Independence Day: ವಿಜಯಪುರದಲ್ಲಿದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಠ; ಆಂಗ್ಲರಿಗೆ ಸಿಂಹ ಸ್ವಪ್ನರಾಗಿದ್ದ ಅಂದಿನ ಪೀಠಾಧಿಪತಿ

ವಿಜಯಪುರ ಜಿಲ್ಲೆಯ ಇಂಚಗೇರಿ ಮಠವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮಠಾಧೀಶರಾದ ಮಾಧವಾನಂದ ಪ್ರಭುಗಳು ತಮ್ಮ ಅನುಯಾಯಿಗಳೊಂದಿಗೆ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ್ದರು. ಅವರು ಮಹಾತ್ಮ ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್‌ರಂತಹ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

Independence Day: ವಿಜಯಪುರದಲ್ಲಿದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಠ; ಆಂಗ್ಲರಿಗೆ ಸಿಂಹ ಸ್ವಪ್ನರಾಗಿದ್ದ ಅಂದಿನ ಪೀಠಾಧಿಪತಿ
ಇಂಚಗೇರಿ ಮಠ
Edited By:

Updated on: Aug 15, 2025 | 8:23 AM

ವಿಜಯಪುರ, ಆಗಸ್ಟ್ 15: ಅನೇಕರ ತ್ಯಾಗ ಬಲಿದಾನದಿಂದ ಬ್ರಿಟಿಷರ ಮುಷ್ಟಿಯಲ್ಲಿದ್ದ ಭಾರತ ಸ್ವಾತಂತ್ರ್ಯ (Independence Day) ಪಡೆಯಿತು. ದೇಶ ದಾಸ್ಯದಿಂದ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಎಲ್ಲರೂ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗಿದ್ದರು. ಈ ನಿಟ್ಟಿನಲ್ಲಿ ಆಧ್ಯಾತ್ಮ ಕೇಂದ್ರ ಸ್ಥಾನವಾಗಿದ್ದ ಮಠವೊಂದು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿತ್ತು. ವಿಜಯಪುರ (Vijayapura) ಜಿಲ್ಲೆಯಲ್ಲಿರುವ ಆಧ್ಯಾತ್ಮಿಕ ಮಠವೊಂದು ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಉಗ್ರ ಹೋರಾಟ ಮಾಡಿತ್ತು. ಮಠದ ಪೀಠಾಧಿಪತಿಗಳೇ ಹೋರಾಟದ ಮುಂಚೂಣಿಯನ್ನು ವಹಿಸಿಕೊಂಡಿದ್ದರು. ಅಂತಹ ಮಠದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಂದೂಕು ಕಾರ್ಖಾನೆಗಳ ನಿರ್ಮಾಣ

ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು ಒಂದು. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ ಹೋರಾಟದಲ್ಲಿ ಧುಮುಕಿದ ಹೆಗ್ಗಳಿಕೆ ಇದೇ ಮಠದ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟ ಉಗ್ರ ಸ್ವರೂಪ ಪಡೆದಿದ್ದ ವೇಳೆ ಮಾಧವಾನಂದ ಶ್ರೀಗಳು ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮ ಹಾಗೂ ಮಹಾರಾಷ್ಟ್ರದ ಜತ್‌ ತಾಲೂಕಿನ ಸೊನ್ಯಾಳ ಗ್ರಾಮದಲ್ಲಿ ಎರಡು ಬಂದೂಕು ಕಾರ್ಖಾನೆಗಳನ್ನ ತೆರೆದು ಬ್ರಿಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಟ ನಡೆಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಮೈದಾನ ಸಜ್ಜು: ಸಾರ್ವಜನಿಕರಿಗೆ ಇ-ಪಾಸ್, ಸಂಚಾರ ನಿಷೇಧ!

ಇನ್ನೂ ಅಂದಿನ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬ್ರಿಟಿಷರ ಪೊಲೀಸ್ ಠಾಣೆಗಳಾಗಿದ್ದ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತುಹಾಕಿ ಠಾಣೆಗಳನ್ನ ಧ್ವಂಸಗೊಳಿಸಿ ಬ್ರಿಟಿಷರೇ ಬೆಚ್ಚಿ ಬೀಳುವ ಹಾಗೇ ಮಾಡಿದ್ದರು. ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಅಂದಿನ ಕಾಲದಲ್ಲಿ ಬಾರೀ ಸಾಹಸವೇ ಎಂದು ಮಠದ ಭಕ್ತರಾದ  ಶಂಕ್ರಪ್ಪ ಕೌಜಲಗಿ ಅವರು ನೆನಪಿಸಿಕೊಂಡರು.

ಬ್ರಿಟಿಷರ ವಿರುದ್ಧ ಉಗ್ರ ಸ್ವರೂಪದ ಹೋರಾಟ ಅಷ್ಟೇ ಅಲ್ಲದೆ, ಅಂದು ಸ್ವಾತಂತ್ರ್ಯ ಹೋರಾಟದ ಮಹಾನ್‌ ನಾಯಕರೊಂದಿಗೆ ಮಾಧವಾನಂದ ಶ್ರೀಗಳು ನೇರ ಸಂಪರ್ಕದಲ್ಲಿದ್ದರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳು ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್​ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ್ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಭಾಷ್ ಚಂದ್ರ ಬೋಸ್ ಪಾಲ್ಗೊಂಡಿದ್ದರು ಎಂಬುದು ವಿಶೇಷವಾಗಿತ್ತು. ಮಾಧವಾನಂದ ಶ್ರೀಗಳ ಹೋರಾಟ ಅತ್ಯುಗ್ರಗೊಂಡಾಗ ಬ್ರಿಟಿಷರು ಶ್ರೀಗಳ ಮೇಲೆ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದ್ದರು.

ಇದನ್ನೂ ಓದಿ: Independence Day 2025: ಸ್ವಾತಂತ್ರ್ಯ ದಿನದಂದು ಮಾಡುವ ಕೇಸರಿ, ಬಿಳಿ, ಹಸಿರು ಬಣ್ಣದ ಈ ತಿನಿಸುಗಳು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ

ಇಷ್ಟೆಲ್ಲಾ ಹೋರಾಟದ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆ ಸಂತಸ ಇಂಚಗೇರಿ ಮಠದಲ್ಲಿ ನೆಲೆಯೂರಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಸರ್ಕಾರ ಸ್ವಾತಂತ್ರ ಹೋರಾಟಗಾರರಿಗೆ ಪಿಂಚಣಿ ನೀಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಅಂತಹ ಪಿಂಚಣಿಯನ್ನು ಇಂಚಗೇರಿ ಮಠದ ಮಾಧವಾನಂದ ಶ್ರೀಗಳು ತಿರಸ್ಕರಿಸಿದ್ದರು. ‘ಭಾರತ ನಮ್ಮ ಮಾತೆ, ನಾನು ಆಕೆಯ ಮಗನಾಗಿ ನನ್ನ ತಾಯಿಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಹೋರಾಡಿದ್ದೇನೆ ಹೊರತು ಸರ್ಕಾರ ನೀಡುವ ಪಿಂಚಣಿಗೆ ಅಲ್ಲ’ ಎಂದು ಸರ್ಕಾರಕ್ಕೆ ಉತ್ತರ ಕಳುಹಿಸಿದ್ದರಂತೆ. ಇಂದಿಗೂ ದೇಶ ಪ್ರೇಮದ ವಿಚಾರದಲ್ಲಿ ಮಠ ಹಿಂದೆ ಬಿದ್ದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 am, Fri, 15 August 25