ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ

|

Updated on: Jul 15, 2024 | 2:26 PM

ಮುಡಾ ಸೈಟ್ ಹಂಚಿಕೆ ವಿವಾದ, ವಾಲ್ಮೀಕಿ ನಿಗಮ ಹಗರಣ, ದಲಿತರ ಹಣ ಗ್ಯಾರಂಟಿಗೆ ಬಳಕೆ, ಈ ಮೂರು ಬಾಣಗಳು ಬಿಜೆಪಿಗೆ ವಿಧಾನ ಮಂಡಲ ಅಧಿವೇಶನದ ವೇಳೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಅಧಿವೇಶನದ ಮೊದಲ ದಿನವೇ ಕೇಸರಿ ಕಲಿಗಳು ಘರ್ಜಿಸಿದ್ದಾರೆ. ಹಗರಣಗಳನ್ನು ಖಂಡಿಸಿ ಶಾಸಕರ ಭವನದ ವಾಲ್ಮೀಕಿ ಪ್ರತಿಮೆಯಿಂದ ಕಾಲ್ನಡಿಗೆ ಜಾಥಾ ನಡೆಸಿದ ಬಿಜೆಪಿ ನಾಯಕರು, ವಿಧಾನಸೌಧದವರೆಗೂ ಪ್ರತಿಭಟನಾ ಱಲಿ ನಡೆಸಿದರು.

ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ
ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ
Follow us on

ಬೆಂಗಳೂರು, ಜುಲೈ 15: ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಮಗ ಹಗರಣ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಎಸ್​ಸಿ ಎಸ್​​ಟಿ ಅನುದಾನದ ಹಣ ಬಳಸಿರುವ ವಿಚಾರವನ್ನು ಮುಂದಿಟ್ಟುಕೊಂಡು ಸದನ ಆರಂಭಕ್ಕೂ ಮುನ್ನವೇ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಬಿಜೆಪಿ ನಾಯಕರು ಆಗ್ರಹಿಸಿದರು. ರಾಜ್ಯ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

ಇದೇ ವೇಳೆ ಸಿಎಂ ಸಿದ್ದರಾಮಯ್ಯಗೂ ಬಿಜೆಪಿಯ ಪ್ರತಿಭಟನೆ ಬಿಸಿ ತಟ್ಟಿತ್ತು. ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾಗಲೇ ಸಿಎಂ ಕಾರು ಆಗಮಿಸಿತ್ತು. ಈ ವೇಳೆ ಕೆಲಕಾಲ ಗೊಂದಲ ಉಂಟಾಗಿತ್ತು.

ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಕೌಂಟರ್

ಬಿಜೆಪಿ ಪ್ರತಿಭಟನೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ನಾಯಕರು, ಅವರು ಪ್ರತಿಭಟನೆ ಮಾಡಲಿ. ಸದನದೊಳಗೆ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಟ್ವೀಟ್ ಮಾಡಿರೋ ರಾಜ್ಯ ಬಿಜೆಪಿ ಘಟಕ, ವಾಲ್ಮೀಕಿ ನಿಗಮದ ಹಣ ಲಪಾಟಾಯಿಸಿ, ಬಸನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ ಎಂದು ಕುಟುಕಿತ್ತು. ವಯಸ್ಸು 52, ಕಂಡ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಕಾಲೆಳೆದಿತ್ತು.

ಬಸನಗೌಡ ದದ್ದಲ್ ಪ್ರತ್ಯಕ್ಷ

ಭಾನುವಾರ ಆಂಧ್ರಪ್ರದೇಶದತ್ತ ತೆರಳಿದ್ದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್, ಇವತ್ತು ವಿಧಾನಸೌಧದಲ್ಲಿ ಪ್ರತ್ಯಕ್ಷರಾದರು. ಕಲಾಪದಲ್ಲಿ ಭಾಗಿಯಾಗಲು ವಿಧಾನಸೌಧಕ್ಕೆ ಬಂದರು. ಸದನದಲ್ಲೇ ಮಾತನಾಡುತ್ತೇನೆ. ನನಗೆ ಯಾವ ನೋಟಿಸ್ ಬಂದಿಲ್ಲ ಎಂದರು.

ಬಿಜೆಪಿ, ಜೆಡಿಎಸ್ ರಣತಂತ್ರ

ಕಲಾಪದಲ್ಲಿ ಮುಡಾ ಮತ್ತು ವಾಲ್ಮೀಕಿ ಅಕ್ರಮವನ್ನ ಪ್ರಮುಖವಾಗಿ ಪ್ರಸ್ತಾಪಿಸಲು ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಎರಡು ವಿಷಯ ತಾರ್ಕಿಕ ಅಂತ್ಯಕ್ಕೆ ತಲುಪುವವವರೆಗೂ ಹೋರಾಟ ನಡೆಸಲು ತೀರ್ಮಾನಿಸಿವೆ. ಬಳಿಕ ಪರಿಶಿಷ್ಟರ ಹಣ ಗ್ಯಾರಂಟಿಗೆ ಬಳಕೆ ಮಾಡಿದ್ದನ್ನು ಪ್ರಸ್ತಾಪಲಿಸಲಿವೆ. ಜೊತೆಗೆ ಬೆಲೆ ಏರಿಕೆ, ಡೆಂಘೀ ನಿಯಂತ್ರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ಸೇರಿ ಮತ್ತಿತ್ತರ ವಿಚಾರಗಳನ್ನ ಬಿಜೆಪಿ ಪ್ರಸ್ತಾಪಿಸಲಿವೆ. ಸದನದಲ್ಲಿ ಆರಂಭದಲ್ಲೇ ಪ್ರತಿಭಟನೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ನಾಯಕರು, ಎಲ್ಲಾ ವಿಷಯಗಳನ್ನ ಪ್ರಸ್ತಾಪಿಸದ ಬಳಿಕವೇ ಕೊನೆಯಲ್ಲಿ ಪ್ರತಿಭಟನೆ ನಡೆಸಲು ಯೋಜನೆ ಹೂಡಿದ್ದಾರೆ.

ಕಾಂಗ್ರೆಸ್ ಪ್ರತಿತಂತ್ರ

ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಆರೋಪಗಳನ್ನ ಕಾಂಗ್ರೆಸ್ ಪಟ್ಟಿ ಮಾಡಿದೆ. ಬಿಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್, 40 ಪರ್ಸೆಂಟ್ ಕಮಿಷನ್ ಆರೋಪ, ಕೊರೊನಾ ಕಾಲದ ಹಗರಣ, ಬಿಟ್‌ ಕಾಯಿನ್ ಹಗರಣ, ದೇವರಾಜು ಅರಸು ಟ್ರಕ್ ಟರ್ಮಿನ್‌ನಲ್ಲಿ 47 ಕೋಟಿ ರೂಪಾಯಿ ಹಗರಣವನ್ನ ತಿರುಗುಬಾಣವಾಗಿ ಬಿಡಲು ಕೈ ಪಡೆ ಸಜ್ಜಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ಸದನದ ಹೊರಗೆ ದೊಡ್ಡ ಪ್ರತಿಭಟನೆ ನಡೆಸಿರುವ ಬಿಜೆಪಿ, ಸದನದ ಒಳಗೂ ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿದೆ. ಸದ್ಯ ಅಗಲಿದ ಗಣ್ಯರಿಗೆ ವಿಧಾನಸಭೆ ಕಲಾಪದಲ್ಲಿ ಸಂತಾಪ ಸೂಚಿಸಲಾಗಿದ್ದು, ಮಂಗಳವಾರದಿಂದ ಅಸಲಿ ವಾಗ್ಯುದ್ಧ ಶುರುವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ