ವಿಜಯನಗರ, ಜೂನ್ 21: ಎಸ್ಎಸ್ಎಲ್ಸಿ (SSLC) ಪರೀಕ್ಷೆ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಕುಸಿತವಾಗಿದೆ. ಹಾಗಾಗಿ ಡಿಡಿಪಿಐ, ಬಿಇಒ ಅಮಾನತು ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಹೊಸಪೇಟೆಯಲ್ಲಿ ಕೆಡಿಪಿ ಸಭೆ ಬಳಿಕ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ 10ನೇ ಸ್ಥಾನದಲ್ಲಿದ್ದ 27ಕ್ಕೆ ಕುಸಿದಿದೆ. ಜಿಲ್ಲೆಯ ಶೇಕಡಾವಾರು ಪ್ರಮಾಣ ಕುಸಿತವಾಗಿದೆ. ಇದಕ್ಕೆ ಸಿಇಒ ಹೊಣೆ ಆಗಿದ್ದರಿಂದ ನೋಟಿಸ್ ಜಾರಿ ಮಾಡಿ ಅಮಾನತು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಬಾರಿ ಶೇ 20 ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದೆ ಎಂದರೆ ನಿಮ್ಮ ಸಾಧನೆ ಏನು? ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಸಿಎಂ ಪ್ರಶ್ನಿಸಿದ್ದಾರೆ. ಇನ್ನು ಮುಂದಿನ ವರ್ಷ ಕೃಪಾಂಕ ಕೊಡಬಾರದು ಎಂದು ಹೇಳಿದ್ದೇನೆ ಎಂದರು.
ಬಳ್ಳಾರಿ, ವಿಜಯನಗರ ಜಿಲ್ಲೆಯ ಫಂಡ್ ಬಗ್ಗೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 2 ಜಿಲ್ಲೆಗಳ ಡಿಎಂಎಫ್ ಫಂಡ್ ಸ್ವಲ್ಪ ಗೊಂದಲವಿದೆ. ವಿಜಯನಗರದವರು ಶೇ.28ರಷ್ಟು ಬರಬೇಕು ಅಂತಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯವರು ಇದನ್ನು ಒಪ್ಪುತ್ತಿಲ್ಲ. ಅದನ್ನು ಸರಿಯಾಗಿ ಪರಿಶೀಲನೆ ಮಾಡಲು ಹೇಳಿದ್ದೇನೆ. ಎಲ್ಲರೂ ಕುಳಿತು ಸರಿಯಾಗಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ: ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ
ಕೆರೆಗಳ ಹುಳೆತ್ತುವ ಕಾರ್ಯ ಮಾಡಬೇಕು. ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹೋಗುವಂತೆ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದೇನೆ. ಕೆರೆಗಳು ಬಹಳ ಮುಖ್ಯ ಇದೆ ಅದನ್ನ ಸರಿಪಡಿಸಬೇಕು ಎಂದರು.
ಇದನ್ನೂ ಓದಿ: SSLC ಮೌಲ್ಯಮಾಪನ ಎಡವಟ್ಟು; ಮರು ಮೌಲ್ಯಮಾಪನ ವೇಳೆ ತಾಲೂಕಿಗೆ ಟಾಪರ್, ಇಷ್ಟಪಟ್ಟ ಕಾಲೇಜು ಸಿಗಲಿಲ್ಲವೆಂದು ವಿದ್ಯಾರ್ಥಿನಿ ಅಳಲು
ನವಲಿ ಸಮಾನಾಂತರ ಜಲಾಶಯ ನಿರ್ಮಾಣ ವಿಚಾರವಾಗಿ ಮಾತನಾಡಿದ್ದು, ಆಂಧ್ರಪ್ರದೇಶ, ತೆಲಂಗಾಣದವರ ಪಾಲು ಇದೆ. ಹೀಗಾಗಿ ಅವರ ಜೊತೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.