ವಿಜಯಪುರ: ತಿಕೋಟಾ ತಾಲೂಕಿನ ಹಲವೆಡೆ ಮತ್ತೆ ಕಂಪಿಸಿದ ಭೂಮಿ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹಲವೆಡೆ ಮತ್ತೆ ಭೂಮಿ ಕಂಪನದ ಅನುಭವಾಗಿದೆ.
ವಿಜಯಪುರ: ಕಳೆದ 2 ವರ್ಷದಿಂದ ವಿಜಯಪುರದಲ್ಲಿ (Vijayapura) ಭೂಕಂಪನದ ಅನುಭವವಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಈಗ ಮತ್ತೆ ಜಿಲ್ಲೆಯ ತಿಕೋಟಾ (Tikota) ತಾಲೂಕಿನ ಹಲವೆಡೆ ಮತ್ತೆ ಭೂಮಿ ನಡುಗಿದ ಅನುಭವಾಗಿದೆ. ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ ಮತ್ತು ಮಲಕನದೇವರಹಟ್ಟಿ ಭೂಮಿ ಕಂಪಿಸಿದೆ.
ಹಾಗೆ ಸಿದ್ದಾಪುರ.ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನವಾಗಿದ್ದು, ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದಲ್ಲೂ ಕಂಪಿಸಿದ ಭೂಕಂಪನವಾಗಿದೆ. ನಿನ್ನೆ (ಫೆ.2) ರಾತ್ರಿ 10.05ಕ್ಕೆ ಮತ್ತು ತಡರಾತ್ರಿ 1.47ಕ್ಕೆ ಭೂಮಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.7ರಷ್ಟು ದಾಖಲಾಗಿದೆ.
2022ರಲ್ಲಿ ಹಲವು ಭಾರಿ ಕಂಪಿಸಿದ್ದ ಭೂಮಿ
ವಿಜಯಪುರ ಜಿಲ್ಲೆಯಲ್ಲಿ 2022ರಲ್ಲಿ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹಲುವು ಭಾರಿ ಭೂಕಂಪನದ ಅನುಭವವಾಗಿತ್ತು. ಅಕ್ಟೋಬರ್ 2 ರಂದು ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿಯು ಕಂಪಿಸಿತ್ತು . ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.5ರಷ್ಟು ದಾಖಲಾಗಿತ್ತು. ವಿಜಯಪುರ ಬಳಿಯ ಅಲಿಯಾಬಾದ್ ಭೂಕಂಪನದ ಕೇಂದ್ರವಾಗಿತ್ತು.
ವಿಜಯಪುರ ನಗರದಲ್ಲಿ ಅಕ್ಟೋಬರ್ 2 ರ ನಸುಕಿನಲ್ಲಿಯೂ 3 ಬಾರಿ ಲಘು ಭೂಕಂಪನವಾಗಿತ್ತು. ಶುಕ್ರವಾರ ಮುಂಜಾನೆ 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ಜನರು ನಿದ್ದೆಯಲ್ಲಿದ್ದ ಕಾರಣ ಹೆಚ್ಚಿನವರಿಗೆ ಭೂಕಂಪನದ ಅನುಭವ ಅಷ್ಟಾಗಿ ಆಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇಪದೆ ಭೂಕಂಪನದ ಅನುಭವ ಜನರಿಗೆ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ವಿಧಾನ ಪರಿಷತ್ನಲ್ಲಿಯೂ ಪ್ರಸ್ತಾಪ
ಈ ಹಿಂದೆ 2022ರಲ್ಲಿ ವಿಧಾನ ಪರಿಷತ್ನಲ್ಲಿಯೂ ಪ್ರಸ್ತಾಪವಾಗಿತ್ತು. ‘ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು’ ಎಂದು ಸದಸ್ಯರಾದ ಸುನೀಲಗೌಡ ಪಾಟೀಲ ಒತ್ತಾಯಿಸಿದ್ದರು. ‘ಜಿಲ್ಲೆಯಲ್ಲಿ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನದ ಭೀತಿಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು’ ಎಂದು ಅವರು ಒತ್ತಾಯಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಆರ್.ಅಶೋಕ, ‘ವಿಜಯಪುರ ಜಿಲ್ಲೆಯಲ್ಲಿ 2021 ಮತ್ತು 2022ರಲ್ಲಿ ಭೂಕಂಪನ ಉಂಟಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡ ಜಿಲ್ಲೆಯ ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಭೂಕಂಪಗಳ ಬಗ್ಗೆ ಅರಿವು ಮೂಡಿಸಿದೆ. ಮುಂದಿನ ದಿನಗಳಲ್ಲಿ ಭೂಕಂಪನ ಕುರಿತಂತೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು’ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ