AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೆಯುವ ಚಳಿಗೆ ನಡುಗಿದ ವಿಜಯಪುರ: ಶಾಲೆ ಸಮಯ ಬದಲಾವಣೆ, ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ

ವಿಜಯಪುರ ಜಿಲ್ಲೆಯಲ್ಲಿ ಚಳಿ ತೀವ್ರಗೊಂಡಿದೆ. ಮುಂದಿನ ದಿನಗಳನ್ನು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲಾ ಸಮಯವನ್ನು ಬದಲಾವಣೆ ಮಾಡಿ ಡಿಸಿ ಆದೇಶಿಸಿದ್ದಾರೆ. ಆದರೆ ಬಹುತೇಕ ಖಾಸಗಿ ಹಾಗೂ ಅನುದಾನಿತ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿಲ್ಲ. ಹೀಗಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೆಯುವ ಚಳಿಗೆ ನಡುಗಿದ ವಿಜಯಪುರ: ಶಾಲೆ ಸಮಯ ಬದಲಾವಣೆ, ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ
ವಿಜಯಪುರದಲ್ಲಿ ಚಳಿ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Dec 22, 2025 | 5:04 PM

Share

ವಿಜಯಪುರ, ಡಿಸೆಂಬರ್​​ 22: ರಾಜ್ಯದಲ್ಲಿ ಚಳಿ (cold) ಹೆಚ್ಚಳವಾಗಿದೆ. ಅದರಲ್ಲೂ ಬಿಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಚಳಿ ಅಧಿಕ ಪ್ರಮಾಣವಿದೆ. ದಾಖಲೆ ಪ್ರಮಾಣದಲ್ಲಿ ತಾಪಮಾನ ದಾಖಲಾಗಿದೆ. ಈ ಹಿನ್ನಲೆ ಜಿಲ್ಲಾಡಳಿತ ಡಿಸೆಂಬರ್ 31ರವರೆಗೆ ಎಲ್ಲಾ ಶಾಲೆಗಳ (schools) ಆರಂಭ ಸಮಯ ಬದಲಾವಣೆ ಮಾಡಿ ಆದೇಶ ಜಾರಿ ಮಾಡಿದೆ. ಆದರೆ ಈ ಆದೇಶ ಪಾಲನೆಯಾಗಿಲ್ಲ ಎಂದು ಪೋಷಕರು ಅಸಮಾಧಾನ ಹೊರ ಹಾಕಿದ್ಧಾರೆ.

ಶಾಲೆಗಳ ಸಮಯ ಬದಲಾವಣೆಗೆ ಆದೇಶ

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಕನಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. 20ವರ್ಷಗಳಲ್ಲಿ 3ನೇ ಕನಿಷ್ಠ ತಾಪಮಾನ ಹಾಗೂ 10 ವರ್ಷಗಳಲ್ಲಿ 4ನೇ ಬಾರಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. ಚಳಿಯ ತೀವ್ರತೆ ಶಾಲಾ ಮಕ್ಕಳು, ವೃದ್ಧರು ಹಾಗೂ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕಾರಣ ಎಲ್ಲಾ ಶಾಲೆಗಳ ಆರಂಭಿಕ ಸಮಯ ಬದಲಾವಣೆಯ ಕೂಗು ಕೇಳಿಬಂದಿತ್ತು. ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಹಾಗೂ ಐಎಂಡಿ ಬೆಂಗಳೂರು ಪ್ರಕಾರ ರಾಜ್ಯದಲ್ಲಿ ಇನ್ನೂ ಶೀತಗಾಳಿ ಬೀಸುತ್ತಿರುವ ಹಿನ್ನಲೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದರು. ಈ ಹಿನ್ನಲೆ ವಿಜಯಪುರ ಜಿಲ್ಲಾಧಿಕಾರಿ ಕೆ. ಆನಂದ ಎಲ್ಲಾ ಶಾಲೆಗಳ ಸಮಯ ಬದಲಾವಣೆ ಮಾಡಿ ಡಿಸೆಂಬರ್ 20ರಂದು ಆದೇಶ ಜಾರಿ ಹೊರಡಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಜಿಲ್ಲೆಯ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಶಾಲೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಆದೇಶ ಜಾರಿಯಾಗಿ ಎರಡು ದಿನವಾದರೂ ಹಲವು ಶಾಲೆಗಳು ಈ ಮುಂಚೆ ಇದ್ದ ಸಮಯದಂತೆ ಬೆಳಿಗ್ಗೆ ಬೇಗ ಶಾಲೆಗಳನ್ನು ಆರಂಭಿಸಿವೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ?

ಡಿಸಿ ಆದೇಶಕ್ಕೆ ಬೆಲೆ ಇಲ್ಲವೇ. ತೀವ್ರ ಚಳಿಯ ಕಾರಣ ಸಮಯ ಬದಲಾವಣೆ ಮಾಡಿದರೂ ಅದನ್ನು ಏಕೆ ಪಾಲನೆ ಮಾಡುತ್ತಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಕಳ್ಳಿಮನಿ, ನಗರದ ನಿವಾಸಿ ಸೋಮನಾಥ್​​ ಎಂಬುವವರು ಕಿಡಿ ಕಾರಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 1,939 ಸರ್ಕಾರಿ ಶಾಲೆಗಳಿದ್ದ, 2,26,260 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. 347 ಅನುದಾನಿತ ಶಾಲೆಗಳಿದ್ದು, 72,457 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜೊತೆಗೆ ಖಾಸಗಿಯಾಗಿ 1,158 ಶಾಲೆಗಳಿದ್ದು 1,89,308 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಆದೇಶ ಪಾಲನೆ ಮಾಡದ ಶಾಲೆಗಳು 

ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಆರಂಭಿಕ ಸಮಯ ಬೇರೆ ಬೇರೆಯಾಗಿದೆ. ಒಂದೊಂದು ಸಂಸ್ಥೆಯ ಸಮಯ ಬೇರೆ ಬೇರೆಯೇ ಆಗಿರುತ್ತದೆ. ಆದರೆ ಸದ್ಯ ಚಳಿ ಇರುವುದರಿಂದ ಎಲ್ಲಾ ಶಾಲೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕೆಂದು ಡಿಸಿ ಆದೇಶ ಹೊರಡಿಸಿದರು ಪಾಲನೆಯಾಗುತ್ತಿಲ್ಲ. ಇದು ಮುಂದೆ ಸಮಸ್ಯೆಗೆ ಕಾರಣವಾಗಬಹುದು. ಬಹುತೇಕ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಆದೇಶ ಪಾಲನೆ ಮಾಡುತ್ತಿಲ್ಲ. ಎಲ್ಲಾ ಶಾಲೆಗಳಿಗೆ ಡಿಸಿ ಆದೇಶ ನಿನ್ನೆಯೇ ತಲುಪಿಸಲಾಗಿದೆ ಎಂದು ಡಿಡಿಪಿಐ ವೀರಯ್ಯ ಸಾಲೀಮಠ ಮಾಹಿತಿ ನೀಡಿದ್ದಾರೆ. ಆದರೆ ಡಿಡಿಪಿಐ ಕಚೇರಿಯಿಂದ ಯಾವುದೇ ಆದೇಶ ಬಂದಿಲ್ಲ, ಆದೇಶ ಬಂದ ಕೂಡಲೇ ಪಾಲನೆ ಮಾಡುತ್ತೇವೆಂದು ಅನುದಾನಿತ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಈ ವಿಚಾರಕ್ಕೂ ಪೋಷಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಏನ್​ ಚಳಿ ಗುರು: ಥಂಡಾ ಹೊಡೆದ ಉತ್ತರ ಕರ್ನಾಟಕ; ವಾಕಿಂಗ್​​​​ ತೆರಳದಂತೆ ಮನವಿ

ನಾಳೆಯಿಂದಾದರೂ ಎಲ್ಲಾ ಶಾಲೆಗಳು ಡಿಸಿ ಆದೇಶದಂತೆ ಆರಂಭಿಕ ಸಮಯವನ್ನು ಬದಲಾವಣೆ ಮಾಡಬೇಕಿದೆ. ಇಲ್ಲವಾದರೆ ತಮ್ಮ ಮನಸ್ಸಿಗೆ ಬಂದಂತೆ ಸಮಯ ನಿಗದಿಯಿಂದ ಚಳಿಯಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕನಿಷ್ಟ ಪ್ರಮಾಣದ ಚಳಿ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Mon, 22 December 25