AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರ್ಟ್ಸ್​ ಹಾಕಿಕೊಂಡು ಹೋದ ಗ್ರಾಹಕನನ್ನು ಒಳಗೆ ಬಿಡದ ಬ್ಯಾಂಕ್​ ಸಿಬ್ಬಂದಿ; ಎಸ್​ಬಿಐ ಕೊಟ್ಟ ಸ್ಪಷ್ಟನೆ ಏನು?

ಆಶೀಶ್​ ತಮ್ಮ ಟ್ವೀಟ್​​ನಲ್ಲಿ ಎಸ್​ಬಿಐನ್ನು ಟ್ಯಾಗ್ ಮಾಡಿದ್ದರು. ಹಾಗಾಗಿ ಟ್ವೀಟ್​ ಬ್ಯಾಂಕ್​ ಗಮನಕ್ಕೂ ಬಂದಿದ್ದು, ಅದೂ ಕೂಡ ಪ್ರತಿಕ್ರಿಯೆ ನೀಡಿದೆ. ನಿಮ್ಮ ಮಾತುಗಳು ಅರ್ಥವಾಯಿತು ಮತ್ತು ಅದನ್ನು ಗೌರವಿಸುತ್ತೇವೆ ಎಂದು ಹೇಳಿದೆ.

ಶಾರ್ಟ್ಸ್​ ಹಾಕಿಕೊಂಡು ಹೋದ ಗ್ರಾಹಕನನ್ನು ಒಳಗೆ ಬಿಡದ ಬ್ಯಾಂಕ್​ ಸಿಬ್ಬಂದಿ; ಎಸ್​ಬಿಐ ಕೊಟ್ಟ ಸ್ಪಷ್ಟನೆ ಏನು?
ಸಾಂಕೇತಿಕ ಚಿತ್ರ
TV9 Web
| Edited By: |

Updated on: Nov 21, 2021 | 12:30 PM

Share

ನಾನು ಧರಿಸಿದ್ದ ಉಡುಪಿನ ಕಾರಣಕ್ಕೆ ನನಗೆ ಎಸ್​ಬಿಐ ಬ್ಯಾಂಕ್​ ಶಾಖೆಯಲ್ಲಿ ಪ್ರವೇಶ ಸಿಗಲಿಲ್ಲ ಎಂದು ವ್ಯಕ್ತಿಯೊಬ್ಬರು ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಆ ವ್ಯಕ್ತಿ ತನ್ನನ್ನು ಆಶೀಶ್​ ಎಂದು ಹೇಳಿಕೊಂಡಿದ್ದು, ಕೋಲ್ಕತ್ತ ನಿವಾಸಿಯೆಂದು ಪರಿಚಯಿಸಿಕೊಂಡಿದ್ದಾರೆ. ಅವರು ಮಾಡಿದ್ದ ಟ್ವೀಟ್ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗ್ತಿದೆ.  ‘ನಾನು ಶಾರ್ಟ್ಸ್​ ಧರಿಸಿ ಎಸ್​ಬಿಐ ಬ್ಯಾಂಕ್​ ಶಾಖೆಗೆ ಹೋದೆ. ಆದರೆ ನಾನು ಶಾರ್ಟ್ಸ್​ ಹಾಕಿಕೊಂಡಿದ್ದೇನೆ ಎಂಬ ಕಾರಣಕ್ಕೆ ನನಗೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಲು ಬಿಡಲಿಲ್ಲ. ನಮ್ಮ ಗ್ರಾಹಕರು ಶಿಸ್ತು ಪಾಲನೆ ಮಾಡಬೇಕು ಎಂಬುದು ನಮ್ಮ ಆಶಯ. ದಯವಿಟ್ಟು ವಾಪಸ್​ ಹೋಗಿ ಪ್ಯಾಂಟ್​ ಧರಿಸಿ ಬನ್ನಿ ಎಂದರು’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.  ಗ್ರಾಹಕರು ಏನು ಧರಿಸಬೇಕು? ಏನನ್ನು ಧರಿಸಬಾರದು ಎಂಬುದರ ಸಂಬಂಧ ಅಧಿಕೃತ ನೀತಿ ಇದೆಯೇ ಎಂದೂ ಕೂಡ ಆಶೀಶ್ ಪ್ರಶ್ನಿಸಿದ್ದಾರೆ.  

2017ರಲ್ಲಿ ಪುಣೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಎಸ್​ಬಿಐ ಶಾಖೆಗೆ ಬರ್ಮುಡಾ ಶಾರ್ಟ್ಸ್​ ಹಾಕಿಕೊಂಡು ಹೋದ ವ್ಯಕ್ತಿಯೊಬ್ಬನಿಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದೂ ಕೂಡ ಆಶೀಶ್​ ತಿಳಿಸಿದ್ದಾರೆ.  ಅವರು ಟ್ವೀಟ್​ ಮಾಡಿದ ಬೆನ್ನಲ್ಲೇ, ಆ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿದೆ. ಕೆಲವರು ಆಶೀಶ್​ ಪರ ವಹಿಸಿಕೊಂಡಿದ್ದಾರೆ. ಇನ್ನೂ ಕೆಲವರು ಬ್ಯಾಂಕ್​ ಕ್ರಮವನ್ನು ಶ್ಲಾಘಿಸಿದ್ದಾರೆ. ನೀವು ಬೆತ್ತಲಾಗಿ ಓಡಾಡಿದರೂ ಎಸ್​ಬಿಐಗೆ ಏನೂ ಸಮಸ್ಯೆಯಿಲ್ಲ. ಆದರೆ ಬ್ಯಾಂಕ್​ಗೆ ಬರುವಾಗ ಶಿಸ್ತಿನಿಂದ ಬನ್ನಿ ಎಂಬುದಷ್ಟೇ ಅದರ ನಿರ್ದೇಶನ ಎಂದು ಟ್ವಿಟರ್​ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಅಲ್ಲಿ ನಿಮ್ಮ ಅಕೌಂಟ್​​ನ್ನು ಕ್ಲೋಸ್ ಮಾಡಿ, ಮತ್ತೊಂದು ಬ್ಯಾಂಕ್​ನಲ್ಲಿ ತೆರೆಯಿರಿ ಎಂದು ಮತ್ತೊಬ್ಬರು ಸೂಚಿಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಎಸ್​ಬಿಐ ಆಶೀಶ್​ ತಮ್ಮ ಟ್ವೀಟ್​​ನಲ್ಲಿ ಎಸ್​ಬಿಐನ್ನು ಟ್ಯಾಗ್ ಮಾಡಿದ್ದರು. ಹಾಗಾಗಿ ಟ್ವೀಟ್​ ಬ್ಯಾಂಕ್​ ಗಮನಕ್ಕೂ ಬಂದಿದ್ದು, ಅದೂ ಕೂಡ ಪ್ರತಿಕ್ರಿಯೆ ನೀಡಿದೆ. ನಿಮ್ಮ ಮಾತುಗಳು ಅರ್ಥವಾಯಿತು ಮತ್ತು ಅದನ್ನು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನೂ ನಾವು ಜಾರಿ ಮಾಡಿಲ್ಲ. ಅದರ ಬಗ್ಗೆ ಯಾವುದೇ ಅಧಿಕೃತ ನೀತಿ ಪ್ರಕಟಣೆಯನ್ನೂ ನಾವು ಮಾಡಿಲ್ಲ. ಅವರವರ ಆಯ್ಕೆಗೆ ತಕ್ಕಂತೆ, ಸ್ಥಳೀಯವಾಗಿ ಇರುವ ಕೆಲವು ನಿಯಮಗಳ ಅನುಸಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್​​ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್​​ ಕೊಡಿ. ನಾವು ವಿಚಾರಿಸುತ್ತೇವೆ ಎಂದು ಹೇಳಿದೆ. ಆದರೆ ಆಶೀಶ್​ ಈ ವಿಷಯವನ್ನು ನಾನು ಮುಂದುವರಿಸಲು ಇಷ್ಟಪಡುವುದಿಲ್ಲ. ನನಗೆ ವಸ್ತ್ರದ ಬಗ್ಗೆ ಸಂಹಿತೆ ಇದೆಯಾ ಎಂಬುದು ಗೊತ್ತಾಗಬೇಕಿತ್ತು. ಹಾಗಾಗಿ ಕೇಳಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮಳೆ ಪರಿಹಾರ ಘೋಷಣೆ- ಸಿಎಂ ಬೊಮ್ಮಾಯಿ