ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಿಗಮದ 10 ವರ್ಷದ ಆಯವ್ಯಯ ನೀಡುವಂತೆ ಸರ್ಕಾರಕ್ಕೆ ಪತ್ರ

| Updated By: ವಿವೇಕ ಬಿರಾದಾರ

Updated on: Jul 03, 2024 | 3:02 PM

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಬೆಳಕಿಗೆ ಬಂದ ಬೆನ್ನಲ್ಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಪರಿಶಿಷ್ಟ ಪಂಗಡಗಳ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಿಗಮದ 10 ವರ್ಷದ ಆಯವ್ಯಯ ನೀಡುವಂತೆ ಮನವಿ ಮಾಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಿಗಮದ 10 ವರ್ಷದ ಆಯವ್ಯಯ ನೀಡುವಂತೆ ಸರ್ಕಾರಕ್ಕೆ ಪತ್ರ
ಬಸನಗೌಡ ದದ್ದಲ್, ವಾಲ್ಮೀಕಿ ಅಭಿವೃದ್ಧಿ ನಿಗಮ
Follow us on

ಬೆಂಗಳೂರು, ಜುಲೈ 03: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) ಬಹು ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ನಿಗಮದ ಹತ್ತು ವರ್ಷದ ಆಯವ್ಯಯ ಕುರಿತು ಸಂಪೂರ್ಣ ವರದಿ ನೀಡುವಂತೆ ಪರಿಶಿಷ್ಟ ಪಂಗಡಗಳ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ‌ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basangowda Daddal) ಪತ್ರ ಬರೆದು ಮನವಿ ಮಾಡಿದ್ದಾರೆ.

ಹತ್ತು ವರ್ಷದಲ್ಲಿ ನಿಗಮಕ್ಕೆ ಬಂದಿರುವ ಅನುದಾನ, ಅನುದಾನದಿಂದ ಯೋಜನೆಗಳ ಮೂಲಕ ಹಂಚಿಕೆ ಆಗಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಗರಣ ನಡೆದಿದೆ ಎಂಬ ಸುದ್ದಿಗೆ ದಾಖಲೆ ಸಂಗ್ರಹಿಸಲು ಸರ್ಕಾರ ಮುಂದಾಗಿದೆ.

ಈ ಬಗ್ಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿ, 26ನೇ ತಾರೀಕು ಇಲಾಖೆಯ ಎಸಿಎಸ್​ ಮಂಜುನಾಥ್ ಪ್ರಸಾದ್ ಅವರ ಜೊತೆ ಸಭೆ ನಡೆಸಿದೆ. ಕಳೆದ 10 ವರ್ಷಗಳಲ್ಲಿ ನಿಗಮಕ್ಕೆ ಎಷ್ಟು ಅನುದಾನ ಬಂದಿದೆ, ಯಾವ್ಯಾವ ಯೋಜನೆಗೆ ಬಳಕೆಯಾಗಿದೆ? 30 ಜಿಲ್ಲೆಗಳ ಅನುದಾನ ಕುರಿತು ಮಾಹಿತಿ ಕೇಳಿದ್ದೇನೆ. ಸಂಪೂರ್ಣವಾಗಿ ಬಂದಿರುವ ಅನುದಾನ, ಖರ್ಚಾಗಿರುವ ವಿವರ ಎಲ್ಲವನ್ನೂ ಕೂಡ ಒಂದು ಬುಕ್‌ಲೆಟ್ ಮಾಡುವ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸಿಬಿಐ ಕೂಡ ಕೆಲ ದಾಖಲೆಗಳನ್ನು ಪಡೆದಿದೆ ಎಂದು ಹೇಳಿದರು.

ಈಗ ಆಗಿರುವ ಘಟನೆ ರೀತಿಯಲ್ಲೇ ಈ ಹಿಂದೆಯೂ ಸಂಭವಿಸಿದೆಯಾ ಎಂಬುವುದನ್ನು ತಿಳಿದುಕೊಳ್ಳಬೇಕು. ಹೀಗಾಗಿ 10 ವರ್ಷಗಳ ವರದಿ ಮತ್ತು ಅದರ ಮಾಹಿತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಎಸ್ಐಟಿ ಅಧಿಕಾರಿಗಳು ತೀವ್ರಗತಿಯಲ್ಲಿ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಸಿಬಿಐ ಕೂಡ ತನಿಖೆಗಾಗಿ ದಾಖಲೆ ಸಂಗ್ರಹಿಸುತ್ತಿದೆ. ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ಕೊಟ್ಟರೂ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಅದಕ್ಕೆ ಉತ್ತರ ಕೊಡುವ ಕೆಲಸ ಮಾಡುತ್ತೇನೆ ಎಂದರು.

ಹಣ ವರ್ಗಾವಣೆ ಬಗ್ಗೆ ಡಿಸೆಂಬರ್​​ನಲ್ಲಿ ಸಭೆ ಮಾಡಿದ್ದಾರೆ, ಪಿಎಗಳಿಗೆ ದುಡ್ಡು ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ಬರುತ್ತಿದೆ. ಖಂಡಿತವಾಗಿ ಯಾರೇ ಇರಲಿ, ಯಾರದ್ದೇ ಪಿಎಗಳಿರಲಿ, ಎಲ್ಲರನ್ನೂ ವಿಚಾರಣೆಗೆ ತನಿಖಾ ಸಂಸ್ಥೆಗಳು ನೋಟಿಸ್ ಕೊಟ್ಟು ಕರೆಯಲಿ. ಆ ರೀತಿ ಇದ್ದರೆ ಎಲ್ಲರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯತ್ತಾರೆ. ನಾವೆಲ್ಲರೂ ವಿಚಾರಣೆಗೆ ಸಹಕರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಹವಾಲಾ ಲಿಂಕ್! ಎಸ್​ಐಟಿ ತನಿಖೆಯಲ್ಲಿ ಬಯಲು

ನಾನು ನಿಗಮದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು ಬಹಳ ಕಡಿಮೆ ಅವಧಿ. ನಾನು ಅಧಿಕಾರ ತೆಗೆದುಕೊಳ್ಳುತ್ತಿದ್ದ ಹಾಗೆ ನೀತಿ ಸಂಹಿತೆ ಜಾರಿಗೆ ಬಂತು. ಇಲ್ಲಿಯವರೆಗೂ ಎಲ್ಲ ಅಕೌಂಟುಗಳನ್ನ ಫ್ರೀಜ್ ಮಾಡಿದ್ದಾರೆ. ನಾವು ಯಾವುದೇ ಚಟುವಟಿಕೆಗಳನ್ನ ಈಗ ಮಾಡುತ್ತಿಲ್ಲ. ತನಿಖಾ ಸಂಸ್ಥೆ ಸಂಪೂರ್ಣ ಸತ್ಯವನ್ನ ಹೊರಗೆ ತೆಗೆಯುವ ತನಕ ಮುಂದಿನ ಚಟುವಟಿಕೆಗಳು ನಡೆಯುವುದಿಲ್ಲ. ನಾನು ಈಗ ಅಧ್ಯಕ್ಷನಾಗಿ ಅಲ್ಲಿ ಏನು ಚಟುವಟಿಕೆಗಳನ್ನು ಮಾಡಲು ಆಗಲ್ಲ ಎಂದು ತಿಳಿಸಿದರು.

ಸಿಬಿಐ ದಾಖಲೆಗಳನ್ನ ಸಂಗ್ರಹಿಸಿದೆ. ನನ್ನಿಂದ ಯಾವುದೇ ಅಡ್ಡಿ ತನಿಖಾ ಸಂಸ್ಥೆಗಳಿಗೆ ಆಗಲ್ಲ. ಮೂರು ತನಿಖಾ ಸಂಸ್ಥೆಗಳು ಉನ್ನತ ಸಂಸ್ಥೆಗಳು. ಹೀಗಾಗಿ ಇದನ್ನು ಯಾರು ಕೂಡ ಮುಚ್ಚಿಡಲು ಸಾಧ್ಯವಿಲ್ಲ ಸತ್ಯ ಹೊರಗೆ ಬರುತ್ತೆ. ಪರಿಶಿಷ್ಟ ಪಂಗಡಗಳಿಗೆ ಸೇರಿದಂತಹ ಹಣ ಇದು ಒಂದು ರೀತಿ ಬೆಂಕಿ ಇದ್ದ ಹಾಗೆ, ಪರಿಶಿಷ್ಟ ಪಂಗಡದ ಹಣ ಯಾರೇ ತಿಂದಿದ್ದರು ಅದನ್ನು ಕಕ್ಕಿಸುವ ಕೆಲಸ ಆಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ