ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!

ಮಹಿಳೆಯೊಬ್ಬಳು ಮದುವೆಯಾಗಿ 3 ವರ್ಷದ ಮಗುವಿದ್ದರೂ ಬೇರೆ ಗಂಡಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಆಕೆಯ ಗಂಡನಿಗೆ ಗೊತ್ತಿರಲಿಲ್ಲ. ಗಂಡನಿಂದ ದೂರವಾಗಿದ್ದ ಆಕೆ ಆತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಆಕೆ ತನ್ನ ಮಗುವಿನ ಜೊತೆ ಒಂದೇ ಮನೆಯಲ್ಲಿ ಆತನ ಜೊತೆ ವಾಸಿಸುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಆ 3 ವರ್ಷದ ಮಗು ಆತನ ಶರ್ಟ್ ಮೇಲೆ ಮಲವಿಸರ್ಜನೆ ಮಾಡಿದ್ದರಿಂದ ಆತ ಆ ಮಗುವನ್ನು ಕೊಲೆ ಮಾಡಿದ್ದಾನೆ. ಈ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!
Baby

Updated on: Dec 23, 2025 | 4:12 PM

ಮುಂಬೈ, ಡಿಸೆಂಬರ್ 23: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 3 ವರ್ಷದ ಬಾಲಕನೊಬ್ಬ ಮಲಗಿದ್ದಾಗ ಆಕಸ್ಮಿಕವಾಗಿ ಆತನ ತಾಯಿಯ ಪ್ರಿಯಕರನ ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ್ದ. ಇದರಿಂದ ಕೋಪಗೊಂಡ ಆ ಮಗುವಿನ ತಾಯಿಯ ಪ್ರಿಯಕರ ಆ ಮಗುವನ್ನು ಕೊಲೆ (Murder) ಮಾಡಿರುವ ಘಟನೆ ವರದಿಯಾಗಿದೆ. ಡಿಸೆಂಬರ್ 11ರ ರಾತ್ರಿ ಮಲಗಲು ಹೋದಾಗ ಕುಡಿದಿದ್ದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ಬಾಲಕ ಫರ್ಹಾನ್​ನ ಕತ್ತು ಹಿಸುಕಿ ಕೊಂದಿದ್ದಾನೆ.

ರಾತ್ರಿ ಫರ್ಹಾನ್ ಎಂಬ ಆ ಮಗುವಿನ ಪಕ್ಕದಲ್ಲಿ 44 ವರ್ಷದ ಮೌಲಾಲಿ ಮಲಗಿದ್ದ. ಆ ಮಗುವಿನ ತಾಯಿ ಕೆಲಸಕ್ಕೆ ಬೇರೆ ಮನೆಗೆ ಹೋಗಿದ್ದವಳು ಇನ್ನೂ ಬಂದಿರಲಿಲ್ಲ. ಈ ವೇಳೆ ಆ ಮಗು ಮಲವಿಸರ್ಜನೆ ಮಾಡಿದೆ. ಕುಡಿತದ ಅಮಲಿನಲ್ಲಿ ಮಲಗಿದ್ದ ಆತನಿಗೆ ತನ್ನ ಮೈ ಗಲೀಜಾಗಿದ್ದಕ್ಕೆ ಕೋಪ ಬಂದಿದೆ. ಬಳಿಕ ಆತ ಮಗುವಿಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಸಿನಿಮೀಯ ರೀತಿ ಪತ್ನಿಯ ಕೊಂದ ಪತಿ ಕೆಲವೇ ಕ್ಷಣಗಳಲ್ಲಿ ಅರೆಸ್ಟ್! ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

ಆ ಮಗುವಿನ ತಾಯಿ 28 ವರ್ಷದ ಶಹನಾಜ್ ಶೇಖ್ ಮನೆಗೆ ಮರಳಿದಾಗ ಫರ್ಹಾನ್ ಮೇಲಿಂದ ಬಿದ್ದಿದ್ದಾನೆಂದು ಆತ ಅವಳಿಗೆ ಹೇಳಿದ್ದ. ಅವಳು ಕೂಡ ಆ ಮಾತನ್ನು ನಂಬಿದ್ದಳು. ನಂತರ ಆ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವನನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದಾಗ ಆ ತಾಯಿ ತನ್ನ ಮಗುವನ್ನು ಕರ್ನಾಟಕದ ವಿಜಯಪುರಕ್ಕೆ ಕರೆದೊಯ್ದಳು. ಅಲ್ಲಿ ಬಸ್​ ನಿಲ್ದಾಣದಿಂದ ಆಕೆಯ ಪ್ರಿಯಕರ ಪರಾರಿಯಾಗಿದ್ದ.

ಕೊನೆಗೆ ಶಹನಾಜ್ ತನ್ನ ಮೊದಲ ಪತಿಯ ಸಹಾಯದಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಳು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ದೃಢಪಡಿಸಲಾಯಿತು. ಬಳಿಕ ಆ ತಾಯಿಯೇ ತನ್ನ ಪ್ರಿಯಕರನ ವಿರುದ್ಧ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru: ವೀಕ್​​ಡೇಸ್​​ನಲ್ಲಿ ಪ್ರೊಫೆಸರ್, ವಾರಾಂತ್ಯ ಬಂತಂದ್ರೆ ಖತರ್ನಾಕ್​​ ಕಳ್ಳಿ!

ಮೊದಲ ಮದುವೆಯಿಂದ ಇಬ್ಬರು ಮಕ್ಕಳಿರುವ ಶಹನಾಜ್ ಮತ್ತು ಆಕೆಯ ಪ್ರಿಯಕರ ಮೌಲಾಲಿ ಇಬ್ಬರೂ ವಿಜಯಪುರದವರಾಗಿದ್ದರೂ ಕಳೆದ ಒಂದು ತಿಂಗಳಿನಿಂದ ಸೊಲ್ಲಾಪುರದಲ್ಲಿ ವಾಸಿಸುತ್ತಿದ್ದರು. ಈಗ ಮೌಲಾಲಿ ತಾನೇ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡು, ಜೈಲಿನಲ್ಲಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ