ಶಿವರಾತ್ರಿ ದಿನದಂದೆ ಉದ್ಘಾಟನೆಯಾಗಲಿದೆ ನವೀಕೃತಗೊಂಡ 770 ಲಿಂಗಗಳ ದೇವಸ್ಥಾನ; ಇಲ್ಲಿದೆ ಅದರ ವಿಶೇಷ

ಶಿವ ಶಿವನೆಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಎಂಬ ಶಿವನಾಮ ಸ್ಮರಣೆಯ ಹಾಡಿನಂತೆ ಶಿವರಾತ್ರಿ ಬಂದೆ ಬಿಟ್ಟಿದೆ. ದೇವರ ದೇವ ಮಹಾದೇವನ ಉಪಾಸಣೆ ಮಾಡುವುದೇ ಶಿವರಾತ್ರಿ. ಪ್ರತಿ ವರ್ಷ ಶಿವರಾತ್ರಿಯಲ್ಲಿ ಶಿವನ ಧ್ಯಾನ ಮಾಡುತ್ತಾ ಉಪವಾಸ ವೃತಾಚರಣೆ ಮಾಡುವುದು ಎಲ್ಲೆಡೆ ಕಂಡು ಬರುತ್ತದೆ. ಈ ಬಾರಿಯೂ ಶಿವರಾತ್ರಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲು ಸಕಲ ತಯಾರಿ ಎಲ್ಲೆಡೆ ನಡೆದಿವೆ. ಇದಕ್ಕೆ ವಿಜಯಪುರ ಜಿಲ್ಲೆ ಹೊರತಾಗಿಲ್ಲ. ಶಿವರಾತ್ರಿಗಾಗಿ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ನಗರದ 770 ಲಿಂಗಗಳ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿದೆ.

ಶಿವರಾತ್ರಿ ದಿನದಂದೆ ಉದ್ಘಾಟನೆಯಾಗಲಿದೆ ನವೀಕೃತಗೊಂಡ 770 ಲಿಂಗಗಳ ದೇವಸ್ಥಾನ; ಇಲ್ಲಿದೆ ಅದರ ವಿಶೇಷ
ವಿಜಯಪುರ 770 ಲಿಂಗಗಳ ದೇವಸ್ಥಾನ
Edited By:

Updated on: Mar 07, 2024 | 7:05 PM

ವಿಜಯಪುರ, ಮಾ.07: 1954 ರಲ್ಲಿ ಬಂಥನಾಳ ಶ್ರೀ ಸಂಗನಬಸವ ಮಹಾಶಿವಯೋಗಿಗಳ ದಿವ್ಯ ಸಂಕಲ್ಪದಂತೆ ವಿಜಯಪುರ (Vijayapura) ನಗರದಲ್ಲಿ 770 ಅಮರ ಗಣಾಧೀಶ್ವರರ (ಅಮರಗಣಂಗಳ) ಸ್ಮಾರಕ ಲಿಂಗಗಳ ದೇವಾಲಯದ ಪ್ರತಿಷ್ಠಾಪನೆ ನಡೆದಿತ್ತು. ನಂತರ 1960 ರಲ್ಲಿ 770 ಅಮರ ಗಣಾಧೀಶ್ವರರ ದೇವಾಲಯ ವಿಜೃಂಭಣೆಯಿಂದ ಲೋಕಾರ್ಪಣೆಯಾಗಿತ್ತು. ಈ ವೇಳೆ ಅಂದಿನ ಮೈಸೂರು ಮಹಾರಾಜರು, ಬಬಲೇಶ್ವರ ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗ, ಸಿದ್ದಗಂಗಾ ಮತ್ತು ಸುತ್ತೂರು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. 12 ನೇ ಶತಮಾನದಲ್ಲಿ 770 ಅಮರಗಣಂಗಳ ಅಂದರೆ ಶರಣರು ಬಸವೇಶ್ವರ ಜೊತೆಗೂಡಿ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಿ, ಸಮಾನತೆಗಾಗಿ ಶ್ರಮಿಸಿದ್ದರು. ಈ ಹಿನ್ನಲೆ ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಹೆಸರಿನಲ್ಲಿಯೇ 770 ದಂಪತಿ, ತಲಾ 151 ರೂಪಾಯಿ ಭಕ್ತಿ ಸಮರ್ಪಿಸಿ ಲಿಂಗ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದರು. ಅಂದಿನಿಂದ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬಂದಿವೆ.

ಕಳೆದ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿಈ  770 ಲಿಂಗಗಳ ದೇವಸ್ಥಾನ ದರ್ಶನಕ್ಕೆ ಆಗಮಿಸಿದ್ದ ಬಿಎಲ್​​ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಹಾಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ದೇವಸ್ಥಾನದ ಗೋಡೆಗಳು, ಮೇಲ್ಛಾವಣಿ ಮತ್ತು ಲಿಂಗಗಳ ನವೀಕರಣ ಮತ್ತು ಪುನರುಜ್ಜೀವನ ಅಗತ್ಯವಿರುವದನ್ನು ಮನಗಂಡು ದುರಸ್ಥಿಗೆ ಕ್ರಮ ಕೈಗೊಂಡಿದ್ದರು. ಬಿ ಎಲ್ ಡಿ ಇ ಡೀಮ್ಡ್ ವಿವಿಯಿಂದ 1.51 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಮೇಲ್ಛಾವಣಿ ಹಾಗೂ ಗೋಡೆಗಳನ್ನು ನವೀಕರಣ ಮಾಡಿಸಿದ್ದಾರೆ. ಒಳಾಂಗಣದಲ್ಲಿ ಪೂಜಾ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಎಲ್ಲ 770 ಲಿಂಗಗಳನ್ನು ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ:ಕಡಿಮೆ ಬಜೆಟ್​​ನಲ್ಲಿ ಶಿವರಾತ್ರಿ ಹಬ್ಬಕ್ಕೆ ಮನೆಯ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಐಡಿಯಾ

ಕಾರ್ಕಳದ ಕೃಷ್ಣ ಶಿಲೆಯಲ್ಲಿ ತಯಾರಾದ 770 ಹೊಸ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ, ಒಳಾಂಗಣದ ಗೋಡೆ ಮತ್ತು ನೆಲ ಹಾಸುಗಳನ್ನು ಗ್ರಾನೈಟ್ ಬಳಸಿ, ನವೀಕರಿಸಲಾಗಿದೆ. ನಾಳೆ(ಮಾ.08) ಬೆಳಿಗ್ಗೆ 10.30 ಕ್ಕೆ ನವೀಕೃತಗೊಂಡ 770 ಲಿಂಗಗಳ ದೇವಸ್ಥಾನ ಉದ್ಘಾಟನೆಯಾಗಲಿದೆ. ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್​ ಉದ್ಘಾಟನೆ ನೆರವೇರಿಸಲಿದ್ದಾರೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹಾಗೂ ಇತರರು ಭಾಗಿಯಾಗಲಿದ್ದಾರೆ. ಈ ವೇಳೆ ವಿಶೇಷ ಪೂಜೆ ಪುನಸ್ಕಾರ, ಶಿವಧ್ಯಾನ, ಶಿವಸ್ತೋತ್ರ, ಮಂತ್ರ ಘೋಷಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us