ಬೆಂಗಳೂರು, ಜೂನ್ 01: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Scheduled Tribes Development Corporation) ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಅಕೌಂಟ್ಗಳನ್ನು ಫ್ರೀಜ್ ಮಾಡುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಆರ್‌ಬಿಎಲ್ ಬ್ಯಾಂಕ್ (RBL Bank) ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ತರಬೇತಿ ಸಂಸ್ಥೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಭದ್ರತಾ ಏಜೆನ್ಸಿ, ವಾಣಿಜ್ಯ ವಹಿವಾಟು ಸಂಸ್ಥೆ, ಸಾಫ್ಟ್‌ವೇರ್ ಕಂಪನಿಗಳ ಹೆಸರಿನಲ್ಲಿರುವ ಖಾತೆಗಳಿಗೆ ಮಾರ್ಚ್ 3ರಿಂದ ಮಾರ್ಚ್ 30ರ ಅವಧಿಯಲ್ಲಿ 49.52 ಕೋಟಿ ಮತ್ತು ವ್ಯಕ್ತಿಗಳ ಹೆಸರಿನಲ್ಲಿರುವ ಎಂಟು ಖಾತೆಗಳಿಗೆ ಮಾರ್ಚ್ 30ರಂದು ಒಂದೇ ಚೆಕ್ ಬಳಸಿ 40.10 ಕೋಟಿ ರೂ. ವರ್ಗಾವಣೆಯಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆಗಳನ್ನು ಹೊಂದಿರುವ ಬಹುತೇಕ ಖಾಸಗಿ ಕಂಪನಿಗಳು ಬೆಂಗಳೂರಿನವು. ಕೆಲವು ಮಾತ್ರ ಹೊರ ರಾಜ್ಯದಲ್ಲಿವೆ. ಈ ಎಲ್ಲ ಕಂಪನಿಗಳ ಹೆಸರಿನಲ್ಲಿ ಆರ್‌ಬಿಎಲ್ ಬ್ಯಾಂಕ್‌ನ ಬಂಜಾರಾ ಹಿಲ್ಸ್ ಶಾಖೆಯಲ್ಲಿ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: 2 ಅಧಿಕಾರಿಗಳು ಎಸ್ಐಟಿ ವಶಕ್ಕೆ
ಮಾರ್ಚ್ 5: ಪಿಫ್‌ಮಸ್ ಮ್ಯಾನೇಜ್‌ಮೆಂಟ್ ಪ್ರೈ.ಲಿ. ₹5.35 ಕೋಟಿ ವರ್ಗ
ಮಾರ್ಚ್ 5: ಝೆಲಿಯಂಟ್ ಟ್ರೈನಿಂಗ್ ಆ್ಯಂಡ್ ಕನ್ಸಲ್ಟಿಂಗ್ ಸರ್ವೀಸ್; ₹4.97 ಕೋಟಿ
ಮಾರ್ಚ್ 6; ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿ. (ಮೈಂಡ್ ಟ್ರೀ ):₹4.53 ಕೋಟಿ
ಮಾರ್ಚ್ 6; ವೈಎಂ ಎಂಟರ್‌ಪ್ರೈಸಸ್; ₹4.98 ಕೋಟಿ
ಮಾರ್ಚ್ 6; ಮನ್ಹು ಎಂಟರ್‌ಪ್ರೈಸಸ್; ₹5.01 ಕೋಟಿ
ಮಾರ್ಚ್ 6; ಅಕಾರ್ಡ್ ಬ್ಯುಸಿನೆಸ್ ಸರ್ವೀಸಸ್; ₹ 5.46 ಕೋಟಿ
ಮಾರ್ಚ್ 6; ಮೆ. ಟ್ಯಾಲೆಂಕ್ ಸಾಫ್ಟ್‌ವೇರ್ ಇಂಡಿಯಾ ಪ್ರೈ.ಲಿ.; ₹5.10 ಕೋಟಿ
ಮಾರ್ಚ್ 11; ನಿತ್ಯ ಸೆಕ್ಯುರಿಟಿ ಸರ್ವೀಸಸ್; ₹4.47 ಕೋಟಿ
ಮಾರ್ಚ್ 11; ವೋಲ್ಟಾ ಟೆಕ್ನಾಲಜಿ ಸರ್ವೀಸಸ್; ₹5.12 ಕೋಟಿ
ಮಾರ್ಚ್ 23;ವಿ6 ಬ್ಯುಸಿನೆಸ್ ಸಲ್ಯೂಷನ್ಸ್; ₹4.50 ಕೋಟಿ
ಮಾರ್ಚ್ 30; ಎಂಟು ವೈಯಕ್ತಿಕ ಖಾತೆಗಳಿಗೆ; ₹40.10 ಕೋಟಿ
ಒಟ್ಟು ₹89.62 ಕೋಟಿ ವರ್ಗಾವಣೆಯಾಗಿದೆ.
ಹಣ ಹೈದರಾಬಾದ್ಗೆ ವರ್ಗಾವಣೆ ಎಂಬ ಮಾಹಿತಿ ತೊರೆತ ಹಿನ್ನೆಲೆಯಲ್ಲಿ ಎಸ್ಐಟಿಯ ಒಂದು ತಂಡ ಹೈದರಾಬಾದ್ಗೆ ತೆರಳಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ ನಮೂದಿಸಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇತ್ತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಸಿಬಿಐ ಪ್ರಾದೇಶಿಕ ಕಚೇರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ನಿಗಮದ ಇಬ್ಬರು ಅಧಿಕಾರಿಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ನಿಗಮದಲ್ಲಿ ಅವ್ಯವಹಾರ ನಡೆದ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ಒಪ್ಪಿಕೊಂಡಿದ್ದಾರೆ.