ಕೂಡಲ ಸಂಗಮ ಶ್ರೀ ಬಿಟ್ಟರೆ ಪಂಚಮಸಾಲಿ ಸಮಾಜದ ಇತರೆ ಸ್ವಾಮೀಜಿ ಬುಕ್ಕಿಂಗ್ ಸ್ವಾಮಿಗಳು: ಶಾಸಕ ಯತ್ನಾಳ್ ಆರೋಪ
ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ಉಳಿದ ನಮ್ಮ ಸಮಾಜದ ಇತರೆ ಸ್ವಾಮೀಜಿಗಳು ಬುಕ್ಕಿಂಗ್ ಸ್ವಾಮೀಜಿಗಳು ಎಂದು ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದರು.
ವಿಜಯಪುರ: ಕೂಡಲ ಸಂಗಮ ಸ್ವಾಮೀಜಿ (Swamiji) ಬಿಟ್ಟರೆ ಉಳಿದ ನಮ್ಮ ಸಮಾಜದ ಇತರೆ ಸ್ವಾಮೀಜಿಗಳು ಬುಕ್ಕಿಂಗ್ (booked) ಸ್ವಾಮೀಜಿಗಳು ಎಂದು ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದರು. ನಮ್ಮ ಸಮಾಜದ ಮೀಸಲಾತಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟವರು ಕೂಡಲಸಂಗಮ ಶ್ರೀಗಳು. ಉಳಿದವರೆಲ್ಲಾ ಬುಕ್ಕಿಂಗ್ ಸ್ವಾಮಿಗಳು, ಅವರೆಲ್ಲಾ ರೊಕ್ಕಾ ಹೊಡಕೊತ್ತ ಶ್ರೀ ಗುರು ಬಸವಲಿಂಗಾಯ ನಮಃ ಅನ್ನುತ್ತಾರೆ. ಫೈವ್ ಸ್ಟಾರ್ ಹೊಟೇಲ್ ತರಹ ಮಠ ಕಟ್ಟಿಕೊಂಡು ಕುಳಿತಿದ್ದಾರೆ. ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ ಎಂದು ತಿಳಿದು ನಮಗಿನ್ನು ಉಳಿಗಾವಿಲ್ಲಾ ಎಂಬುದು ಅವರಿಗೆ ಗೊತ್ತಾಗಿದೆ. ಈಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಗದಗ ಪ್ರವಾಸ ಮಾಡುತ್ತೇವೆ. ಹರಿಹರದಲ್ಲಿ ಸಭೆಯನ್ನು ಮಾಡುತ್ತೇವೆಂದು ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ವಿರುದ್ದ ಕಿಡಿಕಾಡಿದರು.
ಪಂಚಮಸಾಲಿ ಹಿಂದುಳಿದ ಜಾಗೃತಿ ಸಭೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅದು ನಮಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು. ನಾವೇನು ಹುಚ್ಚನಾ ಎಂದು ಪ್ರಶ್ನೆ ಮಾಡಿದರು. ನಿಮ್ಮೊಳಗೆ ನರನಾಡಿ ಎಷ್ಟಿವೆ ಎಂಬುದು ನಮ್ಮ ಹುಡುಗರಿಗೆ ಗೊತ್ತಿದೆ. ಇದರ ಹಿಂದೆ ಒಬ್ಬನಿದ್ದಾನೆ, ರೊಕ್ಕಾ ಕೊಡುತ್ತಾರೆ. ಇವರು ಜಾಗೃತಿ ಸಭೆ ಮಾಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ಜೊತೆಗೆ ಸಚಿವ ಮುರುಗೇಶ ನಿರಾಣಿ ವಿರುದ್ದ ಶಾಸಕ ಯತ್ನಾಳ ವಾಗ್ದಾಳಿ ಮಾಡಿದರು.
ಶಿವಾನಂದ ಪಾಟೀಲ್ ಹಾಗೂ ಶಾಸಕ ಯತ್ನಾಳ ನಡುವೆ ವಾಕ್ಸಮರ
2023ರ ವಿಧಾನಸಭಾ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹಾಗೂ ನಗರ ಶಾಸಕ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ನಡುವೆ ವಾಕ್ಸಮರ ನಡೆದಿದೆ. ವಿಜಯಪುರ ನಗರ ಕ್ಷೇತ್ರದಿಂದ ಶಾಸಕ ಶಿವಾನಂದ ಪಾಟೀಲ್ ಪುತ್ರಿ ಕಣಕ್ಕಿಳಿಯೋ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಶಾಸಕ ಯತ್ನಾಳ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ನಿಲ್ಲೋರು, ತಿಂಡಿ ಇದ್ದವರು ನಿಲ್ಲಲಿ. ಮುಂದಿನ ಬಾರಿ ಮುಸ್ಲೀಂರನ್ನೇ ಆರಿಸಿ ತರುತ್ತೇನೆಂದು ಹೇಳಿದ್ದನಲ್ಲಾ ಎಂದು ಶಿವಾನಂದ ಪಾಟೀಲ್ ವಿರುದ್ದ ವಾಗ್ದಾಳಿ ಮಾಡಿದರು. ನಿಮ್ಮ ಮುಸ್ಲೀಂ ಅಭಿಮಾನ ಎಲ್ಲಿ ಹೋಯ್ತು, ಅವರ ಬಗ್ಗೆ ಚಿಂತೆ ಮಾಡಬೇಕು. ಮುಸ್ಲೀಂರನ್ನೇ ಎಂಎಲ್ಎ ಮಾಡುತ್ತೇನೆಂದು ಸಿದ್ದರಾಮಯ್ಯ ಬಂದಿದ್ದ ವೇಳೆ ಭಾಷಣ ಮಾಡಿದ್ದರು ಎಂದು ಹೇಳಿದರು.
ಬೇಡ ಜಂಗಮ ಮೀಸಲಾತಿ ಕುರಿತು ನಾನು ಮಾತನಾಡಲ್ಲ
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಲ್ಲೊಬ್ಬನಿದ್ದಾ ಕ್ಷೇತ್ರ ಬದಲಾವಣೆ ಮಾಡಬೇಕೆಂದಕೊಂಡಿದ್ದ. ಆತನಿಗೆ ಯಾರೂ ಹಣ ಕೊಡಲಿಲ್ಲಾ. ಇದ್ದದ್ದಕ್ಕೆ ಶ್ರೀಪಾದ ಗತಿ ಎಂದು ಅಲ್ಲೇ ಹೋಗಿದ್ದಾನೆಂದು ಪರೋಕ್ಷವಾಗಿ ಶಿವಾನಂದ ಪಾಟೀಲ್ ವಿರುದ್ದ ಕಿಡಿಕಾರಿದರು. ಬೇಡ ಜಂಗಮ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿದ್ದು, ಬೇಡ ಜಂಗಮ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬುರ ಕುರಿತು ನಾನು ಮಾತನಾಡಲ್ಲಾ. ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ನೀವು ಯಾರು ಎಂದು ಮಾಧ್ಯಮದವರನ್ನು ಯತ್ನಾಳ ಪ್ರಶ್ನೆ ಮಾಡಿದರು. ಯಾರ ಬಗ್ಗೆ ಮಾತನಾಡಬೇಕು ಬಿಡಬೇಕೆಂಬುದರ ಸ್ವಾತಂತ್ರ್ಯ ನನಗಿದೆ ಎಂದು ಶಾಸಕ ಯತ್ನಾಳ ಹೇಳಿದರು.
ರೈತರಿಗೂ ಯೋಗ್ಯ ದರ ಸಿಗಬೇಕು
ಹಾಲಿನ ದರ ಹೆಚ್ಚಳ ಮಾಡಿ ಮತ್ತೆ ಆದೇಶ ವಾಪಸ್ ಪಡೆದ ಸರ್ಕಾರದ ನಡೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ಏನೂ ಅರ್ಥ ಆಗದಂತಾಗಿದೆ. ಹಾಲಿನ ದರ ರೈತರಿಗೂ ಯೋಗ್ಯ ದರ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ರೈತರಿಗೆ ಸಿಗುವ ಹಾಲಿನ ಬೆಲೆಯಲ್ಲಿ ಹಸು, ಎಮ್ಮೆಗಳ ಪೋಷಣೆ ಮಾಡಲಾಗುವುದಿಲ್ಲ. ಸರ್ಕಾರ ವೈಜ್ಞಾನಿಕವಾದ ಬೆಲೆ ನಿಗದಿ ಮಾಡಬೇಕು. ಒಮ್ಮೆ ಮಾಡಿದ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುವ ಕೆಟ್ಟ ಸಂಸ್ಕೃತಿಯಿಂದ ಹೊರ ಬರಬೇಕೆಂದು ಹೇಳಿದರು.
ಸತೀಶ್ ಜಾರಕಿಹೊಳಿ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ
ಗೋಕಾಕ್ಗೆ ಹೇಗೆ ಬರುತ್ತೀಯಾ ಎಂದು ನನಗೆ ಸವಾಲು ಹಾಕಿದ್ದರು. ಗೋಕಾಕ್ ಕ್ಷೇತ್ರ ಒಂದು ರೀತಿ ಬಿಹಾರ ರಾಜ್ಯವಾದಂತಾಗಿತ್ತು. ಜಾರಕಿಹೊಳಿ ಪ್ರಭಾವವಿರುವ ಗೋಕಾಕ್ಗೆ ಯಾರೂ ಹೋಗಲ್ಲ. ಅಲ್ಲಿ ಹೋಗಿ ಭಾಷಣ ಮಾಡುವ ಧಮ್ ಯಾರಿಗಿಲ್ಲ ಅಂದಿದ್ದರು. ಜಾರಕಿಹೊಳಿ ಪರವಾನಗಿ ಇಲ್ಲದೇ ಯಾವ ಲೀಡರ್ ಬರಬಾರದು. ಅವರದ್ದೇ ಒಂದು ಸಾಮ್ರಾಜ್ಯದಂತಾಗಿತ್ತು. ಹಾಗಾಗಿ ಜಾರಕಿಹೊಳಿ ಸವಾಲಿಗೆ ಉತ್ತರ ನೀಡಲು ಹೋಗಿದ್ದೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಶಾಸಕ ಯತ್ನಾಳ್ ಮತ್ತೆ ವಾಗ್ದಾಳಿ ಮಾಡಿದರು. ಜಾರಕಿಹೊಳಿಗೆ ಅಂತ್ಯಕಾಲ ಬಂದಿದೆ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ. ಇಷ್ಟು ದಿನ ಮಾಡಿದಂತೆ ಇನ್ಮುಂದೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Wed, 16 November 22