ನಾಳೆ ಜಾಲಹಳ್ಳಿಯಲ್ಲಿ ಅವತರಿಸಲಿದ್ದಾರೆ ವೀರ ಮದಕರಿ ನಾಯಕ; ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ಧತೆ

|

Updated on: Mar 13, 2021 | 6:00 PM

27 ಡಿಸೆಂಬರ್ 2020ರಂದು ರಾಜ ವೀರ ಮದಕರಿ ನಾಯಕರ ಪ್ರತಿಮೆ ಅಡಿಪಾಯದ ಕಾರ್ಯಕ್ರಮವು ಊರಿನ ಸಮ್ಮುಖದಲ್ಲಿ ನಡೆಯಿತು. ಈಗ ಇದೇ 14 ಮಾರ್ಚ್ 2021ರಂದು ನಮ್ಮ ಕನ್ನಡದ ಹೆಮ್ಮೆ , ಕನ್ನಡಿಗರ ಹಿರಿಮೆ ರಾಜ ವೀರ ಮದಕರಿ ನಾಯಕ ಅವರ ಪ್ರತಿಮೆ ಅನಾವರಣಗೊಳ್ಳುತ್ತಿದೆ.

ನಾಳೆ ಜಾಲಹಳ್ಳಿಯಲ್ಲಿ ಅವತರಿಸಲಿದ್ದಾರೆ ವೀರ ಮದಕರಿ ನಾಯಕ; ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ಧತೆ
ವೀರ ಮದಕರಿ ನಾಯಕ
Follow us on

ವೀರ ಮದಕರಿ ನಾಯಕ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಚಿತ್ರದುರ್ಗದ ಕೋಟೆಯನ್ನಾಳಿದ ಧೀರ ಈತ. ಈ ವೀರನ ನೆನಪಿಗಾಗಿಯೇ ಜಾಲಹಳ್ಳಿಯಲ್ಲಿ ಮದಕರಿ ನಾಯಕನ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಆ ಮೂಲಕ ವೀರ ಮದಕರಿನಾಯಕ ನಮ್ಮ ನಡುವೆ ಇನ್ನು ಕೂಡ ಜೀವಂತವಾಗಿದ್ದಾರೆ ಮತ್ತು ಹಲವರಿಗೆ ಸ್ಫೂರ್ತಿದಾಯಕರಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ವೀರ ಮದಕರಿ ನಾಯಕನ ಇತಿಹಾಸ:
ರಾಜ ವೀರ ಮದಕರಿ ಹುಟ್ಟಿದ್ದು 13 ಅಕ್ಟೋಬರ್ 1742ರಂದು. ಒಂದನೇ ಭರ್ಮಪ್ಪ ನಾಯಕನ ಪುತ್ರರಾದ ಇವರು ಈಗಿನ ಚಿತ್ರದುರ್ಗ ತಾಲೂಕಿನ ಹೊಸದುರ್ಗ ಗ್ರಾಮದ ಜನಕಲ್​ ಎಂಬ ಸ್ಥಳದಲ್ಲಿ, ವಾಲ್ಮೀಕಿ ಸಮುದಾಯದಲ್ಲಿ ಜನಿಸಿದರು.

ಚಿತ್ರದುರ್ಗದ ಇತಿಹಾಸದಲ್ಲಿ ಮದಕರಿ ನಾಯಕ ಎಂದೆಂದಿಗೂ ಅಜರಾಮರ ಏಕೆಂದರೆ ಇವರ ಶೌರ್ಯ, ಧೈರ್ಯ, ಸಾಹಸ ಅಂತಹದ್ದು, ಚಿತ್ರದುರ್ಗ ನಾಯಕರ ಅಳ್ವಿಕೆಯ ಕೊನೆಯ ಅರಸರಾಗಿದ್ದ ಇವರನ್ನು ಗಂಡುಗಲಿ ಮದಕರಿ ನಾಯಕ, ರಾಜ ವೀರ ಮದಕರಿ ನಾಯಕ, ಒಂಟಿ ಸಲಗ ಮದಕರಿ ನಾಯಕ, ದುರ್ಗದ ಹುಲಿ ಎಂದು ಹಲವಾರು ಬಿರುದುಗಳಿಂದ ಜನರು ಕರೆಯುತ್ತಿದ್ದರು.

ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಕೇವಲ 12 ವರ್ಷದಲ್ಲಿಯೇ ಚಿತ್ರದುರ್ಗ ಸಿಂಹಾಸನವನ್ನು ಅಲಂಕರಿಸಿದ ಈ ಧೀರ ನಂತರ ಮಾಡಿದ್ದೆಲ್ಲ ಇತಿಹಾಸ. ಚಿತ್ರದುರ್ಗ ಸಿಂಹಾಸನದ ಮೇಲೆ ಅದೇಷ್ಟೋ ದುಷ್ಕರ್ಮಿಗಳ ಕಣ್ಣು ಸದಾ ಇರುತ್ತಿತ್ತು. ಹಲವಾರು ಪಿತೂರಿಗಳನ್ನು ಮಾಡುತ್ತಿದ್ದ ಅದೇಷ್ಟೋ ದುಷ್ಟ ಸೈನ್ಯಗಳ ವಿರುದ್ಧ ಹೋರಾಡಿ ಶತ್ರುಗಳ ರುಂಢವನ್ನು ಚೆಂಡಾಡಿದ ಈ ರಾಜ ವೀರ ಮದಕರಿ ನಾಯಕನ ಸಾಹಸಕ್ಕೆ ಇದು ಸಾಕ್ಷಿ.

ಜಾಲಹಳ್ಳಿಯಲ್ಲಿ ವೀರ ಮದಕರಿ ನಾಯಕನ ಪ್ರತಿಮೆ ಅನಾವರಣ

ದಕ್ಷಿಣದಲ್ಲಿ ಒಂದು ಬಲಶಾಲಿ ಸೈನ್ಯವಾಗಿ ರೂಪುಗೊಂಡ ಕೆಚ್ಚೆದೆಯ ಸೈನ್ಯವದು. ಇದಕ್ಕೆ ಒಂದು ಉದಾಹರಣೆ ವೀರ ಮಹಿಳೆ ಒನಕೆ ಓಬವ್ವ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ನಾಯಕ ವಂಶಸ್ಥರು ಬೇನಗೊಂಡ ಎಂಬ ಊರಿಗೆ ಬಂದು ನೆಲೆಸುತ್ತಾರೆ. ಪುನಃ ಸಾಮ್ರಾಜ್ಯದ ಮರುಸ್ಥಾಪನೆಗಾಗಿ ವಿಜಯನಗರ ಸಾಮ್ರಾಜ್ಯದ ದತ್ತು ಪುತ್ರನೆಂದೆ ಬಿಂಬಿತವಾಗಿದ್ದ ಹೆಚ್​. ಎಂ ನಾಯಕ ಬಹಳಷ್ಟು ಹೋರಾಡುತ್ತಾರೆ. ಇದಕ್ಕೆ ಬೆಂಗಾವಲಾಗಿನಿಂತಿದ್ದು ನಾಯಕ ವಂಶಸ್ಥರು.

ಜಾಲಹಳ್ಳಿ ನಾಯಕರ ಕೈ ಸೇರಿದ್ದು ಹೇಗೆ?
ದುರಾದೃಷ್ಟವಶಾತ್ ಇವರ ಎಲ್ಲಾ ಪ್ರಯತ್ನಗಳು ವಿಫಲವಾದ ಕಾರಣ ಇವರೆಲ್ಲರೂ ಮೈಸೂರು ಮಹಾರಾಜರ ಸೈನ್ಯಕ್ಕೆ ಸೇರಿಕೊಂಡರು. ಆಗ ಕೊಡಗಿನ ಯುದ್ಧದಲ್ಲಿ ಸಹಾಯ ಮಾಡಿದಕ್ಕಾಗಿ ಮೈಸೂರು ಮಹಾರಾಜರು ಮನಸೂರೆಗೊಂಡು ದೊಡ್ಡಬಳ್ಳಾಪುರ ಜಿಲ್ಲೆಯ ತಿರುನಗೊಂಡನ ಹಳ್ಳಿಯಲ್ಲಿ ವ್ಯವಸಾಯ ಮಾಡಲು ಭೂಮಿಯನ್ನು ದಾನ ಮಾಡುತ್ತಾರೆ. ಆದರೆ ಆ ಭೂಮಿಯೂ ಫಲವತ್ತಾಗಿರದ ಕಾರಣ ಸರಿಯಾದ ಬೆಳೆ ಬರುವುದಿಲ್ಲ. ಈ ಸುದ್ದಿ ಮೈಸೂರು ಮಹಾರಾಜರಿಗೆ ಗೊತ್ತಾದಾಗ, ಅವರು ಮತ್ತೊಂದು ಕಡೆ ಸುಮಾರು 750ಎಕರೆಯಷ್ಟು ಭೂಮಿಯನ್ನು ನೀಡುತ್ತಾರೆ. ಇದಕ್ಕಾಗಿ ನಾಯಕರ ವಂಶದಲ್ಲಿ ಹುಟ್ಟುವ ಎಲ್ಲಾ ಗಂಡು ಮಕ್ಕಳನ್ನು ಮೈಸೂರು ಮಹಾರಾಜರ ಸೈನ್ಯಕ್ಕೆ ಸೇರಿಸಬೇಕೆಂದು ಒಂದು ಒಪ್ಪಂದ ಕರಾರನ್ನು ಮಾಡಿಕೊಳ್ಳುತ್ತಾರೆ. ಆ 750 ಎಕರೆ ಭೂಮಿಯೇ ಇಂದಿನ ಜಾಲಹಳ್ಳಿ.

ಶೌರ್ಯ ಧೈರ್ಯಕ್ಕೆ ಇನ್ನೊಂದು ಹೆಸರು ವೀರ ಮದಕರಿ ನಾಯಕ

ಜಾಲಹಳ್ಳಿ ಎಂಬ ಹೆಸರಿನ ಹಿಂದಿನ ಕಥೆ!
ಜಾಲಹಳ್ಳಿ ಈ ಹೆಸರು ಹೇಗೆ ಬಂತು ಎಂದರೆ ದೊಡ್ಡಬಳ್ಳಾಪುರದಿಂದ ನಾಯಕರು ಕುದುರೆಯನ್ನು ಏರಿ ಈ ಗ್ರಾಮಕ್ಕೆ ಬರುತ್ತಾರೆ. ತುಂಬಾ ದಣಿವಾದ ಕಾರಣ ಆ ರಾತ್ರಿ ಅಲ್ಲೇ ಒಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆಯುತ್ತಾರೆ. ಆ ಮರವೇ ಜಾಲಿ ಮರ. ತುಂಬಾ ಆನಂದದ ಅನುಭವವನ್ನು ನೀಡಿದ ತಮಗೆ ಆಸರೆ ನೀಡಿದ ಮರವನ್ನು ಕಂಡು ಸಂತಸಗೊಂಡರು. ಇನ್ನು ಅಲ್ಲಿ ಸುತ್ತಮುತ್ತಲೂ ಜಾಲಿ ಮರವನ್ನೇ ತುಂಬಿಕೊಂಡಿತ್ತು ಇದನ್ನೇಲ್ಲಾ ನೋಡಿ ಅವರು ಸಂತೋಷಗೊಂಡು ಆ ಗ್ರಾಮವನ್ನು ಜಾಲಹಳ್ಳಿ ಎಂದು ನಾಮಕರಣ ಮಾಡಿದರು.

ಹೆಚ್​ಎಂಟಿ ಸಂಸ್ಥೆ:
ಈ ಊರಿನಲ್ಲಿ ಹುಟ್ಟಿದ್ದವರು ನಿಜಕ್ಕೂ ಪುಣ್ಯವಂತರು ಏಕೆಂದರೆ ಇಲ್ಲಿನ ಗ್ರಾಮ ದೇವತೆಯಾದ ಮುತ್ಯಾಲಮ್ಮ ತಾಯಿ ಮತ್ತು ಪವನಸುತ ಹನುಮಂತನ ಆಶೀರ್ವಾದ ಸದಾ ಈ ಊರಿನ ಮೇಲೆ ಹಾಗೂ ಈ ಗ್ರಾಮದ ಜನರ ಮೇಲೆ ಇರುತ್ತದೆ. ಬಹುಶಃ ಅದಕ್ಕೆ ಏನೋ ಭಾರತದ ಪ್ರಖ್ಯಾತ ಸಂಸ್ಥೆಗಳು ತಲೆ ಎತ್ತಿದ್ದು, ಈ ನೆಲದಲ್ಲಿಯೇ. ಈಗಲೂ ಜನ ಸಾಮಾನ್ಯರ ಬಾಯಿಯಲ್ಲಿ ಕೇಳಿ ಬರುವ ವಾಕ್ಯ ಅದೇ ಹೆಚ್ಎಂಟಿ ಸಮಯ ಅಥವಾ ಹೆಚ್ಎಂಟಿ ಟೈಮ್. ಈ ವಾಕ್ಯ ಅದೆಷ್ಟು ಪ್ರಸಿದ್ಧಿ ಎಂದರೆ ಸಮಯದ ನಿಖರತೆಗೆ ಹೆಸರುವಾಸಿ. ಹೆಚ್​ಎಂಟಿ ಟೈಮ್​ ಎಂದರೆ ಅದು ಸರಿಯಾದ ಸಮಯ ಮತ್ತು ನಿಖರವಾದ ಸಮಯ. ದೇಶದ ವೃದ್ಧಿಗಾಗಿ ಮತ್ತು ಜಾಲಹಳ್ಳಿಯ ಅಭಿವೃದ್ಧಿಗಾಗಿ ಸ್ಥಳೀಯರು ಹೆಚ್​ಎಂಟಿ ಸಂಸ್ಥೆಗೆ ತಮ್ಮ ಜಮೀನನ್ನು ನೀಡಿದರು, ಅದಕ್ಕಾಗಿ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸವನ್ನು ನೀಡಲಾಯಿತು.

ವೀರ ಮದಕರಿ ನಾಯಕ

ಬಿಇಎಲ್ (ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್):
ಒಂದು ಕಡೆ ಹೆಚ್​ಎಂಟಿ ಸಾಧನೆ ನೋಡಿ ನಾವು ಬೆರಗಾದರೆ ಮತ್ತೊಂದು ಕಡೆ ನಮಗೆ ಮತ್ತಷ್ಟು ಗೌರವ ತಂದು ಕೊಡುವುದು ಬಿಇಎಲ್. ಅದೇ ಪ್ರತಿಷ್ಟೀತ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್. 1954ರಲ್ಲಿ ಪ್ರಾರಂಭವಾದ ಈ ಸಂಸ್ಥೆಯೂ ನಮ್ಮ ಭಾರತ ದೇಶದ ಹೆಮ್ಮೆ ಮತ್ತು ಹಿರಿಮೆ. ಭಾರತ ಸರ್ಕಾರದ ಅಡಿಯಲ್ಲಿ ಇರುವ ಈ ಸಂಸ್ಥೆ ದೇಶದ ರಕ್ಷಣಾ ಇಲಾಖೆಗೆ ಒಂದು ಆಧಾರ ಸ್ತಂಭ ಎಂದರೆ ಅದು ಅತಿಶಯೋಕ್ತಿ ಅಲ್ಲ. ಸಮಗ್ರ ಭಾರತದ ರಕ್ಷಣೆಗೆ ಬಿಇಎಲ್​ನಲ್ಲಿ ತಯಾರಾಗುವ ಹಲವಾರು ಸುಸಜ್ಜಿತ ಉಪಕರಣಗಳು ಮತ್ತು ಸಲಕರಣೆಗಳು ಬೆನ್ನೆಲುಬಾಗಿದೆ. ಇಂತಹ ಬೃಹತ್​ ಸಾಧನೆಯನ್ನು ಮಾಡಿರುವಂತಹ ಬಿಇಎಲ್​ ಸಂಸ್ಥೆಯೂ ಜಾಲಹಳ್ಳಿಯ ನೆಲದಲ್ಲಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

​3ನೇ ಡಿಸೆಂಬರ್ 2000ರಂದು ಪರಮಪೂಜ್ಯ ಶ್ರೀ ಶ್ರೀ ಡಾ. ವಾಲ್ಮೀಕಿ ಸತ್ಯಾನಂದಪುರಿ ಮಹಾಸ್ವಾಮಿ ಅವರ ಆಶೀರ್ವಚನದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಬಿ.ಆರ್.ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಮಾನ್ಯ ಸಚಿವರಾದ ಉತ್ತರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್. ಅಶೋಕ್ ಅವರು ರಾಜ ವೀರ ಮದಕರಿ ನಾಯಕ ವೃತವನ್ನು ಮತ್ತು ಅದರ ನಾಮಫಲಕವನ್ನು ಉದ್ಘಾಟಿಸಿದರು. ಹೀಗೆ ಯಾವುದೇ ಕುಂದುಕೊರತೆ ಇಲ್ಲದೇ ಜಾಲಹಳ್ಳಿಯೂ ಬಹಳ ವೇಗವಾಗಿ ಬೆಳೆಯುತ್ತಿದೆ ಹಾಗೂ ಹಲವಾರು ವಿಶೇಷತೆ ಮತ್ತು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ.

ಇಂದಿಗೂ ಕೂಡ ಸುಮಾರು 500 ನಾಯಕ ಸಮುದಾಯದ ಕುಟುಂಬಗಳು ಜಾಲಹಳ್ಳಿಯಲ್ಲಿ ವಾಸಿಸುತ್ತಿದ್ದು, ವೀರ ಮದಕರಿ ನಾಯಕ ಕೂಡ ಈ ಸಮುದಾಯಕ್ಕೆ ಸೇರಿರುವುದರಿಂದ ಇಲ್ಲಿ ತಮ್ಮ ನಾಯಕನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಜನರು ಉತ್ಸುಕರಾಗಿದ್ದಾರೆ.

ವೀರ ಮದಕರಿ ನಾಯಕನ ಪ್ರತಿಮೆ ಅನಾವರಣ:
ಈಗ ಅದೇ ಉತ್ಸಾಹದಲ್ಲಿ ಜಾಲಹಳ್ಳಿ ಮತ್ತೊಂದು ಅದ್ಭುತವನ್ನು ಕಾಣಲು ಸಜ್ಜಾಗುತ್ತಿದೆ. ಅದೇನೆಂದರೆ 27 ಡಿಸೆಂಬರ್ 2020ರಂದು ರಾಜ ವೀರ ಮದಕರಿ ನಾಯಕರ ಪ್ರತಿಮೆ ಅಡಿಪಾಯದ ಕಾರ್ಯಕ್ರಮವು ಊರಿನ ಸಮ್ಮುಖದಲ್ಲಿ ನಡೆಯಿತು. ಈಗ ಇದೇ 14 ಮಾರ್ಚ್ 2021ರಂದು ನಮ್ಮ ಕನ್ನಡದ ಹೆಮ್ಮೆ , ಕನ್ನಡಿಗರ ಹಿರಿಮೆ ರಾಜ ವೀರ ಮದಕರಿ ನಾಯಕ ಅವರ ಪ್ರತಿಮೆ ಅನಾವರಣಗೊಳ್ಳುತ್ತದೆ. ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮಲು, ಪ್ರಸನ್ನಾನಂದ ವಾಲ್ಮೀಕಿ ಸ್ವಾಮಿಜಿ ಮತ್ತು ಸಂಜಯಕುಮಾರ ವಾಲ್ಮೀಕಿ ಸ್ವಾಮೀಜಿಗಳು  ಈ ಪ್ರತಿಮೆಯ ಅನಾವರಣ ನೆರವೇರಿಸಲಿದ್ದಾರೆ. ಸಚಿವರಾದ ಆರ್. ಅಶೋಕ್ , ಶಾಸಕರಾದ ಮುನಿರತ್ನ, ಬಿಬಿಎಂಪಿ ಕಾರ್ಪೊರೆಟರ್ಸ್​ಗಳಾದ ನಾರಾಯಣ ಸ್ವಾಮಿ, ಶ್ರೀನಿವಾಸಮೂರ್ತಿ , ಮಂಜುಳಾ ನಂಜಮರಿ ಇವರೆಲ್ಲರ ಬೆಂಬಲದಿಂದ ಹಾಗೂ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ಆಚರಿಸಲಾಗುತ್ತಿದೆ. ಒಟ್ಟಾರೆ ಜಾಲಹಳ್ಳಿ ಇಡಿ ಜನಾಂಗದ ಒಗ್ಗಟ್ಟಿನ ಸಂಕೇತ.

ಇದನ್ನೂ ಓದಿ: ಅನಾವರಣಕ್ಕೂ ಮುನ್ನ.. ಬಸವಣ್ಣ ಪ್ರತಿಮೆ ಸುತ್ತ ಶುರುವಾಯ್ತು ಭಾಷಾ ಸಮರ

Published On - 6:00 pm, Sat, 13 March 21