ವಾಲ್ಮೀಕಿ ನಿಗಮದ ಹಗರಣಕ್ಕೆ ಹವಾಲಾ ಲಿಂಕ್! ಎಸ್ಐಟಿ ತನಿಖೆಯಲ್ಲಿ ಬಯಲು
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹು ಕೋಟಿ ರೂ. ಹಗರಣ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಹಿರಂಗವಾಗುತ್ತಿವೆ. ಇದೀಗ ಅಕ್ರಮ ಹಣ ವರ್ಗಾವಣೆಗೆ ಹವಾಲಾ ಲಿಂಕ್ ಇರುವುದು ಪತ್ತೆಯಾಗಿದೆ.
ಬೆಂಗಳೂರು, ಜೂನ್ 30: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ (Valmiki Scheduled Tribes Development Corporation) ವರ್ಗಾವಣೆಯಾಗಿದ್ದ ಬಹುಕೋಟಿ ಹಣ ಹವಾಲಾ (Havala) ಮಾರ್ಗದ ಮೂಲಕ ಹೈದರಾಬಾದ್ ಗ್ಯಾಂಗ್ ಕೈಸೇರಿದೆ ಎಂಬ ಮಾಹಿತಿ ಎಸ್ಐಟಿ (SIT) ತನಿಖೆ ವೇಳೆ ತಿಳಿದು ಬಂದಿದೆ.
ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಂಗಳೂರಿನ ತೇಜ ತಮ್ಮಯ್ಯ, ಹೈದರಾಬಾದ್ ನ ಚಂದ್ರಮೋಹನ್, ಶ್ರೀನಿವಾದ್, ಜಗದೀಶ್ ವಿಚಾರಣೆ ವೇಳೆ ನಿಗಮದ ಹಣ ಹವಾಲಾ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೀಗ ಎಸ್ಐಟಿ ಅಧಿಕಾರಿಗಳು ಹವಾಲಾ ದಂಧೆಕೋರ ಕಾರ್ತೀ ಶ್ರೀನಿವಾಸ್ಗಾಗಿ ಹುಡುಕಾಟ ನಡೆಸಿದ್ದಾರೆ.
ಹವಾಲಾ ದಂಧೆ ಮಾಹಿತಿ ಆಧರಿಸಿ ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಪ್ರವೇಶಿಸಿದೆ. ಈ ಅಕ್ರಮ ಹಣದ ವಿಚಾರವಾಗಿ ಇಡಿ ಅಧಿಕಾರಿಗಳಿಗೆ ಎಸ್ಐಟಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದು, ಅದರಂತೆ ಪ್ರತ್ಯೇಕವಾಗಿ ಇಡಿ ತನಿಖೆ ಆರಂಭಿಸಿದೆ.
ಇದನ್ನೂ ಓದಿ: ಬಾರ್, ಚಿನ್ನದಂಗಡಿಯ ಖಾತೆಗಳಿಗೆ ವರ್ಗವಾಗಿತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ
ಬಾರ್ ಅಂಗಡಿ ಖಾತೆಗಳಿಂದ ಹಣ ವಿತ್ ಡ್ರಾ
ವಾಲ್ಮಿಕಿ ಅಭಿವೃದ್ಧಿ ನಿಗಮದ ಹಣ ಬಾರ್, ಚಿನ್ನದ ಅಂಗಡಿ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಳಿಕ ಈ ಹಣವನ್ನು ಹೈದರಾಬಾದ್ ಗ್ಯಾಂಗ್ ಬಾರ್ ಅಂಗಡಿ ಖಾತೆಗಳಿಂದ ವಿತ್ ಡ್ರಾ ಮಾಡಿಕೊಂಡಿದೆ. ಬಾರ್ ಮತ್ತು ಚಿನ್ನದ ಅಂಗಡಿಗಳಿಗೆ ಬರೊಬ್ಬರಿ 10 ಕೋಟಿ ರೂ. ವರ್ಗಾವಣೆಯಾಗಿದೆ. ವರ್ಗಾವಣೆಯಾಗಿದ್ದ ಹಣವನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 193 ಬ್ಯಾಂಕ್ ಖಾತೆಗಳಿಂದ 10 ಕೋಟಿ ವಶಕ್ಕೆ ಪಡೆದಿದ್ದರು. ಈ ಮೂಲಕ ಇದುವರೆಗೆ ಒಟ್ಟು 28 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್ ನಂಟು
ಇತ್ತೀಚೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಹಿಂದೆ ಹನಿಟ್ರ್ಯಾಪ್ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಆಂಧ್ರಪ್ರದೇಶದ ಸತ್ಯನಾರಾಯಣ ವರ್ಮ ಎಂಬಾತ ಈ ಪ್ರಕರಣದ ಸೂತ್ರಧಾರ. ವರ್ಮ ಒಬ್ಬ ವೃತ್ತಿಪರ ಕೇಡಿ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈತನಿಗೆ ನಮ್ಮ ರಾಜ್ಯದ ಸಚಿವರು, ಶಾಸಕರು, ಅಧಿಕಾರಿಗಳು ಸಹಕರಿಸಿದ್ದಾರೆ. ನಿಗಮಕ್ಕೆ ಸೇರಿದ 187 ಕೋಟಿ ರೂ.ಗಳನ್ನು ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಚುನಾವಣೆಗಾಗಿ ಬಳಕೆ ಮಾಡಲಾಗಿದೆ ಎಂದು ಸಿ,ಟಿ.ರವಿ ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ