ವಿಜಯನಗರ: ರಾಜ್ಯದಲ್ಲಿ ಮುಂಗಾರು(Monsoon) ಮಳೆ ವಿಳಂಬವಾಗಿ ಅನೇಕ ಜಲಾಶಯಗಳು ಬತ್ತಿ ಹೋಗಿವೆ. ಹೊಸಪೇಟೆಯ ತುಂಗಭದ್ರಾ ಜಲಾಶಯ(Tungabhadra Dam) ಸಂಪೂರ್ಣ ಖಾಲಿ ಖಾಲಿಯಾಗಿದೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರ ಪ್ರದೇಶದ ಜೀವನಾಡಿಯಾಗಿರುವ ಟಿಬಿ ಡ್ಯಾಂ ಸಂಪೂರ್ಣ ಖಾಲಿಯಾಗಿದೆ. ಟಿಬಿ ಡ್ಯಾಂನಲ್ಲೀಗ ಕೇವಲ 3.092 TMC ನೀರು ಮಾತ್ರ ಶೇಖರಣೆಯಾಗಿದೆ. 2 ಟಿಎಂಸಿ ಡೆಡ್ ಸ್ಟೋರೇಜ್. ಇನ್ನುಳಿದ ಒಂದು ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆಗೆ ಮೀಸಲಿಡಲಾಗಿದೆ.
105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಒಂದು ಟಿಎಂಸಿ ನೀರು ಮಾತ್ರ ಕುಡಿಯಲು ಯೋಗ್ಯ. ಕಳೆದ ವರ್ಷ ಇದೇ ದಿನದ ವೇಳೆಗೆ ಡ್ಯಾಂನಲ್ಲಿ 45.855 ಟಿಎಂಸಿ ನೀರು ಸಂಗ್ರಹಣೆ ಇತ್ತು. ಈ ಭಾರಿ ಮುಂಗಾರು ಮಳೆ ವಿಳಂಬದಿಂದ ಡ್ಯಾಂ ಸಂಪೂರ್ಣ ಖಾಲಿಯಾಗಿದೆ. ಇನ್ನೊಂದು ವಾರದಲ್ಲಿ ಉತ್ತಮವಾಗಿ ಮಳೆಯಾಗದಿದ್ದರೇ ಕುಡಿಯುವ ನೀರಿಗೆ ಹಾಹಾಕಾರ ಎದ್ದುವ ಸಾಧ್ಯತೆ ಇದೆ.
ಕಾಫಿನಾಡಿನಲ್ಲೂ ವರುಣ ಮುನಿಸಿಕೊಂಡಿದ್ದಾನೆ. ಮುಂಗಾರು ಮುಗಿದು ಹಿಂಗಾರು ಆರಂಭವಾದ್ರು ಮಳೆ ಬಾರದ ಹಿನ್ನೆಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪವಿರುವ ಐತಿಹಾಸಿಕ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ನೂರಾರು ಹಳ್ಳಿಗಳ ಜೀವನಾಡಿಯಾಗಿರುವ 2036 ಎಕರೆ ವಿಸ್ತೀರ್ಣದ ಮದಗದ ಕೆರೆ ಸಂಪೂರ್ಣ ಬರಿದಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗದ ಹಿನ್ನೆಲೆ ಮದಗದ ಕೆರೆ ಖಾಲಿ ಖಾಲಿ.
2016-17 ರಲ್ಲಿ ಬರಗಾಲ ಬಂದಿದ್ರೂ ಕೂಡ ಮದಗದ ಕೆರೆ ಬತ್ತಿ ಹೋಗಿರಲಿಲ್ಲ. ಕಳೆದ ವರ್ಷ ಮದಗದ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬಯಲು ಸೀಮೆ ಭಾಗದ ಜನರ ಕುಡಿಯುವ ನೀರಿನ ಮೂಲವಾಗಿದೆ.
ಹಾಸನದ ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯವಾದ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ. ಇಂದಿನ ನೀರಿನ ಮಟ್ಟ 2890.05 ಅಡಿ ಇದೆ. ಕಳೆದ ವರ್ಷ ಇದೇ ದಿನ 2908.31 ಅಡಿ ನೀರಿತ್ತು. ಗರಿಷ್ಠ 37.103 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 14.079 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 24.426 ಟಿಎಂಸಿ ನೀರಿತ್ತು.
ಕಳೆದ ವರ್ಷ 3556 ಕ್ಯುಸೆಕ್ ನೀರಿನ ಒಳ ಹರಿವು ಇತ್ತು ಇಂದು ಕೇವಲ 85 ಕ್ಯುಸೆಕ್ ನೀರಿನ ಒಳ ಹರಿವು ಇದೆ. ಹೊರ ಹರಿವು 1350. ಕ್ಯುಸೆಕ್ ಇದೆ ಕಳೆದ ವರ್ಷ ಇದೇ ದಿನ 200 ಕ್ಯುಸೆಕ್ ನೀರಿನ ಹೊರ ಹರಿವು ಇತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ