ಬಾಗಲಕೋಟೆ, ಮಾರ್ಚ್ 22: ಪಕ್ಷಕ್ಕೆ ಬೆಲೆ ಕೊಡ್ತೀನಿ, ರುಂಡ ಬೇಕಾದ್ರೂ ಕೊಡುತ್ತೇನೆ. ವೈಯಕ್ತಿಕವಾಗಿ ಬಂದರೆ ಯಾವ ಮಗನಿಗೂ ನಾನು ಬಗ್ಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ (Vijayanand Kashappanavar) ಹೇಳಿದ್ದಾರೆ. ನಗರದಲ್ಲಿ ನಡೆದ ವೀಣಾ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಂಗ ಬಂದರೆ ರಾಜಕೀಯದಲ್ಲಿ ಯಾರು ಏನಾಗುತ್ತಾರೆ, ಯಾರಿಗೆ ಗೊತ್ತಿದೆ. 50 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೆ ತಾಕತ್ ಪ್ರಶ್ನೆ ಮಾಡ್ತೀರಿ. ನಮ್ಮ ಕಾರ್ಯಕರ್ತರಿಗೆ ಸಭೆಗೆ ಹೋಗಬೇಡಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಸಚಿವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ತುಮ್ಹಾರೇ ಧಮ್ಕಿ ನಹೀ ಚಲೇಗಾ ಬಚ್ಚಾ ಎಂದ ಶಿವಾನಂದ ಪಾಟೀಲ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿದವರಿಗೆ ಅವಕಾಶ ಕೊಡಬೇಕು. ನನ್ನ ಪತ್ನಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆಕೆ ಜಿ.ಪಂ. ಅಧ್ಯಕ್ಷೆಯಾಗುವಾಗಲೂ ನಾನೊಬ್ಬನೇ ಗಂಡು ನಿಂತವನು. 2019ರಲ್ಲಿ ಯಾರೂ ಎಂಪಿ ಎಲೆಕ್ಷನ್ಗೆ ನಿಲ್ಲೋಕೆ ಮುಂದೆ ಬರಲಿಲ್ಲ. ಮೋದಿ ಅಲೆ ಅಂದರು, ನಮ್ಮ ಮುಂದೆ ಯಾವ ಅಲೆ ಕೂಡ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವೀಣಾ ಕಾಶಪ್ಪನವರ್‌ಗೆ ಬಾಗಲಕೋಟೆ ಟಿಕೆಟ್ ಮಿಸ್? ಕಾಂಗ್ರೆಸ್ ವಿರುದ್ಧ ಬೆಂಬಲಿಗರ ಧರಣಿ!
ಜಾತ್ಯಾತೀತ ನಿಲುವಿನ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್. ಇವತ್ತು ನಮಗೆ ನಿಮಗೆ ಎಲ್ಲರಿಗೂ ನೋವಾಗಿದೆ. ಈ ವೇದಿಕೆ ಕಾಂಗ್ರೆಸ್ ಪಕ್ಷ ಹಾಗೂ ಯಾರ ವಿರುದ್ದ ಅಲ್ಲ. ನಮಗೆ ಬೆಂಬಲವಾಗಿ ಗಟ್ಟಿಯಾಗಿ ನಿಂತ ನಿಮ್ಮೆಲ್ಲರ ಪಾದಕ್ಕೆ ನನ್ನ ನಮನಗಳು. ನಮ್ಮ ಜಿಲ್ಲೆಯಲ್ಲಿ ಬಹಳ ಜನ ಆಕಾಂಕ್ಷಿಳಿದ್ದೆವು. ಈ ಜಿಲ್ಲೆಯಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ. ಐದು ಜನ ಕಾಂಗ್ರೆಸ್ ಶಾಸಕರಲ್ಲಿ ನಮ್ಮನ್ನು ಹಿರಿಯರು ಮರೆತಿದ್ದಾರೆ ಅನಿಸುತ್ತಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳು ಸಾಲುಗಟ್ಟಿ ನಿಂತಿದ್ದಾರೆ, ಬಿಜೆಪಿಯ ಗದ್ದಿಗೌಡರಗೆ 5ನೇ ಬಾರಿ ಲಕ್ಕು ಕುದುರುತ್ತದಾ?
ನನ್ನ ಅಭಿಪ್ರಾಯ ಕೂಡ ಅಷ್ಟೇ ಮುಖ್ಯವಾಗಿದೆ. ಕೇವಲ ನನ್ನ ಪತ್ನಿ, ಕಾಶಪ್ಪನವರ ಕುಟುಂಬದ ಸೊಸೆ ಅಂತ ಅವರ ಹೆಸರು ಹೇಳೋದಲ್ಲ. ಯಾರು ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿತಾರೆ ಅವರಿಗೆ ಅವಕಾಶ ಕೊಡಬೇಕು. ಇಲ್ಲಿ ಕುಟುಂಬ ರಾಜಕಾರಣ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Fri, 22 March 24