವಾಗಿ ಪದಚ್ಯುತಗೊಳಿಸಿದ್ದರು.
ವಚನಾನಂದ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಹಿಂಸೆ ನೀಡುತ್ತಾರೆ ಎಂದು ಸ್ವತಃ ಮಕ್ಕಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ವಿಚಾರಣೆ ನಡೆಸಿದ್ದರು. ಅಲ್ಲದೇ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಬಾಲಕನೋರ್ವನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇದೇ ಪ್ರಕರಣದಲ್ಲಿ ಸ್ವಾಮೀಜಿಯ ವಿಚಾರಣೆ ನಡೆದು, ಮೆಡಿಕಲ್ ಟೆಸ್ಟ್ ಕೂಡ ನಡೆಸಲಾಗಿದೆ.
ಸ್ವಾಮೀಜಿ ವಿರುದ್ಧ ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸ್ವಾಮೀಜಿ, ಏಪ್ರಿಲ್ 21ರಂದು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಜಿಲ್ಲಾ ನ್ಯಾಯಾಲಯ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
Published On - 4:41 pm, Thu, 25 June 26