ಕೆಲವರು ಬ್ಲಾಕ್ಮೇಲ್ ಮಾಡಿ, 50- 100 ಕೋಟಿ ಕೊಟ್ಟು ಸಚಿವರಾಗಿದ್ದಾರೆ; ನಿರಾಣಿ ವಿರುದ್ಧ ಯತ್ನಾಳ್ ಹೊಸ ಬಾಂಬ್
ಸಚಿವ ಸ್ಥಾನಕ್ಕೆ ನಾನು 50 ಕೋಟಿ , 100 ಕೋಟಿ ಎಲ್ಲಿಂದ ತಂದು ಕೊಡಲಿ? ಅದಕ್ಕಾಗಿ ಎಷ್ಟು ಲೂಟಿ ಮಾಡಬೇಕಾಗುತ್ತದೆ? ನಮ್ಮ ಪಕ್ಷದಲ್ಲಿ ಒಬ್ಬ ಇದ್ದಾನೆ, ಅವನು ಸಿಡಿ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಮಂತ್ರಿಯಾಗಿದ್ದಾನೆ ಎಂದ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ವಿಜಯಪುರ: ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಇದೀಗ ಇನ್ನೊಂದು ಬಾಂಬ್ ಹಾಕಿದ್ದಾರೆ. ಸಿಎಂ ಪೋಸ್ಟ್ಗೆ 2,500 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಈಗಾಗಲೇ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಯತ್ನಾಳ್ ಅವರ ಹೇಳಿಕೆಯಿಂದ ಬಿಜೆಪಿ (BJP) ನಾಯಕರು ತಲೆತಗ್ಗಿಸುವಂತಾಗಿತ್ತು. ಅದರ ಬೆನ್ನಲ್ಲೇ ವಿಜಯಪುರದಲ್ಲಿ ಇಂದು ಮತ್ತೊಂದು ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಕೆಲವರು 50 ಕೋಟಿ – 100 ಕೋಟಿ ರೂ. ಕೊಟ್ಟು ಮಂತ್ರಿ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಒಬ್ಬ ಇದ್ದಾನೆ, ಅವನು ಅರ್ಹತೆ ಮೇಲೆ ಸಚಿವನಾಗಿಲ್ಲ. ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾನೆ ಎಂದ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ವಿಜಯಪುರ ತಾಲೂಕಿನ ಹಿಟ್ಟನಳ್ಳಿಯಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಅವರು ಸಚಿವ ಸ್ಥಾನಕ್ಕೋಸ್ಕರ ಬ್ಲ್ಯಾಕ್ಮೇಲ್ ಮಾಡೋದು, ನಾವು ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೇಳೋದು. ಸಮಾಜಕ್ಕೆ ಮೀಸಲಾತಿ ಕೇಳುವುದು ಬ್ಲ್ಯಾಕ್ಮೇಲ್ ಅಲ್ಲ . ಆದರೆ, ಸಿಡಿ ಇಟ್ಟುಕೊಂಡು ಮಂತ್ರಿಗಿರಿ ಕೇಳುವುದು ಬ್ಲ್ಯಾಕ್ಮೇಲ್ ಎಂದು ಪರೋಕ್ಷವಾಗಿ ಸಚಿವ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸಿಡಿ ಇಟ್ಟುಕೊಂಡು, ಯಾರ್ಯಾರದೋ ವೀಕ್ನೆಸ್ ಇಟ್ಟುಕೊಂಡು ಮಂತ್ರಿ ಪದವಿ ಪಡೆಯುವವನು ನಾನಲ್ಲ. ನಾನು ಯಾರಿಗೂ ರೊಕ್ಕ ಕೊಡುವ ಮಗನಲ್ಲ. ಸಚಿವ ಸ್ಥಾನಕ್ಕೆ ನಾನು 50 ಕೋಟಿ , 100 ಕೋಟಿ ಎಲ್ಲಿಂದ ತಂದು ಕೊಡಲಿ? ಅದಕ್ಕಾಗಿ ಎಷ್ಟು ಲೂಟಿ ಮಾಡಬೇಕಾಗುತ್ತದೆ? 50 ಕೋಟಿ ರೂಪಾಯಿ ಸಿದ್ದಸಿರಿ ಬ್ಯಾಂಕ್ ನಲ್ಲಿ ಡಿಪಾಸಿಟ್ ಇಟ್ಟರೆ ಎಷ್ಟು ಬಡ್ಡಿ ಬರುತ್ತದೆ ಅಂತ ಗೊತ್ತಿದೆಯೇನು? ಶೇ.1ರಷ್ಟು ಬಡ್ಡಿ ಬಂದರೂ ತಿಂಗಳಿಗೆ 50 ಲಕ್ಷ ಆಗುತ್ತದೆ. ಇದಕ್ಕೆಲ್ಲಾ ಸುಮ್ಮನೆ ನಿಮಗೆ ನಮಸ್ಕಾರ ಮಾಡ್ಕೋತಾ ಯಾರು ಕೂತ್ಕೊಳ್ತಾರೆ? ಆ ಬಡ್ಡಿಯಲ್ಲಿ ಬರುವ 50 ಲಕ್ಷದಿಂದ ಆರಾಮಾಗಿ ತಿಂದುಂಡು, ಐಷಾರಾಮಿ ಜೀವನವನ್ನೇ ಮಾಡಬಹುದು ಎಂದು ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ.
ತಮ್ಮದೇ ಪಕ್ಷದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ತರುತ್ತಿದೆ. ಯತ್ನಾಳ್ ಅನುಭವಿಗಳು ಇಂಥ ಹೇಳಿಕೆಗಳನ್ನು ನೀಡಬಾರದು. ಯತ್ನಾಳ್ ಯಾಕೆ ಇಂಥ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಸಿಎಂ ಪೋಸ್ಟ್ಗೆ 2,500 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಯಾರು ಹಣ ಕೇಳಿದ್ದಾರೆ ಎಂಬುದನ್ನು ಯತ್ನಾಳ್ ಹೇಳಬೇಕು. ಸಿಎಂ ಕುರ್ಚಿ 2,500 ಕೋಟಿಗೆ ಹರಾಜಿಗಿದೆ ಎಂದು ಹೇಳಿದ್ದಾರೆ. ಯಾರು ಹಣ ಕೇಳಿದ್ದಾರೆ ಎಂಬುದನ್ನು ಯತ್ನಾಳ್ ಹೇಳಬೇಕು. ಈ ಬಗ್ಗೆ ಯತ್ನಾಳ್ ಅವರೇ ಎಸಿಬಿಗೆ ದೂರು ನೀಡಲಿ ಎಂದು ವಿಜಯಪುರದಲ್ಲಿ ಕಾಂಗ್ರೆಸ್ MLC ಪ್ರಕಾಶ್ ರಾಥೋಡ್ ಹೇಳಿದ್ದಾರೆ. ಹಣ ಕೇಳಿದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲವಾದರೆ ಯತ್ನಾಳ್ರನ್ನು ವಿಚಾರಣೆ ನಡೆಸಿ. ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರದಲ್ಲಿ ಪ್ರಧಾನಿ ಮೌನವಾಗಿದ್ದಾರೆ. ಭ್ರಷ್ಟಾಚಾರಕ್ಕೆ ಬಿಜೆಪಿ ಹೈಕಮಾಂಡ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸಚಿವ ಸ್ಥಾನಕ್ಕೆ 100 ಕೋಟಿ ಕೇಳಿರುವ ಬಗ್ಗೆಯೂ ಯತ್ನಾಳ್ ಹೇಳಿಕೆ ನೀಡಿರುವುದು ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ