ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆ ನಿವಾಸಕ್ಕೆ ಇಂದು ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀಗಳು ಭೇಟಿ ನೀಡಿದರು. ನಗರದಲ್ಲಿರುವ ಸಂತ್ರಸ್ತೆಯ ಪೋಷಕರ ನಿವಾಸಕ್ಕೆ ಭೇಟಿ ನೀಡಿದ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳು ಸಮಾಲೋಚನೆ ಸಹ ನಡೆಸಿದರು. ಜೊತೆ, ಸಂತ್ರಸ್ತೆ ಕುಟುಂಬಕ್ಕೆ ಧೈರ್ಯ ಹೇಳಿದರು. ಇದೀಗ, ಸ್ವಾಮೀಜಿಗಳ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಅಂದ ಹಾಗೆ, ಈ ಹಿಂದೆ, ಮಗಳು ಕಾಣದಿರುವುದರಿಂದ ಆತಂಕದಲ್ಲಿದ್ದ ಪೋಷಕರು ನಮ್ಮ ಮಗಳನ್ನು ನಮಗೆ ಒಪ್ಪಿಸಿ ಎಂದು ಮನವಿ ಮಾಡಿದ್ದರು. ಸಂತ್ರಸ್ತೆಯ ಪೋಷಕರು ಸಿಎಂ ಹಾಗೂ ಗೃಹ ಸಚಿವರಿಗೆ ಕೋರಿದ್ದರು. ಇದಲ್ಲದೆ, ಡಿಕೆಶಿ ಮತ್ತು ಸಿಡಿ ಗ್ಯಾಂಗ್ ವಿರುದ್ಧ ಆರೋಪ ಸಹ ಮಾಡಿದ್ದರು.
ಡಿಕೆಶಿ ಕಡೆಯವರಿಂದ ನಮ್ಮ ಮಗಳನ್ನು ಕಾಪಾಡಿ ಎಂದು ಯುವತಿಯ ತಂದೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ನಮ್ಮ ಮಗಳನ್ನು ಸಿಡಿ ಗ್ಯಾಂಗ್ ಒತ್ತಡದಲ್ಲಿಟ್ಟಿದೆ. ನಮ್ಮ ಮಗಳನ್ನು ಒತ್ತಡದಿಂದ ಮೊದಲ ಕಾಪಾಡಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇವೆ. ನ್ಯಾಯಾಧೀಶರು, ಸಿಎಂ, ಗೃಹ ಸಚಿವರ ಮೇಲೆ ನಮಗೆ ನಂಬಿಕೆ ಇದೆ. ದೇಶ ಸೇವೆ ಮಾಡಿರುವ ನನಗೆ ನಮ್ಮ ಮಗಳನ್ನು ರಕ್ಷಿಸಿಕೊಳ್ಳುವುದು ಹೇಗೆಂದು ತಿಳಿದಿದೆ. ನನ್ನ ಪುತ್ರಿಯನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಒತ್ತಡದಿಂದ ಹೊರಬಂದ ಮೇಲೆ ಮಗಳು ಹೇಳಿಕೆ ನೀಡಬೇಕು. ನನ್ನ ಪುತ್ರಿ ನಮ್ಮ ಜತೆ ಇರುವುದಕ್ಕೆ ಬಯಸಿದರೆ ಬರಲಿ. ನಮ್ಮ ಜೊತೆಯಿರುವುದಕ್ಕೆ ಒಪ್ಪದೇ ಇದ್ದರೆ ಜಡ್ಜ್ ಮುಂದೆಯೇ ಹಾಜರಾಗಲಿ. ಅದಕ್ಕೂ ಮೊದಲು ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ. ಮೊದಲು ನಮ್ಮ ಮಗಳು ನಮ್ಮ ಮನೆಗೆ ಬರಬೇಕು ಎಂದು ಯುವತಿಯ ತಂದೆ ಆಗ್ರಹಿಸಿದ್ದರು.
ನಾವು ಈ ಪ್ರಕರಣದಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದೆವು. ಹೀಗಾಗಿ, ಕೆಲವು ದಿನಗಳ ಕಾಲ ನಾನು ದೂರವಾಗಿದ್ದೆವು. ನಾನು ಎಂದೂ ಪೊಲೀಸ್ ಠಾಣೆಯ ಮೆಟ್ಟಿಲು ಸಹ ಹತ್ತಿಲ್ಲ. ಫೆಬ್ರವರಿ 6 ರಂದು ಹಳಿಯಾಳಕ್ಕೆ ಬಂದು ಹೋಗಿದ್ದಾರೆ. ಅವರ ಮಾವನ ಪುಣ್ಯತಿಥಿ ಕಾರ್ಯಕ್ರಮಕ್ಕೆ ಬಂದು ಹೋಗಿದ್ದರು. ನನ್ನ ಪುತ್ರಿಗೆ ಯಾವುದೇ ಸಮಸ್ಯೆ ಇದಿದ್ದರೆ ತಾಯಿಯ ಬಳಿ ಹೇಳಿಕೊಳ್ಳಬಹುದಿತ್ತು. ತಾಯಿಯ ಬಳಿ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಆಗದೆ ಇದಿದ್ದರೆ ಅವಳ ಪ್ರೀತಿಯ ಅಜ್ಜಿಯ ಬಳಿಯಾದ್ರೂ ಹೇಳಿಕೊಳ್ಳಬಹುದಿತ್ತು ಎಂದು ಯುವತಿಯ ತಂದೆ ಹೇಳಿದರು. ಈ ಹೇಳಿಕೆ ನೀಡಲು ನಾವು ಯಾರದ್ದೇ ಒತ್ತಡಕ್ಕೂ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಎಲ್ಲಾ ಜಾತಿಗಳ ಪಕ್ಷ.. ಬಿಜೆಪಿ ಅಂದ್ರೆ ಬರೀ ಹಿಂದೂ, ಮುಂದು ಅಷ್ಟೆ -ಡಿ.ಕೆ.ಶಿವಕುಮಾರ್