ವಿಜಯಪುರದಲ್ಲಿ ಎಟಿಎಂಗೆ ಹಾನಿ ಮಾಡದೇ 16 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ಕಳ್ಳರು! ಬ್ಯಾಂಕ್ ಸಿಬ್ಬಂದಿ, ಕಾವಲುಗಾರನಿಂದಲೇ ಕಳ್ಳತನ ಶಂಕೆ

ಎಟಿಎಂ ಯಂತ್ರಕ್ಕೆ ಹಾನಿಯಾಗದೇ ಹಣ ಮಾಯವಾಗಿದ್ದರ ಬಗ್ಗೆ ಸಂಶಯ ಮೂಡಿದೆ. ಬ್ಯಾಂಕ್ ಸಿಬ್ಬಂದಿ, ಕಾವಲುಗಾರನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 18ರ ರಾತ್ರಿಯಿಂದ 19 ರ ನಸುಕಿನ ಜಾವದೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿದೆ.

ವಿಜಯಪುರದಲ್ಲಿ ಎಟಿಎಂಗೆ ಹಾನಿ ಮಾಡದೇ 16 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ಕಳ್ಳರು! ಬ್ಯಾಂಕ್ ಸಿಬ್ಬಂದಿ, ಕಾವಲುಗಾರನಿಂದಲೇ ಕಳ್ಳತನ ಶಂಕೆ
ಕಳ್ಳತನ ನಡೆದ ಎಟಿಎಮ್​
Edited By:

Updated on: Nov 21, 2021 | 2:37 PM

ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ ಹಣ ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಟಿಎಂ ಬಾಗಿಲಿನ ಬೀಗ ಒಡೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ ಕೇವಲ ಬಾಗಿಲ ಬೀಗ ಮಾತ್ರ ಒಡೆದು ಹಣವನ್ನು ಎಗರಿಸಿದ್ದಾರೆ. ಎಟಿಎಂ ಒಳಗಿದ್ದ ಸುಮಾರು 16.08 ಲಕ್ಷ ನಗದು ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಎಟಿಎಂ ಯಂತ್ರದೊಳಗಿನ ನಾಲ್ಕು ಹಣದ ಪೆಟ್ಟಿಗೆಗಳು ಮಾಯವಾಗಿದ್ದು, ಈ ಘಟನೆ ಹಲವು ಸಂಶಯಗಳಿಗೆ ಕಾರಣವಾಗಿದೆ.

ಎಟಿಎಂ ಯಂತ್ರಕ್ಕೆ ಹಾನಿಯಾಗದೇ ಹಣ ಮಾಯವಾಗಿದ್ದರ ಬಗ್ಗೆ ಸಂಶಯ ಮೂಡಿದೆ. ಬ್ಯಾಂಕ್ ಸಿಬ್ಬಂದಿ, ಕಾವಲುಗಾರನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 18ರ ರಾತ್ರಿಯಿಂದ 19 ರ ನಸುಕಿನ ಜಾವದೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ. ಈ ಪ್ರಕರಣ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು?
ಮುದ್ದೇಬಿಹಾಳ ಪಟ್ಟಣದಲ್ಲಿನ ಹುಡ್ಕೋ ಕಾಲೋನಿಯಲ್ಲಿರೋ ಯೂಬನಿಯನ್ ಬ್ಯಾಂಕ್ ಎಟಿಎಂ ರಾತ್ರಿ ವೇಳೆ ಬಂದ್ ಆಗಿರುತ್ತದೆ. ಈ ಎಟಿಎಂ ಕಾವಲು ಕಾಯಲು ಬ್ಯಾಂಕ್​ನವರು ಓರ್ವ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಮಹಾಂತೇಶ ಡೋಣೂರ ಎಂಬ ಕಾವಲುಗಾರ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕಾವಲು ಕಾಯುತ್ತಾನೆ. ನಂತರ ಎಟಿಎಂ ಬಾಗಿಲಿಗೆ ಬೀಗ ಹಾಕಲಾಗುತ್ತದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ. ಕಳೆದ ನವೆಂಬರ್ 17 ರಂದು 21,30,500 ರೂಪಾಯಿ ಹಣವನ್ನು ಎಟಿಎಂಗೆ ಬ್ಯಾಂಕಿನವರು ಹಣ  ಹಾಕಿದ್ದರಂತೆ. ನಂತರ ನವೆಂಬರ್ 19 ರಂದು ಎಟಿಎಂ ಸೆಕ್ಯೂರಿಟಿ ಗಾರ್ಡ್ ಮಹಾಂತೇಶ ಡೋಣೂರ ಎಟಿಎಂ ಬಾಗಿಲು ತೆರೆಯಲು ಹೋದಾಗ ಎಟಿಎಂ ಬಾಗಿಲಿಗೆ ಹಾಕಿದ್ದ ಬೀಗ ಪಡೆದಿದ್ದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಕಾವಲುಗಾರ ಮಹಾಂತೇಶ ಬ್ಯಾಂಕ್ ವ್ಯವಸ್ಥಾಪಕ ಮಾಣಿಕರಾವ್ ಮೇತ್ರಿ ಅವರಿಗೆ ವಿಷಯ ತಿಳಿಸಿದ್ದಾನೆ. ಆಗ ಬ್ಯಾಂಕ್​ನಿಂದ ಎಟಿಎಂಗೆ ಹಾಕಿದ ಹಣ ಹಾಗೂ ಎಟಿಎಂನಿಂದ ಗ್ರಾಹಕರು ಡ್ರಾ ಮಾಡಿದ ಹಣವನ್ನು ತಾಳೆ ಹಾಕಿದ್ದಾರೆ. ನವೆಂಬರ್ 17 ರಂದು 21,30,500 ರೂಪಾಯಿ ಹಣವನ್ನು ಎಟಿಎಂಗೆ ಹಾಕಲಾಗಿದ್ದು, ಆ ಪೈಕಿ ಗ್ರಾಹಕರು 18 ನವೆಂಬರ್ ರಾತ್ರಿ ವರೆಗೆ 5,22,500 ರೂಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಉಳಿದ 16.08 ಲಕ್ಷ ಹಣ ಎಟಿಎಂನಲ್ಲಿ ಇಲ್ಲದಿರುವುದು ತಿಳಿದುಬಂದಿದೆ.

ಇಬ್ಬರು ಕುಖ್ಯಾತ ಕಳ್ಳರ ಬಂಧನ
ಬೆಂಗಳೂರಿನಲ್ಲಿ ಇಬ್ಬರು ಕುಖ್ಯಾತ ಕಳ್ಳರು ಅರೆಸ್ಟ್ ಆಗಿದ್ದಾರೆ. ಸೂರ್ಯ ಮತ್ತು ರಾಜಕುಮಾರ ಬಂಧಿತ ಆರೋಪಿಗಳು. ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದು, 437 ಗ್ರಾಂ ಚಿನ್ನಾಭರಣ, 4 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಬಿಎಂಟಿಸಿ ಬಸ್​ಗಳನ್ನ ಟಾರ್ಗೆಟ್ ಮಾಡಿ ಬಸ್​ನಲ್ಲಿ ನೂಕು ನುಗ್ಗಲು ಮಾಡುತ್ತಿದ್ದರು. ನಂತರ ಕತ್ತು ಹಾಗೂ ಬ್ಯಾಗ್​ನಲ್ಲಿದ್ದ ಚಿನ್ನ ಎಗರಿಸುತ್ತಿದ್ದರು.

ಇದನ್ನೂ ಓದಿ

ಕಲಬುರಗಿ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್​ ಸಮಸ್ಯೆ; ಸಿಗ್ನಲ್ ಸಿಗದ ಹಿನ್ನೆಲೆ ಸ್ಟಾರ್ ಏರ್ ವಿಮಾನ ಹೈದರಾಬಾದ್​ನಲ್ಲಿ ಲ್ಯಾಂಡಿಂಗ್

ಶಾರ್ಟ್ಸ್​ ಹಾಕಿಕೊಂಡು ಹೋದ ಗ್ರಾಹಕನನ್ನು ಒಳಗೆ ಬಿಡದ ಬ್ಯಾಂಕ್​ ಸಿಬ್ಬಂದಿ; ಎಸ್​ಬಿಐ ಕೊಟ್ಟ ಸ್ಪಷ್ಟನೆ ಏನು?

Published On - 1:00 pm, Sun, 21 November 21