ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದ್ರೆ ಸಾಕಾಗಲ್ಲ, ಎನ್​​ಕೌಂಟರ್​ ಮಾಡಿ ಬುದ್ಧಿ ಕಲಿಸಿ: ಯತ್ನಾಳ್​

ಮಂಗಳೂರಿನ ಆಟೋವೊಂದರಲ್ಲಿ ಉಂಟಾದ ಕುಕ್ಕರ್​ ಬಾಂಬ್​​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದರೆ ಸಾಕಾಗಲ್ಲ, ಎನ್​​ಕೌಂಟರ್​ ಮಾಡಿ ಬುದ್ಧಿ ಕಲಿಸಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್​​ ಗುಡುಗಿದ್ದಾರೆ.

ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದ್ರೆ ಸಾಕಾಗಲ್ಲ, ಎನ್​​ಕೌಂಟರ್​ ಮಾಡಿ ಬುದ್ಧಿ ಕಲಿಸಿ: ಯತ್ನಾಳ್​
ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್​
TV9kannada Web Team

| Edited By: Vivek Biradar

Nov 21, 2022 | 4:23 PM

ವಿಜಯಪುರ: ಮಂಗಳೂರಿನ (Mangaluru) ಆಟೋವೊಂದರಲ್ಲಿ ಉಂಟಾದ ಕುಕ್ಕರ್​ ಬಾಂಬ್​​ ಸ್ಫೋಟ (Auto Bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದರೆ ಸಾಕಾಗಲ್ಲ, ಎನ್​​ಕೌಂಟರ್​ ಮಾಡಿ ಬುದ್ಧಿ ಕಲಿಸಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್ (Basavanagowda Patil yatnal)​​ ಗುಡುಗಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉತ್ತರ ಪ್ರದೇಶದ ಮಾದರಿ ಇಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ ಫ್ರೀಹ್ಯಾಂಡ್ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಇಲ್ಲದಿದ್ದರೆ ಉಗ್ರರು ರಾಜಾರೋಷವಾಗಿ ದುಷ್ಕೃತ್ಯ ಎಸಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯವರು, ಆದರೆ ಕಠಿಣಕ್ರಮ ಕೈಗೊಳ್ಳುತ್ತಿಲ್ಲ. ಒಳ್ಳೆಯತನ ನಡೆಯಲ್ಲ, ಖಡಕ್​ ಆಗಿ ನಿರ್ಣಯ ಕೈಗೊಳ್ಳಬೇಕು. ಸಿಎಂ ಬೊಮ್ಮಾಯಿ ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಅಂತಾರೆ. ಆದರೆ ಆದಷ್ಟು ಬೇಗ ಒಂದು ಒಳ್ಳೆಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮೊದಲ ಬಾರಿಗೆ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದ ಯತ್ನಾಳ್​

ಯತ್ನಾಳ್​ ನಗರ ಶಾಸಕರಾದ ಬಳಿಕ‌ ಇದೇ ಮೊದಲ ಬಾರಿಗೆ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾಗಿದ್ದಾರೆ. ಈ ಕುರಿತು ಸಭೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಗೆ ಆಹ್ವಾನ ನೀಡಿದ್ದಾರೆ, ಬಂದಿದ್ದೇನೆ. ಈ ಮೊದಲು ಸಹ ಆಹ್ವಾನಿಸುತ್ತಿದ್ದರು. ಮಧ್ಯ ಅವರಿವರು ಪಕ್ಷದ ರಾಜ್ಯ ನಾಯಕರ ಬಳಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು. ಮೊನ್ನೆ ನಡೆದ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ರಾಜ್ಯ ನಾಯಕರಿಗೆ ಮನವರಿಕೆ ಆಗಿದೆ. ಯತ್ನಾಳ ಹಿಂದುತ್ವವಾದಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನ್ನೋದು ರಾಜ್ಯ ನಾಯಕರಿಗೆ ಮನವರಿಕೆ ಆಗಿದೆ. ಅದಕ್ಕೆ ಆಹ್ವಾನ ನೀಡಿದ್ದಾರೆ ಎಂದು ತಿಳಸಿದರು.

ಕಾರ್ಖಾನೆ ಮಾಲೀಕರು ರೈತರೊಂದಿಗೆ ಸಹಕಾರ ಇಲ್ಲ, ರೈತರ ಭಾವನೆಗಳಿಗೆ ಸ್ಪಂದಿಸೋದಿಲ್ಲ

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರವಾಗಿ ಮಾತನಾಡಿದ ಅವರು ಮುಧೋಳದಲ್ಲಿ ಮಾತ್ರ ಯಾಕೆ ಪ್ರತಿಭಟನೆ ಆಗುತ್ತಿದೆ? ಯಾಕಂದರೆ ಅವರು ರೈತರೊಂದಿಗೆ ಸಹಕಾರ ಇಲ್ಲ, ರೈತರ ಭಾವನೆಗಳಿಗೆ ಸ್ಪಂದಿಸೋದಿಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್​ ನಿರಾಣಿ ವಿರುದ್ಧ ವಾಗ್ದಾಳಿ ಮಾಡಿದರು.

ಕಾರ್ಖಾನೆ ಮಾಲೀಕರು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕಥೆ ಮಾಡಿದರೆ ರೈತರು ಒಪ್ಪುತ್ತಾರೆ. ಅದನ್ನು ಬಿಟ್ಟು ದುರಹಂಕಾರ ಮಾಡಿದರೆ, ನಾನು ಏನು ಬೇಕಾದರೂ ಮಾಡಬಹುದು ಎಂದು ಮಾಡಿದರೆ ರೈತರು ರೊಚ್ಚಿಗೇಳುತ್ತಾರೆ ಎಂದು ಹೇಳಿದರು.

ಹಾಲುಮತ ಸಮಾಜ ಎಸ್​​ಟಿಗೆ ಹೋಗುವುದು ನಿರ್ಣಯ ಆಗಬೇಕಿದೆ

ಪಂಚಮಸಾಲಿ‌ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಲುವಾಗಿ ನಡೆಯುತ್ತಿರುವ ಹೋರಾಟದ ಕುರಿತು ಮಾತನಾಡಿದ ಅವರು ಮೊನ್ನೆ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ಮೊದಲ‌ ಹೆಜ್ಜೆ. ಎರಡನೇ ಹೆಜ್ಜೆಯಾಗಿ ಹಿಂದುಳಿದ ವರ್ಗಕ್ಕೆ ಅನೇಕ ಸಮುದಾಯ ಸೇರಿಸಬೇಕಿದೆ. ಎಸ್​ಟಿ ತಳವಾರ ಬಗ್ಗೆ ವಿಧಾನಸಭೆಯಲ್ಲಿ ನಾವು ಹೋರಾಟ ಮಾಡಿದ ಪರಿಣಾಮ ಇವತ್ತು ಅವರಿಗೆ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಮುಂದೆ ಹಾಲುಮತ ಸಮಾಜ ಎಸ್​ಟಿಗೆ ಹೋಗುವುದು ನಿರ್ಣಯ ಆಗಬೇಕಿದೆ ಎಂದರು.

ಸಿದ್ದರಾಮಯ್ಯ ಅವರು ಯಾವ ರೀತಿ ಮೇಲ್ಜಾತಿಯವರನ್ನು ದ್ವೇಷ ಮಾಡುತ್ತಾರೆ ಗೊತ್ತಿಲ್ಲ. ಒಬಿಸಿಗೆ ಶೇ 10 ಪ್ರತಿಶತ ಮೀಸಲಾತಿ ಕೊಟ್ಟರೆ ಸಿದ್ದರಾಮಯ್ಯ ಅವರಿಗೆ ಏನು ನೋವು ಆಗುತ್ತೆ?. ಲಿಂಗಾಯತರಲ್ಲಿ, ಬ್ರಾಹ್ಮಣರಲ್ಲಿ, ಮರಾಠರಲ್ಲಿ, ರಜಪೂತರಲ್ಲಿ, ವಿಶ್ವಕರ್ಮ ಸಮಾಜಗಳಲ್ಲಿ ಬಡತನ ಇಲ್ವಾ? ಎಲ್ಲ ಸಮಾಜದಲ್ಲಿ ಬಡತನ ಎಂಬುದು ಇದೆ. ಯಾವುದೇ ಒಂದು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎಂದರೆ ಎಲ್ಲರೂ ಟಾಟಾ ಬಿರ್ಲಾ ಅಲ್ಲ. ಪ್ರಧಾನಿ ಮೋದಿ ಅವರು ಮುಂದುವರೆದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10 ಪ್ರತಿಶತ ಮೀಸಲಾತಿ ಕೊಟ್ಟಿದ್ದಾರೆ ಎಂದು ಮಾತನಾಡಿದರು.

ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಯತ್ನಾಳ ವಾಗ್ದಾಳಿ

ಸಿದ್ದರಾಮಯ್ಯ ಒಬಿಸಿ ಸಮಾಜಕ್ಕೆ ಮೀಸಲಾತಿ ಕೊಟ್ಟಿದ್ದರ ಬಗ್ಗೆ ವಿರೋಧ ಮಾಡುತ್ತಾನೆ. ಅವರ ಬಣ್ಣ ಬಯಲಾಗಿದೆ, ನೀವು ಬರೀ ಮುಸ್ಲಿಂರಿಗೆ ಎಲ್ಲ ಕೊಡಿ ಎಂದು ಹೇಳುತ್ತೀರಿ. ಮುಸ್ಲಿಂರಿಗೆ ಮೀಸಲಾತಿ ಕೊಡಬೇಕು. ಮುಸ್ಲಿಂರು 2ಎನಲ್ಲೂ ಇದ್ದಾರೆ ಅಲ್ಪಸಂಖ್ಯಾತರಲ್ಲೂ ಇದ್ದಾರೆ. ಈ ದೇಶದ ಅನ್ನ ತಿಂತಾರೆ, ಈ ದೇಶದ ಸಬ್ಸಿಡಿ ತಗೋತಾರೆ, ಈ ದೇಶದ ಗ್ಯಾಸ್ ತಗೋತಾರೆ‌. ಆದರೂ ಮೋದಿ ಅವರಿಗೆ ಬಾಯಿಗೆ ಬಂದಂಗೆ ಬೈತಾರೆ. ಯಾಕೆ ಮೇಲ್ಜಾತಿಯವರು ಕಾಂಗ್ರೆಸ್​ಗೆ ವೋಟ್ ಹಾಕಲ್ವಾ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯವರಿಗೆ ಲಿಂಗಾಯತರು, ಬ್ರಾಹ್ಮಣರು ಓಟ್ ಹಾಕಿಲ್ವಾ? ಸಿದ್ದರಾಮಯ್ಯ ಈ ದ್ವಿಮುಖ‌ ನೀತಿಯೇ ಅವರ ಅಂತ್ಯಕ್ಕೆ ಕಾರಣ. ನಿನ್ನೆ ಸಿದ್ದರಾಮಯ್ಯ ಕೊಟ್ಟ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಅವರು ತಕ್ಷಣ ಈ ರಾಜ್ಯದ ಒಬಿಸಿ ಸೇರ್ಪಡೆಯಾಗುವ ಎಲ್ಲಾ ಸಮುದಾಯಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹದಿನೈದು ದಿನದಲ್ಲಿ ರಾಷ್ಟ್ರೀಯ ಆ್ಯಪ್ ಬರೋದಿದೆ

ವೋಟರ್ ಐಡಿ ಅಕ್ರಮ ಹಗರಣ ವಿಚಾರವಾಗಿ ಮಾತನಾಡಿದ ಅವರು ನಮ್ಮ ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ವೇಳೆ ಸಾಕಷ್ಟು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ. ಹೀಗಾಗಿ ಬದುಕಿದ್ದವರು ಸತ್ತಿದ್ದಾರೆ. ಸತ್ತವರು ಬದುಕಿದ್ದಾರೆ ಎಂಬಂತೆ ಆಗಿದೆ. ಇದು ಯಾವುದೋ ಒಂದೇ ಕಮ್ಯೂನಿಟಿಗೆ ಆಗಿದ್ದಲ್ಲ. ಮುಸ್ಲಿಂ ಮತ್ತು ಹಿಂದೂಗಳದ್ದು ಆಗಿವೆ.

ಈಗ ಆ್ಯಪ್ ಬಂದಿದೆ, ದೇಶದಲ್ಲಿ ಯಾವುದೋ‌ ಮೂಲೆಯಲ್ಲಿ ಸೇರಿ ಎರಡೆರಡು ವೋಟರ್ ಐಡಿ ಇದ್ದರೂ ಡಿಲೀಟ್ ಆಗುತ್ತದೆ. ಇನ್ನು ಹದಿನೈದು ದಿನದಲ್ಲಿ ರಾಷ್ಟ್ರೀಯ ಆ್ಯಪ್ ಬರೋದಿದೆ. ಅದು ಬಂದರೆ ಒಬ್ಬ ಮತದಾರ ಕಾಶ್ಮೀರದಲ್ಲೂ ಹಾಗೂ ವಿಜಯಪುರದಲ್ಲೂ ವೋಟರ್ ಐಡಿ ಮಾಡಿಸಿದರೆ ಅದು ಗೊತ್ತಾಗುತ್ತದೆ ಎಂದು ನುಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada