ವಿಜಯಪುರ: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಈಗಾಗಲೇ ಬಯಲಿಗೆ ಬಂದಿದೆ. ಅಕ್ರಮದಲ್ಲಿ ಭಾಗಿಯಾದ ಕಿಂಗ್ಪಿನ್ಗಳನ್ನು ಸಿಐಡಿ ವಿಚಾರಣೆ ನಡೆಸುತ್ತಿದೆ. ಕರ್ನಾಟಕ ಸರ್ಕಾರ (Karnataka Government) ಕೂಡಾ ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಬರೆದ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದಿರುವ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ರಚನಾ ಮುತ್ತಗಲೇರಿ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನೇಮಕಾತಿ ಆದೇಶ ನೀಡಬೇಕೆಂದು ರಚನಾ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಹೋದರ ವಿಕ್ರಮ್ ಜೊತೆಗೆ ತೆರಳಿದ್ದರು. ಪ್ರತಿಭಟನೆ ನಡೆಸಿದ ಮಾರನೇ ದಿನ ರಚನಾ ಮೇಲೆ ದೂರು ದಾಖಲಾಗಿತ್ತು. ರಚನಾ ಓಎಂಆರ್ ಶೀಟ್ ಹಾಗೂ ಝೆರಾಕ್ಸ್ ಶೀಟ್ನಲ್ಲಿ ವ್ಯತ್ಯಾಸ ಕಂಡ ಬಂದ ಹಿನ್ನೆಲೆ ದೂರು ದಾಖಲಾಗಿತ್ತು. ದೂರು ದಾಖಲಾದ ನಂತರ ರಚನಾ ಹಾಗೂ ಸಹೋದರ ವಿಕ್ರಮ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಅಜ್ಜಿ ಮನೆಯಲ್ಲಿ ಬೆಳೆದಿದ್ದ ರಚನಾ:
ರಚನಾ ಹಾಗೂ ವಿಕ್ರಮ್ ಎಲ್ಲಿದ್ದಾರೆಂದು ಮಾಹಿತಿ ನೀಡಲು ರಚನಾ ದೊಡ್ಡಮ್ಮ ಕಸ್ತೂರಿಬಾಯಿ ಮನವಿ ಮಾಡಿದ್ದರು. ರಚನಾ ತಾಯಿ ಸಾವಿತ್ರಿ ಘಟನೆಯ ಬಳಿಕ ಲೋಬಿಪಿಯಿಂದ ಬಳಲುತ್ತಿದ್ದಾರೆ. ಯಾರ ಜೊತೆಗೂ ಮಾತನಾಡಲು ನಿರಾಕರಿಸುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣದಿಂದ ರಚನಾ ಹಾಗೂ ಆಕೆಯ ತಾಯಿಯನ್ನು ರಚನಾ ತಂದೆ ಬಿಟ್ಟು ಹೋಗಿದ್ದರಂತೆ. ಹಸುಗೂಸಿದ್ದಾಗಲೇ ತಂದೆಯಿಂದ ದೂರವಾಗಿದ್ದಳು. ತವರು ಮನೆ ಬಸವನಬಾಗೇವಾಡಿಯಲ್ಲೇ ಬೆಳೆದಿದ್ದರು.
ರಚನಾ ತಾಯಿ ಬೀದರ್ ಜಿಲ್ಲೆಯ ಹುಮನಾವಾದ್ ತಾಲೂಕಿನ ಚಿಟಗುಪ್ಪದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರಚನಾ ಸದ್ಯ ವಿಜಯಪುರ ಜಿಲ್ಲೆಯ ಕೂಡಗಿಯ ಉಷ್ಣ ವಿದ್ಯತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದರೂ ಉತ್ತೀರ್ಣವಾಗಿರಲಿಲ್ಲ. ಮೂರನೇ ಬಾರಿಗೆ ಪರೀಕ್ಷೆ ಬರೆದು ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪಸ್ಟ್ ರ್ಯಾಂಕ್ ಪಡೆದಿದ್ದಾಳೆ. ಸಿಐಡಿ ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ. ಎಷ್ಟೇ ಮರು ಪರೀಕ್ಷೆ ನಡೆಸಿದರೂ ನಮಗೆ ಯಾವುದೇ ಸಮಸ್ಯೆಯಿಲ್ಲ. ಸದ್ಯ ರಚನಾ ಹಾಗೂ ವಿಕ್ರಮ್ ಎಲ್ಲಿದ್ದಾರೆ ಎಂದು ಮಾಹಿತಿ ನೀಡಿ ಅಂತ ಮನವಿ ಮಾಡಿದ್ದಾರೆ.
ಇದನ್ನೂ ಓದಿ
ವಿಪ್ರೋ ಕಂಪನಿಯ ಅಜೀಂ ಪ್ರೇಮ್ಜಿ ವಿರುದ್ಧ ಆರೋಪ ಮಾಡಿದ್ದ ವಕೀಲನಿಂದ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆ
Published On - 11:36 am, Thu, 5 May 22