ವಿಜಯನಗರ: ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಣ್ಣ, ತಂಗಿ ಶವ ಪತ್ತೆ
ಬೆಂಗಳೂರಿನ ಅತ್ತಿಬೆಲೆ ಅಗ್ನಿ ದುರಂತದಲ್ಲಿ 14 ಜೀವಗಳು ಬಳಿಯಾಗಿದ್ದರೆ, ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿಕೊಂಡು ಮೂವರು ಸಜೀವ ದಹನವಾಗಿದ್ದಾರೆ. ಇದರ ನಡುವೆ ವಿಜಯನಗರ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಣ್ಣ, ತಂಗಿ ಶವ ಪತ್ತೆಯಾಗಿವೆ.
ವಿಜಯನಗರ, (ಅಕ್ಟೋಬರ್ 08): ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಮೆನಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಣ್ಣ, ತಂಗಿ ಶವ ಪತ್ತೆಯಾಗಿವೆ. ಕೋಟ್ರೇಶ್ (32) ಹಾಗೂ ಕಾವ್ಯಾ (28) ಸಾವನ್ನಪ್ಪಿದ ಅಣ್ಣ ತಂಗಿ. ನಿನ್ನೆ(ಅಕ್ಟೋಬರ್ 07) ತಡರಾತ್ರಿಯೇ ಅಣ್ಣ-ತಂಗಿ ಸಾವನ್ನಪ್ಪಿದ್ದು, ಇಂದು (ಭಾನುವಾರ) ಬೆಳಗ್ಗೆ ಸಂಬಂಧಿಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಚಿಗಟೇರಿ ಪೊಲೀಸರು ಹಾಗೂ ಜಯನಗರ ಎಸ್ಪಿ ಹರಿಬಾಬು ಭೇಟಿ ಪರಿಶೀಲನೆ ಮಾಡಿದರು. ಆಸ್ತಿಗಾಗಿ ಅಣ್ಣ-ತಂಗಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಡೆಂಘೀ ಜ್ವರಕ್ಕೆ ನವ ವಿವಾಹಿತೆ ಬಲಿ
ಶಿವಮೊಗ್ಗ: ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಡೆಂಘೀ ಜ್ವರಕ್ಕೆ ನವ ವಿವಾಹಿತೆ ಬಲಿಯಾಗಿದ್ದಾರೆ. ಮಧುರಾ(31) ಮೃತ ಮಹಿಳೆ. ಕಳೆದೊಂದು ವಾರದಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ ಮಧುರಾ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಹೆಚ್ಚಿನ ಚಿಕಿತ್ಸೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. 6 ತಿಂಗಳ ಹಿಂದೆ ಅಷ್ಟೇ ಮಂಜುನಾಥ್ ಜೊತೆ ವಿವಾಹವಾಗಿತ್ತು.