Vijayapura: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನ ನೆರವಿಗೆ ನಿಂತ ಚಡಚಣ ಹುಡುಗರ ತಂಡ
ವಿಜಯಪುರ ಜಿಲ್ಲೆಯಲ್ಲೊಂದು ‘ಚಡಚಣ ಹುಡುಗರ ತಂಡ' ಎಂಬ ಹೆಸರಿನ ಗುಂಪನ್ನು ಕಟ್ಟಿಕೊಂಡ ಯುವಕರು ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಮಹಾಮಾರಿ ಕೊರೊನಾದಲ್ಲಿ ಬಡವರಿಗೆ ಪಡಿತರ, ಹಸಿದವರಿಗೆ ಆಹಾರ ನೀಡುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಈ ತಂಡ 12 ವರ್ಷದ ಬಾಲಕನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಓಡಾಡುತ್ತಿದ್ದಾರೆ.
ವಿಜಯಪುರ: ಇಡೀ ರಾಜ್ಯದಲ್ಲಿ ಭೀಮಾತೀರ ಎಂಬ ಹೆಸರು ಕೇಳಿದರೆ ಸಾಕು ಅಲ್ಲಿನ ಕ್ರೌರ್ಯತೆ ಕಣ್ಮುಂದೆ ಬರುತ್ತದೆ. ಆದರೆ ಅದೇ ಭೀಮಾತೀರದಲ್ಲಿ ಮಾನವೀಯಕತೆಯ ಹಸಿರು ಚಿಗುರುತ್ತಿದೆ. ಸದಾ ಕಾಲ ರಕ್ತಪಾತ, ರಕ್ತ ಚರಿತ್ರೆಯಿಂದಲೇ ಕುಖ್ಯಾತಿಗೆ ಪಾತ್ರವಾದ ಚಡಚಣ ಇಂದು ಅದೇ ಹೆಸರಿನೊಂದಿಗೆ ಚಡಚಣ ಹುಡುಗರ ತಂಡ ಎಂದು ಗುಂಪು ಕಟ್ಟಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಈ ತಂಡದಲ್ಲಿರುವ ಯುವಕರು ಯಾರೂ ಕೂಡ ಶ್ರೀಮಂತರಲ್ಲ. ಖಾಸಗಿ ಕಂಪನಿಗಳಲ್ಲಿ, ಬೈಕ್ ಶೋರೂಂ, ಬಟ್ಟೆ ಅಂಗಡಿಗಳಲ್ಲಿ ಕೆಲಸಕ್ಕೆ ಹೋಗಿ ಜೀವನ ಮಾಡುತ್ತಾರೆ. ಕೊರೊನಾ ಸಮಯದಲ್ಲಿ ಸ್ವಂತ ಹಾಗೂ ದಾನಿಗಳು ನೀಡಿದ ಹಣದಲ್ಲಿ 750 ಕ್ಕೂ ಆಧಿಕ ಹೆಚ್ಚು ಬಡ ಕುಟುಂಬಗಳಿಗೆ ಪಡಿತರ ನೀಡಿದ್ದಾರೆ. ಕಷ್ಟದಲ್ಲಿರುವವರ ಸಹಾಯಕ್ಕೆ ಸದಾ ಧಾವಿಸುತ್ತಾರೆ ಚಡಚಣ ಹುಡುಗರ ತಂಡ.
ಬಾಲಕನ ಚಿಕಿತ್ಸೆಗೆ ನೆರವಿಗೆ ನಿಂತ ತಂಡ
ಇದೀಗ ಈ ಯುವಕರ ತಂಡ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ12 ವರ್ಷದ ಬಾಲಕನ ಚಿಕಿತ್ಸೆಗೆ ನೆರವಾಗಲು ನಿಂತಿದ್ದಾರೆ. ಚಡಚಣ ಪಟ್ಟಣದ 12 ವರ್ಷದ ಬಾಲಕ ಈರಣ್ಣ ದಯಾನಂದ ವಾಲಿ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಬಾಲಕನ ತಾಯಿ ಕೂಲಿ ಮಾಡಿ ಜೀವನ ನಡೆಸಬೇಕಾಗಿದೆ. ಬಾಲಕನ ತಂದೆ ದಯಾನಂದ ವಾಲಿ ಅನಾರೋಗ್ಯಕ್ಕೆ ಒಳಗಾಗಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾನೆ. ಆತನ ಚಿಕಿತ್ಸೆಗಾಗಿ ಇದ್ದ ಮನೆಯನ್ನು ಮಾರಾಟ ಮಾಡಿದ್ದಾರೆ. ಅಶ್ವಿನಿ ಸುಪ್ರೀಯಾ ಎಂಬ ಸಹೋದರಿಯರು ಇದ್ದಾರೆ. ಈ ಮೂವರನ್ನು ಸಾಕುವ ಜವಾಬ್ದಾರಿ ಇವರ ತಾಯಿ ಅಶ್ವಿನಿ ಮೇಲಿದೆ. ಬಾಡಿಗೆ ಮನೆಯಲ್ಲಿ ಉಳಿದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಷ್ಟು ಕಷ್ಟದ ನಡುವೆ ಇದೀಗ ಬಾಲಕ ಈರಣ್ಣನಿಗೆ ಕಿಡ್ನಿ ಸಮಸ್ಯೆಯಾಗಿದೆ.
ಎಡ ಭಾಗದ ಕಿಡ್ನಿ ಇಲ್ಲದೆ ಹುಟ್ಟಿದ್ದ ಬಾಲಕನಿಗೆ ಇದೀಗ ಬಲ ಭಾಗದ ಕಿಡ್ನಿಯೂ ನಿಷ್ಕ್ರೀಯವಾಗುತ್ತಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪರ್ಯಾಯ ಕಿಡ್ನಿ ಹಾಕಿದರೆ ಮಾತ್ರ ಬಾಲಕ ಬದುಕುತ್ತಾನೆ ಎಂಬ ಭರವಸೆ ನೀಡಿದ್ದಾರೆ. ಅದಕ್ಕಾಗಿ 25 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ಹೇಳಿದ್ದಾರೆ. ಅದರ ಜೊತೆಗ ನಿತ್ಯ 600 ರೂಪಾಯಿಯ ಇಂಜೆಕ್ಷನ್ ಕೊಡಿಬೇಕಾಗಿದೆ. ಕಡು ಬಡತನದಲ್ಲಿರುವ ಇವರಿಗೆ ಯಾವುದು ಸಾಧ್ಯವಾಗುತ್ತಿಲ್ಲ. ಇದನ್ನು ಕಂಡು ಚಡಚಣ ಹುಡುಗರ ತಂಡ ಬಾಲಕನ ನೆರವಿಗೆ ನಿಂತಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ, ದಾನಿಗಳ, ಸಂಘ ಸಂಸ್ಥೆಗಳ, ವ್ಯಾಪಾರಸ್ಥರ ಬಳಿ ಸಹಾಯಕ್ಕೆ ಮನವಿ ಮಾಡಿಕೊಂಡಿದೆ. 25 ಲಕ್ಷ ರೂಪಾಯಿ ದೊಡ್ಡ ಮೊತ್ತವಾಗಿದ್ದು ಉಳ್ಳವರು ಸಹಾಯ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಬಾಲಕ ಈರಣ್ಣ ವಾಲಿಗೆ ಚಿಕಿತ್ಸೆ ಕೊಡಿಸಲು ಚಡಚಣ ಹುಡುಗರ ತಂಡ ನಿತ್ಯ ಶಾಲಾ ಕಾಲೇಜುಗಳ ಬಳಿ ತೆರಳಿ ಬಾಲಕನ ಚಿಕಿತ್ಸೆಗೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಜೊತೆಗೆ ಸಂಘ ಸಂಸ್ಥೆಗಳು, ದಾನಿಗಳ ಬಳಿ ತೆರಳಿ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ನಾಲ್ಕಾರು ಯುವಕರು ಸೇರಿದರೆ ಸಾಕು ಮೋಜು ಮಸ್ತಿ ಮಾಡುವ ಇಂದಿನ ಯುವ ಪಡೆಯ ಮದ್ಯೆ ಚಡಚಣ ಯುವಕರ ತಂಡ ವಿಭಿನ್ನವಾಗಿ ನಿಂತಿದೆ. ಇಷ್ಟರ ಮದ್ಯೆ ಕಿಡ್ನಿ ಸಮಸ್ಯೆಗೆ ಒಳಗಾಗಿರುವ ಬಾಲಕ ಈರಣ್ಣ ಹಾಗೂ ಆತನ ತಾಯಿ ಅಶ್ವಿನಿ ಸಹ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ. 25 ಲಕ್ಷ ಹಣ ನಮ್ಮ ಬಳಿ ಇಲ್ಲ. ದಾನಿಗಳು ಸಹಾಯ ಮಾಡಿದರೆ ನನ್ನ ಮಗನನ್ನು ಉಳಿಸಿಕೊಳ್ಳುತ್ತೇನೆ ಎಂದು ಅಶ್ವಿನಿ ಕಣ್ಣಿರು ಹಾಕುತ್ತಿದ್ದಾರೆ.
ಇದನ್ನೂ ಓದಿ:ವಿಜಯಪುರ: ಗುಮ್ಮಟನಗರಿಯಲ್ಲಿ ಭಾವೈಕ್ಯತೆಯ ಉರುಸ್, ಕೋಮು ಸೌಹಾರ್ದ ಮೆರೆವ ವಿಶಿಷ್ಟ ಜಾತ್ರೆ
ನಮ್ಮ ಅಪ್ಪ ನಮ್ಮನ್ನು ಬಿಟ್ಟು ಹೋದ. ಇಬ್ಬರು ಸಹೋದರಿಯರು ಹಾಗೂ ನನಗೆ ನಮ್ಮ ತಾಯಿಯೇ ದಿಕ್ಕು. ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿಂದ ನಾನು ಬದುಕಬೇಕಾಗಿದೆ ಎಂದು ಬಾಲಕ ಸಹಾಯಕ್ಕಾಗಿ ಕೇಳುತ್ತಿದ್ದಾನೆ. ರಕ್ತಸಿಕ್ತ ಆಧ್ಯಾಯಕ್ಕೆ ಸಾಕ್ಷಿಯಾಗಿರೋ ಚಡಚಣದಲ್ಲಿ ಕಿಡ್ನಿ ಸಮಸ್ಯೆಗೆ ಒಳಗಾಗಿ ತೊಂದರೆಯಲ್ಲಿರುವ ಬಾಲಕನನ್ನು ಉಳಿಸಲು ಮುಂದಾಗಿರುವ ಚಡಚಣ ಯುವಕರ ತಂಡದ ಕಾರ್ಯ ಶ್ಲಾಘನೀಯವಾಗಿದೆ. ಚಡಚಣ ಯುವಕರ ಪರಿಶ್ರಮಕ್ಕೆ ಹಾಗೂ ಕಿಡ್ನಿ ಸಮಸ್ಯೆಗೆ ಒಳಗಾದ ಬಾಲಕನಿಗೆ ಸಹಾಯ ಮಾಡಲು ಇಚ್ಚೀಸುವವರು ನೇರವಾಗಿ ಬಾಲಕನ ತಾಯಿ ಅಶ್ವಿನಿ ಅವರ ಬ್ಯಾಂಕ್ ಖಾತೆಗೆ ಅಥವಾ ಅವರ ಗೂಗಲ್ ಪೇ ನಂಬರಿಗೆ ಹಣ ಸಂದಾಯ ಮಾಡಬಹುದಾಗಿದೆ.
ಅಶ್ವಿನಿ ಅವರ ಬ್ಯಾಂಕ್ ಖಾತೆ ಹಾಗೂ ಗೂಗಲ್ ಪೇ ಕುರಿತು ಮಾಹಿತಿ ಇಲ್ಲಿದೆ. Canara Bank Cadacan Branch Account Holder Name: Ashwini Dayanaand Wali Account Num : 110084273887 IFSC Code : CNRB0010813
Google Pay Num : 6362964900
ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ