ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!
ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಎಂದಿದ್ದಾರೆ
ಎಷ್ಟೋ ಕಡೆ ಒಬ್ಬರೇ ಶಿಕ್ಷಕ. ಒಂದೇ ಕೊಠಡಿ. ಐದು ತರಗತಿಗಳು! ಎಂಬಂತಹ ಪರಿಸ್ಥಿತಿಯಿದೆ. ಆದರೆ ಆಯಕಟ್ಟಿನ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳು ಕಿತ್ತಾಡಿಕೊಂಡ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಒಬ್ಬರು ಅಧಿಕಾರಿ ಪ್ರಮೋಷನ್ ಆಗಿ ಡಿಡಿಪಿಐ ದಿಂದ ಜೆಡಿ ಆಗಿ ಹೋಗಬೇಕು, ಇನ್ನೊಬ್ಬರು ಬಿಇಒ ದಿಂದ ಪ್ರಮೋಷನ್ ಆಗಿ ಡಿಡಿಪಿಐ (DDPI) ಆಗಬೇಕು. ಆದರೆ ಇಬ್ಬರಿಗೂ ಸರ್ಕಾರ ಸರಿಯಾಗಿ ದಿನಾಂಕ ತಿಳಿಸದೇ ಪೋಸ್ಟಿಂಗ್ ಸೂಚಿಸಿದ್ದೇ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.’ ವಿಜಯಪುರ (Vijayapura) ನಗರದ ಡಿಡಿಪಿಐ ಕಚೇರಿಯಲ್ಲಿ ಇಂದು ಭಾರೀ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿದ್ದು. ಹೌದು ವಿಜಯಪುರ ಡಿಡಿಪಿಐ ಆಗಿದ್ದ ಉಮೇಶ ಶಿರಹಟ್ಟಿ ಮಠ ಅವರಿಗೆ ಸರ್ಕಾರ ಜಾಯಿಂಟ್ ಡೈರೆಕ್ಟರ್ (ಜೆಡಿ) ಆಗಿ ಪ್ರಮೋಷನ್ ನೀಡಿ ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಅದೇ ತರಹ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ ನಾಯಕ ಅವರಿಗೆ ಡಿಡಿಪಿಐ ಆಗಿ ಪ್ರಮೋಷನ್ ಮಾಡಿ ವಿಜಯಪುರ ವರ್ಗಾವಣೆ ಮಾಡಿದ್ದಾರೆ.
ಆದರೆ ಇವರಿಗೆ ಎಂದಿನಿಂದ ಚಾರ್ಜ್ ತೆಗೆದುಕೊಳ್ಳಬೇಕು ಎಂದು ದಿನಾಂಕ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಜುಲೈ 1 ನೇ ತಾರಿಖಿಗೆ ತಾನು ಜೆಡಿ ಆಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡುವ ಕಾರಣ ಅಲ್ಲಿಯ ವರೆಗೂ ಹುದ್ದೆ ಖಾಲಿ ಇಲ್ಲ, ಅಲ್ಲಿಯವರೆಗೂ ನಾನೇ ವಿಜಯಪುರ ಡಿಡಿಪಿಐ ಎಂದು ಹೇಳಿದ್ದೇ ಜಟಾಪಟಿಗೆ ಕಾರಣವಾಗಿದೆ.
ಸದ್ಯ ಬೆಂಗಳೂರಿನಲ್ಲಿ ಜೆಡಿ ಆಗಿರುವ ಅಧಿಕಾರಿ ಜೂನ್ 30 ಕ್ಕೆ ವಯೋ ನಿವೃತ್ತಿ ಹೊಂದಲಿದ್ದಾರೆ. ಆ ಬಳಿಕ ಆ ಸ್ಥಾನ ಖಾಲಿಯಾಗಲಿದೆ. ಬಳಿಕ ಜುಲೈ 1 ರಂದು ಉಮೇಶ ಶಿರಹಟ್ಟಿ ಮಠ ಅವರು ಜೆಡಿಯಾಗಿ ಅಧಿಕಾರಿ ಸ್ವೀಕಾರ ಮಾಡುವರು. ಅಲ್ಲಿಯವರೆಗೆ ನಾನೇ ವಿಜಯಪುರ ಡಿಡಿಪಿಐ ಎಂಬುದು ಉಮೇಶ ಶಿರಹಟ್ಟಿ ಮಠ ಅವರ ಮಾತು, ಇನ್ನೊಂದೆಡೆ ಯುವರಾಜ ನಾಯಕ ತಮ್ಮ ಬೆಂಬಲಿಗರೊಂದಿಗೆ ಇಂದು ಡಿಡಿಪಿಐ ಆಗಿ ಅಧಿಕಾರ ಸ್ವೀಕಾರ ಮಾಡಲು ಬಂದಿದ್ದರು. ಅವರಿಗೆ ಅಧಿಕಾರ ಸಿಗದ ಕಾರಣ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ಕಾರ ಸೂಚಿಸಿದಂತೆ ನಾನು ಇಂದು ಅಧಿಕಾರ ಸ್ವೀಕರಿಸಲು ಬಂದಿದ್ದೆ, ಈ ವಿಚಾರವಾಗಿ ನಾನು ಸರ್ಕಾರಕ್ಕೆ ಮನವಿ ಮಾಡುವೆ ಎಂದು ಹೇಳಿ ಯುವರಾಜ ನಾಯಕ ತಮ್ಮ ಬೆಂಬಲಿಗರೊಂದಿಗೆ ವಾಪಸ್ ತೆರಳಿದರು.
ಇನ್ನು ಸರ್ಕಾರ ತನ್ನ ಆದೇಶದಲ್ಲಿ ಉಮೇಶ ಶಿರಹಟ್ಟಿಮಠ ಅವರ ಮುಂಬಡ್ತಿಯಿಂದ ತೆರವಾದ ಸ್ಥಾನ ಅಂತಾ ಸ್ಪಷ್ಟವಾಗಿ ನಮೂದು ಮಾಡಿದೆ. ಆದರೆ ಯುವರಾಜ ನಾಯಕ ಅವರಿಗೆ ಮಾತ್ರ ಕುರ್ಚಿಯನ್ನು ಬೇಗ ಹಿಡಿದುಕೊಳ್ಳಲು ವಿಜಯಪುರಕ್ಕೆ ಆಗಮಿಸಿ ಈಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹೋಗಿದ್ದಾರೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ ಕೆಲಹೊತ್ತು ವಿಜಯಪುರ ಡಿಡಿಪಿಐ ಕಚೇರಿಯಲ್ಲಿ ಗೊಂದಲ ಸೃಷ್ಟಿ ಮಾಡಿತ್ತು.
ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 9 June 23