ಎಕ್ಸ್​ಪ್ರೆಷನ್​ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ತೀರ್ಮಾನ: ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್

| Updated By: preethi shettigar

Updated on: Nov 17, 2021 | 8:48 AM

ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ನಿರ್ಧಾರ ಮಾಡಲಾಗಿದೆ. ಇದರ ಬೆನ್ನಲ್ಲೇ ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆಯನ್ನು ಖರೀದಿಸಲು ನಾಲ್ಕು ಜನ ಮುಂದೆ ಬಂದು ಇಂಡಿ ತಹಶೀಲ್ದಾರ್​ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ಎಕ್ಸ್​ಪ್ರೆಷನ್​ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ತೀರ್ಮಾನ: ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್
ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್
Follow us on

ವಿಜಯಪುರ: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳು ಅವಶ್ಯಕ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಕೆಲ ಸಕ್ಕರೆ ಕಾರ್ಖಾನೆಗಳು ಉದ್ಯೋಗವನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಆದರೆ ಇದರ ಬೆನ್ನಲ್ಲೇ ರೈತರಿಗೆ ಕಬ್ಬಿನ ಬಾಕಿ ಬಿಲ್ ನೀಡದೇ ಸತಾಯಿಸುತ್ತಿವೆ ಎಂಬ ಆರೋಪ ಕೇಳಿ ಬರುತ್ತಿರುವುದು ಹಲವಾರು ವರ್ಷಗಳಿಂದಲೇ ನಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಇಂಡಿ ತಾಲೂಕಿನ ಹಿರೆಬೇವರನೂರು ಗ್ರಾಮದ ಬಳಿ ಸ್ಥಾಪನೆಯಾದ ಜ್ಞಾನಯೋಗಿ ಶ್ರೀ ಶಿವಯೋಗಿ ಸಕ್ಕರೆ ಕಾರ್ಖಾನೆ (Sugar Factory) ಸಹ ಹೊರತಾಗಿಲ್ಲ. ಈ ಹಿಂದೆ ಕಾರ್ಖಾನೆ ಉದ್ಯೋಗಿಗಳಿಗೆ ಹಾಗೂ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಸರಿಯಾಗಿ ಹಣ ನೀಡಿತ್ತು. ಆದರೆ ಕಳೆದ 2018 -19 ರಿಂದ ಜ್ಞಾನಯೋಗಿ ಶ್ರೀ ಶಿವಯೋಗಿ ಸಕ್ಕರೆ ಕಾರ್ಖಾನೆ ಸಮಸ್ಯೆಗಳ ಆಗರವಾಗಿದೆ. 2018 -19 ರಿಂದ ಇಲ್ಲಿಯವರೆಗೆ ರೈತರ ಕಬ್ಬಿನ ಬಾಕಿ ಹಣ ನೀಡದೇ ರೈತರನ್ನು ಸತಾಯಿಸುತ್ತಿದ್ದಾರೆ.

ಜ್ಞಾನಯೋಗಿ ಶ್ರೀ ಶಿವಯೋಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಜಿಲ್ಲಾಡಳಿತ ಹಾಗೂ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಲವಾರು ಬಾರಿ ಮನವರಿಕೆ ಮಾಡಿ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಸಮಯಾವಕಾಶ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕಾಗಿ ಕಾರ್ಖಾನೆಯನ್ನು ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ವಿಚಾರವಾಗಿ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಧ್ಯಾನಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯವರು 2018-19 ನೇ ಸಾಲಿನಿಂದ ರೈತರಿಗೆ, ಕಾರ್ಮಿಕರಿಗೆ ಹಾಗೂ ಕಟಾವು ಮತ್ತು ಸಾಗಾಣಿಕೆದಾರರಿಗೆ ನೀಡಬೇಕಾದ ಬಾಕಿ ಹಣ ಪಾವತಿ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಇದೇ ಸಭೆಯಲ್ಲಿ ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ನಿರ್ಧಾರ ಮಾಡಲಾಗಿದೆ. ಇದರ ಬೆನ್ನಲ್ಲೇ ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆಯನ್ನು ಖರೀದಿಸಲು ನಾಲ್ಕು ಜನ ಮುಂದೆ ಬಂದು ಇಂಡಿ ತಹಶೀಲ್ದಾರ್​ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆಯನ್ನು ಖರೀದಿಸಲು ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನ ಹಣ ಬೇಡಿ ತೆಗೆದುಕೊಳ್ಳುವವರಿಗೆ ಸಕ್ಕರೆ ಕಾರ್ಖಾನೆಯನ್ನು ನಿಯಮಾನುಸಾರ ಮಾರಾಟ ಮಾಡುವುದೊಂದೆ ಕೊನೆಯ ಅವಕಾಶವಾಗಿರುತ್ತದೆ. ಇದರಿಂದ ರೈತರ, ಕಾರ್ಮಿಕರ ಹಾಗೂ ಸಕ್ಕರೆ ಕಾರ್ಖಾನೆಯವರ ಎಲ್ಲಾ ಸಮಸ್ಯೆಗಳಿಗೆ ಪೂರ್ಣ ವಿರಾಮ ಮಾಡಿದಂತಾಗುತ್ತದೆ. ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಡಿಸಿ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ಇಲಾಖೆಯ ಉಪನಿರ್ದೇಶಕರು, ಕಾರ್ಖಾನೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ:
ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್; ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು

ಬಾಕಿ ದರ ನಿಗದಿ ಮಾಡದ ಸಕ್ಕರೆ ಕಾರ್ಖಾನೆ: ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್ ಹೊರತರಲು ರೈತರ ಪ್ರಯತ್ನ

Published On - 8:43 am, Wed, 17 November 21