ಬೆಂಗಳೂರು: ಕೆಲ ತಿಂಗಳುಗಳಿಂದ ಗಗನಕ್ಕೇರಿದ್ದ ತರಕಾರಿ ಬೆಲೆ (Vegetable Price) ಈಗ ಪಾತಾಳಕ್ಕೆ ಕುಸಿದಿದೆ. ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ (Rain) ರೈತರು ಬೆಳೆದ ಬೆಳೆ ನಾಶವಾಗಿತ್ತು. ತರಕಾರಿ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿತ್ತು. ಗ್ರಾಹಕರು ಮಾರುಕಟ್ಟೆಗೆ ಬಂದು ತರಕಾರಿ ಬೆಲೆ ಕೇಳಿ ಖರೀದಿಸದೆ ವಾಪಾಸ್ ಹೋಗಿದ್ದು ಇದೆ. ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಅಕ್ಟೋಬರ್ ತಿಂಗಳಿನಿಂದ ಜನವರಿವರೆಗೆ ತರಕಾರಿ ಬೆಲೆ ಹೆಚ್ಚಾಗಿತ್ತು. ಅತೀ ಹೆಚ್ಚು ತರಕಾರಿ ಬೆಳೆಯುವ ದಕ್ಷಿಣ ಒಳನಾಡಿನಲ್ಲೇ ಸುರಿದ ಅಕಾಲಿಕ ಮಳೆಯಿಂದ ದರ ಹೆಚ್ಚಳಕ್ಕೆ ಕಾರಣ ಆಗಿತ್ತು.
ಅಕ್ಟೋಬರ್ ತಿಂಗಳಲ್ಲಿ 138 ಮಿ.ಮೀ ಮಳೆ ಆಗಬೇಕಿತ್ತು. ಆದರೆ 257 ಮಿ.ಮೀ ಅಕಾಲಿಕ ಮಳೆಯಾಗಿತ್ತು. ನವೆಂಬರ್ ತಿಂಗಳಿನಲ್ಲಿ 52 ಮಿ.ಮೀ ಮಳೆ ಆಗಬೇಕಿತ್ತು. ಆದರೆ ನವೆಂಬರ್ನಲ್ಲಿ 203 ಮಿ.ಮೀ ಮಳೆ ಆಗಿದೆ. ಅಕ್ಟೋಬರ್ನಲ್ಲಿ ಶೇ.87 ರಷ್ಟು ಅಧಿಕ ಮಳೆಯಾಗಿತ್ತು. ಅಲ್ಲದೆ ನವೆಂಬರ್ನಲ್ಲಿ ಶೇ.293 ರಷ್ಟು ಮಳೆಯಾಗಿತ್ತು. ನಿರಂತರವಾಗಿ ಸುರಿದ ಮಳೆಯಿಂದ 3 ತಿಂಗಳು ತರಕಾರಿ ಬೆಲೆ ಇಳಿಕೆ ಆಗಿರಲಿಲ್ಲ. ಆದರೆ 3 ತಿಂಗಳ ಬಳಿಕ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ.
ತರಕಾರಿ ದರ ಇಳಿದಿದ್ದಕ್ಕೆ ಗ್ರಾಹಕರಿಗೆ ಖುಷಿ ಆಗಿದೆ. ಆದರೆ ರೈತರು ಮಾತ್ರ ಕಂಗಾಲಾಗಿದ್ದಾರೆ. ಇಡೀ ರಾಜ್ಯದಲ್ಲಿ ಸುರಿದ ಮಳೆಯಿಂದ ಶೇ.80 ರಷ್ಟು ಬೆಳೆ ನಾಶವಾಗಿದೆ. ಹಿಂದಿನ ದರಕ್ಕೆ ಹೋಲಿಸಿದರೆ ಈಗ ಪ್ರತಿ ತರಕಾರಿ ಬೆಲೆಯಲ್ಲೂ ಶೇ.50 ಇಳಿಕೆಯಾಗಿದೆ. ಹೊಲಗಳಲ್ಲಿ ಬೆಳೆ ನಾಶವಾಗಿ ಇಳುವರಿ ಸಿಕ್ಕಿರಲಿಲ್ಲ. ಆದ್ರೀಗ ಬಹುತೇಕ ಎಲ್ಲ ತರಕಾರಿ ದರ ಇಳಿಕೆಯಾಗಿದೆ.
ಯಾವ ಯಾವ ತರಕಾರಿಗೆ ದರ ಎಷ್ಟಿದೆ?
ಈ ಹಿಂದೆ ಒಂದು ಕೆಜಿ ಈರುಳ್ಳಿಗೆ 90 ರೂ. ಇತ್ತು. ಇದೀಗ ಪ್ರತಿ ಕೆಜಿ ಈರುಳ್ಳಿಗೆ 30 ರೂ. ಆಗಿದೆ. ಒಂದು ಕೆಜಿಗೆ 100 ರೂ. ಇದ್ದ ಬೀನ್ಸ್ ದರ 30 ರೂ. ಗೆ ಇಳಿದಿದೆ. 90 ರೂ. ಇದ್ದ ಬದನೆಕಾಯಿ ದರ 30 ರೂ.ಗೆ ಇಳಿದಿದೆ. ಒಂದು ಕೆಜಿ ಟೊಮ್ಯಾಟೋಗೆ 100 ರೂ. ಆಗಿತ್ತು. ಆದರೆ ಈಗ ಕೇವಲ 20 ರೂ. ಆಗಿದೆ. ಬೆಂಡೆಕಾಯಿ 120 ರೂ.ಗೆ ತಲುಪಿತ್ತು. ಇವಾಗ ಕೇವಲ 40 ರೂ. ಆಗಿದೆ. 80 ರೂ. ಗೆ ದಾಟಿದ್ದ ಮೂಲಂಗಿ ದರ ಇವಾಗ 20 ರೂ. ಇದೆ. ಆಲೂಗಡ್ಡೆಗೆ ಈ ಹಿಂದೆ 60 ರೂ. ಇತ್ತು. ಈಗ 30 ರೂ. ಆಗಿದೆ.
ಸೋರೆಕಾಯಿಗೆ 40 ರೂ. ಇತ್ತು. ಇವಾಗ 30 ರೂ. ದರ ಇದೆ. 80 ರೂ. ಇದ್ದ ಬೀಟ್ ರೂಟ್ ದರ 40 ರೂ.ಗೆ ತಿಳಿದಿದೆ. 50 ರೂ. ಇದ್ದ ಎಲೆಕೋಸು ದರ ಇದೀಗ 25 ರೂ.ಗೆ ಇಳಿದಿದೆ. ಕ್ಯಾಪ್ಸಿಕಮ್ 90 ರೂ ಇತ್ತು. ಈಗ 40 ರೂ. ಆಗಿದೆ. 150 ರೂ.ಗೆ ತಲುಪಿದ್ದ ನವಿಲು ಕೋಸು 40 ರೂ. ಗೆ ಇಳಿದಿದೆ.
ಇದನ್ನೂ ಓದಿ
ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿಕೊಂಡ 9 ಕಾರ್ಮಿಕರು; ರಕ್ಷಣೆಗೆ ಎಸ್ಡಿಇಆರ್ಎಫ್ ತಂಡ ಹರಸಾಹಸ