ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹಿಂತಿರುಗಿಸುವಂತೆ ತೆಲಂಗಾಣ ಸಿಎಂಗೆ ಜೆಡಿಎಸ್ ಪತ್ರ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೈದರಾಬಾದ್ನ ಸಹಕಾರಿ ಬ್ಯಾಂಕ್ ಒಂದಕ್ಕೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ವಾಲ್ಮೀಕಿ ಸಮುದಾಯದ ಹಣವನ್ನು ಹಿಂತಿರುಗಿಸುವಂತೆ ಮನವಿ ಮಾಡಿದೆ.
ಬೆಂಗಳೂರು, ಜೂನ್ 09: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) ಬಹುಕೋಟಿ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ತೆಲಂಗಾಣ (Telangana) ಮುಖ್ಯಮಂಯತ್ರಿ ರೇವಂತ ರೆಡ್ಡಿ (Revanth Reddy) ಅವರಿಗೆ ಪತ್ರ ಬರೆದಿದ್ದು, ನಮ್ಮ ರಾಜ್ಯದ ಹಣವನ್ನು ಹಿಂತಿರುಗಿಸಿ ಕೊಡಿ ಎಂದು ಮನವಿ ಮಾಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಕ್ಗೆ ವರ್ಗಾವಣೆಯಾಗಿದೆ ಎಂಬುವುದು ವಿಶೇಷ ತನಿಖಾ ದಳ (SIT) ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಈಗಾಗಲೆ ಹೈದರಾಬಾದ್ಗೆ ತೆರಳಿದ್ದು, ಸಹಕಾರಿ ಬ್ಯಾಂಕ್ನಲ್ಲಿ ನಿಗಮದ 45 ಕೋಟಿ ರೂ. ಹಣ ಜಪ್ತಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಯವರಿಗೆ ಪತ್ರ ಬರೆದಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ತಿರುವು: ಮತ್ತೊಬ್ಬ ಸಚಿವರ ಹೆಸರು ತಳುಕು
“ಗುಂಡಿಗೆ ಹೋದ ಹೆಣ, ರಾಜ್ಯ ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ತಿಳಿದಿದ್ದರೂ ಕೊನೆ ಪ್ರಯತ್ನವಾಗಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕನ್ನಡಿಗರ ಪತ್ರ” ಎಂದು ಉಲ್ಲೇಖಿಸಿ ಪತ್ರ ಬರೆದಿದೆ.
“ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂ. ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಣತಿಯಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ.”
“ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು ಈ ನೀಚ ಸರ್ಕಾರ ಉಂಡು ಹೋದ ಕೊಂಡು ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿಗೆ ಸಾಗಿಸಿದ್ದಾರೆ.”
“ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ ಆದ್ರೆ ಕೊನೆ ಪ್ರಯತ್ನವಾಗಿ ನಿಮ್ಮಲ್ಲಿ ಈ ಮನವಿ ಮಾಡುತ್ತಿದ್ದೇವೆ, ಹಣ ಹಿಂತಿರುಗಿಸಿ ವಿಶ್ವಾಸ ಉಳಿಸಿಕೊಳ್ಳಿ.” ಎಂದು ಪತ್ರ ಬರೆದಿದೆ.
ಜೆಡಿಎಸ್ ಟ್ವೀಟ್
ಗುಂಡಿಗೆ ಹೋದ ಹೆಣ, @INCKarnataka ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ತಿಳಿದಿದ್ದರೂ ಕೊನೆ ಪ್ರಯತ್ನವಾಗಿ ತೆಲಂಗಾಣದ ಮುಖ್ಯಮಂತ್ರಿ @revanth_anumula ಅವರಿಗೆ ಕನ್ನಡಿಗರ ಪತ್ರ. pic.twitter.com/NEw7H12oqk
— Janata Dal Secular (@JanataDal_S) June 8, 2024
ಒಟ್ಟು 94 ಕೋಟಿ ರೂ. ವರ್ಗ
ಹಗರಣ ಸಂಬಂಧ ಬಂಧಿತ ಆರೋಪಿ ಸತ್ಯನಾರಾಯಣ್ ಒಡೆತನದ ಸಹಕಾರಿ ಬ್ಯಾಂಕ್ ಇದಾಗಿದ್ದು, ಇದೇ ಬ್ಯಾಂಕ್ ಖಾತೆಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್ನ 18 ನಕಲಿ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು.
ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಐವರೆಗೆ ಐವರನ್ನು ಎಸ್ಐಟಿ ಬಂಧಿಸಿದೆ. ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಬಂಧಿತರು. ಐವರನ್ನು ಕಸ್ಟಡಿಗೆ ಪಡೆದು ಎಸ್ಐಟಿ ವಿಚಾರಣೆ ನಡೆಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 am, Sun, 9 June 24