ವಿಜಯಪುರ: ಹುಟ್ಟುತ್ತಾ ಅಣ್ಣತಮ್ಮಂದಿರರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಇಲ್ಲಿ ನಿಜವಾಗಿದೆ. ಸಹೋರರ ಮಕ್ಕಳು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟು ಜಗಳ ತೆಗೆದು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿವಾಗಿ ಹಲ್ಲೆ (Assault) ಮಾಡಿದ ಘಟನೆ ಇದಕ್ಕೆ ಉದಾಹರಣೆಯಾಗಿದೆ. ನಿನ್ನೆ ವಿಜಯಪುರ (Vijayapura) ಜಿಲ್ಲೆ ಇಂಡಿ ತಾಲೂಕಿನ ಮೈಲಾರ ಗ್ರಾಮದ ತೋಟದ ಮನೆಯ ಬಳಿ ದಾಯಾದಿಗಳೇ ಹೊಡೆದಾಡಿಕೊಂಡಿದ್ದಾರೆ.
ಮೈಲಾರ ಗ್ರಾಮದ ಪಾಟೀಲ್ ಕುಟುಂಬಗಳ ಮದ್ಯೆ ಹಳೆಯ ಜಗಳವಿತ್ತು. ನಿನ್ನೆ ಕುಟುಂಬಸ್ಥರ ಮನೆಯ ನಾಯಿ ಅದೇ ಕುಟುಂಬದ ಮತ್ತೋರ್ವ ಸದಸ್ಯನ ಜಮೀನಿಗೆ ಹೋಗಿದೆ. ಇದನ್ನೇ ಕಾರಣ ಮಾಡಿಕೊಂಡು ಹಳೇ ದ್ವೇಷವನ್ನು ಸಾಧಿಸಲು ನಿರ್ಧಿರಿಸಿದ ಅಶೋಕ ಪಾಟೀಲ್, ಅರವಿಂದ ಪಾಟೀಲ್, ಸಂಕೇತ ನಾರಾಯಣ ಘಾಟಗೆ, ತುಕಾರಾಂ ಪಾಟೀಲ್ ಎಂಬವರು ದಾಯಾದಿ ಸಹೋದರರರಾದ ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಮೇಲೆ ಮುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ಕೊಡಲಿ ಬಡಿಗೆ ಹಾಗೂ ರಾಡ್ ಬಳಸಿ ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಮನ ಬಂದಂತೆ ಹಲ್ಲೆ ನಡೆಸಿದ್ದು, ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಅವರಿಗೆ ಗಂಭೀರ ಗಾಯಗಳಾಗಿವೆ. ತಲೆ, ಮುಖ, ಎದೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಬೂಬಾಸಾಹೇಬ ಪಾಟೀಲ್ ಎಂಬುವವರಿಗೆ ಹೆಚ್ಚಿನ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ತೀವ್ರ ಹಲ್ಲೆಗೆ ಒಳಗಾಗಿರುವ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹಲ್ಲೆ ನಡೆಸಿದ ಅಶೋಕ ಪಾಟೀಲ್, ಅರವಿಂದ ಪಾಟೀಲ್, ಸಂಕೇತ ನಾರಾಯಣ ಘಾಟಗೆ, ತುಕಾರಾಂ ಪಾಟೀಲ್ ವಿರುದ್ದ ದೂರು ಗಾಯಾಳುಗಳು ನೀಡಿದ್ದು, ಹೊರ್ತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈವರೆಗೆ ಯಾರ ಬಂಧನವಾಗಿಲ್ಲ. ತಮ್ಮ ಜೀವ ತೆಗೆಯಲು ಬಂದು ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕೆಂದು ಮೂವರು ಗಾಯಾಳುಗಳು ಒತ್ತಾಯ ಮಾಡಿದ್ದಾರೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಕ್ರೈಂ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ