ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್; ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು
ಕಾರ್ಖಾನೆ ಆಡಳಿತ ಮಂಡಳಿ ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ನಿಂದ 60 ಕೋಟಿ ರೂಪಾಯಿ ಸಾಲ ಎತ್ತಿದೆ. ಈಗ ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕನ ಹೆಸರಿನಲ್ಲೂ ಆಡಳಿತ ಮಂಡಳಿ 8 ಲಕ್ಷ ರೂಪಾಯಿ ಸಾಲ ತೆಗೆದಿದೆ.
ಬಾಗಲಕೋಟೆ: ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕೆಲಸ ಕಳೆದುಕೊಂಡ ಕಾರ್ಮಿಕ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಹನಮಂತ ಚಿಚಖಂಡಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿ ಹನಮಂತ ಕೆಲಸ ಮಾಡುತ್ತಿದ್ದರು. ಆದರೆ 2 ವರ್ಷಗಳಿಂದ ಕಾರ್ಖಾನೆ ನಷ್ಟದಿಂದ ಬಂದ್ ಆಗಿದೆ. ಕಾರ್ಖಾನೆ ಆರಂಭಿಸುವಂತೆ ಮುಧೋಳ ನಗರದಲ್ಲಿ 114 ದಿನಗಳಿಂದ ಕಾರ್ಮಿರು ಧರಣಿ ಕೂಡ ನಡೆಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಸಾಲ ಕಾರ್ಖಾನೆ ಆಡಳಿತ ಮಂಡಳಿ ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ನಿಂದ 60 ಕೋಟಿ ರೂಪಾಯಿ ಸಾಲ ಎತ್ತಿದೆ. ಈಗ ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕನ ಹೆಸರಿನಲ್ಲೂ ಆಡಳಿತ ಮಂಡಳಿ 8 ಲಕ್ಷ ರೂಪಾಯಿ ಸಾಲ ತೆಗೆದಿದೆ. ಇತ್ತ ಎರಡು ವರ್ಷಗಳಿಂದ ಉದ್ಯೋಗ ಇಲ್ಲದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹನಮಂತ ಚಿಚಖಂಡಿ ನಿನ್ನೆ (ನವೆಂಬರ್ 15) ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಸೆಂಬರ್ 8 ರಂದು ಹನಮಂತನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಸಾಲ ಕೂಡ ಸಿಗಲಿಲ್ಲ, ಇತ್ತ ಕಾರ್ಖಾನೆ ಬಂದ್ ಆಗಿ ಉದ್ಯೋಗವೂ ಇಲ್ಲ. ಕಾರ್ಖಾನೆ ಪುನಾರಂಭಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಮನನೊಂದು ತನ್ನ ಜಮೀನಿನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾರ್ಖಾನೆಯಲ್ಲಿ ದಿನಗೂಲಿ ನೌಕರ ಆಗಿದ್ದ ಹನಮಂತನಿಗೆ 9500 ರೂಪಾಯಿ ಸಂಬಳ ಇತ್ತು. ಎರಡು ವರ್ಷದಿಂದ ಕಾರ್ಖಾನೆ ಬಂದ್ ಆಗಿದ್ದರಿಂದ ವೇತನ ಬರುತ್ತಿರಲಿಲ್ಲ. ಬಿಜೆಪಿ ಮುಖಂಡ ರಾಮಣ್ಣ ತಳೇವಾಡ ಅಧ್ಯಕ್ಷರಾಗಿರುವ ರನ್ನ ಸಕ್ಕರೆ ಕಾರ್ಖಾನೆ ಅಂದಾಜು 250 ಕೋಟಿ ರೂ. ಸಾಲದ ಕೂಪದಲ್ಲಿ ಇದೆ. ಸದ್ಯ ಮೃತ ಹನಮಂತನ ಮನೆಗೆ ರನ್ನ ಕಾರ್ಖಾನೆ ಕಾರ್ಮಿಕ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ನಿನ್ನೆ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ ಹನಮಂತನಿಗೆ ತಡರಾತ್ರಿಯೇ ಪಂಚನಾಮೆ ಮಾಡಿ ಅಂತ್ಯಸಂಸ್ಕಾರ ಮಾಡಲಾಗಿದೆ. ಮೂರು ಎಕರೆ ಜಮೀನು ಹೊಂದಿದ್ದು, ಪಿಕೆಪಿಎಸ್ ಸೇರಿ ಹನಮಂತ ವಿವಿಧೆಡೆ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಸಾಲದ ಬಾಧೆಯಿಂದ ರೈತ ಆತ್ಮಹತ್ಯೆ ಎಂದು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಸಾಲಬಾಧೆ ಹಿನ್ನೆಲೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಯಕಲಾಸಪುರದಲ್ಲಿ ರೈತ ಫಕ್ಕೀರಪ್ಪ ಓಲೇಕಾರ(58) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 6 ಲಕ್ಷ ರೂ. ಬ್ಯಾಂಕ್ ಸಾಲ ಮತ್ತು ಕೈಸಾಲ ಮಾಡಿಕೊಂಡಿದ್ದ ರೈತ, ಭಾರಿ ಮಳೆಯಿಂದ ಮೆಕ್ಕೆಜೋಳ ಬೆಳೆ ಹಾಳಾದ ಹಿನ್ನೆಲೆ, ಸಾಲ ತೀರಿಸಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋಲಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಮಕ್ಕಳ ಮಾರಾಟ ದಂಧೆ ಸಕ್ರಿಯದ ಬಗ್ಗೆ ಅನುಮಾನ!
ಮದ್ದೂರು ಪುರಸಭೆ ಅಧಿಕಾರಿಗಳ ಕಿರುಕುಳ ಆರೋಪ; ಡೆತ್ ನೋಟ್ ಬರೆದಿಟ್ಟು ಪೌರ ಕಾರ್ಮಿಕ ಆತ್ಮಹತ್ಯೆ
Published On - 9:59 am, Tue, 16 November 21