ವಿಜಯಪುರ: ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ; ಏನಿದು ಪ್ರಕರಣ?

| Updated By: ಕಿರಣ್ ಹನುಮಂತ್​ ಮಾದಾರ್

Updated on: May 03, 2024 | 9:35 PM

ವಿಜಯಪುರ(Vijayapura) ಜಿಲ್ಲೆಯಲ್ಲಿ ಗರ್ಭಿಣಿಗೆ ಬೆಂಕಿ ಹಚ್ಚಿ ಮಾರ್ಯಾದೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ವಿಚಾರಣೆ ಅಂತ್ಯಗೊಳಿಸಿ ಮರ್ಯಾದೆ ಹತ್ಯೆ ಮಾಡಿದ ಇಬ್ಬರಿಗೆ ಗಲ್ಲು ಶಿಕ್ಷೆ, ಇತರೆ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 4.19 ಲಕ್ಷ ರೂಪಾಯಿ ದಂಡ ವಿಧಿಸಿ ವಿಜಯಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯಪುರ: ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ; ಏನಿದು ಪ್ರಕರಣ?
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ, ಮೇ.03: ಮರ್ಯಾದೆಗೇಡು ಹತ್ಯೆ ಮಾಡಿದ ಆರೋಪಿಗಳ ಕೃತ್ಯ ಸಾಬೀತಾಗಿ ಇಬ್ಬರಿಗೆ ಗಲ್ಲು ಶಿಕ್ಷೆ ಜಾರಿ ಮಾಡಿ ನ್ಯಾಯಾಧೀಶರು ಆದೇಶ ಮಾಡಿದ್ದಾರೆ.‌‌ ವಿಜಯಪುರ(Vijayapura) ಜಿಲ್ಲೆಯಲ್ಲಿ ಗರ್ಭಿಣಿಗೆ ಬೆಂಕಿ ಹಚ್ಚಿ ಮಾರ್ಯಾದೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ವಿಚಾರಣೆ ಅಂತ್ಯಗೊಳಿಸಿ ಮರ್ಯಾದೆ ಹತ್ಯೆ ಮಾಡಿದ ಇಬ್ಬರಿಗೆ ಗಲ್ಲು ಶಿಕ್ಷೆ, ಇತರೆ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 4.19 ಲಕ್ಷ ರೂಪಾಯಿ ದಂಡ ವಿಧಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಇಬ್ರಾಹಿಂಸಾಬ ಮಹಮ್ಮದಸಾಬ್ ಅತ್ತಾರ ಹಾಗೂ ಅಕ್ಬರ್ ಮಹಮ್ಮದಸಾಬ್ ಅತ್ತಾರ ಗಲ್ಲು ಶಿಕ್ಷೆಗೊಳಗಾದರೆ, ಹತ್ಯೆಗೀಡಾದ ಮಹಿಳೆಯ ತಾಯಿ ರಮಜಾನಬಿ ಅತ್ತಾರ, ಸಂಬಂಧಿಗಳಾದ ದಾವಲಬಿ ಬಂದೇನವಾಜ್ ಜಮಾದಾರ, ಅಜಮಾ ಜಿಲಾನಿ ದಖನಿ, ಜಿಲಾನಿ ಅಬ್ದುಲ್‌ಖಾದರ್ ದಖನಿ, ದಾವಲಬಿ ಸುಭಾನ್ ಧನ್ನೂರ ಜೀವಾವಧಿ ಶಿಕ್ಷೆಗೊಳಗಾದವರು.

ಇದನ್ನೂ ಓದಿ:ನ್ಯಾಯದಾನ ಮಾಡಬೇಕಿರುವ ನ್ಯಾಯಾಧೀಶರಿಗೇ ಗಲ್ಲು ಶಿಕ್ಷೆ ನೀಡಿದ್ದ ನ್ಯಾಯಾಲಯ, ಇದು 45 ವರ್ಷಗಳ ಹಿಂದಿನ ಘಟನೆ

ಏನಿದು ಘಟನೆ?

ರಮಜಾನಭೀ ಪುತ್ರಿ ಬಾನುಬೇಗಂ ಅತ್ತಾರ ಅದೇ ಗ್ರಾಮದ ಸಾಯಬಣ್ಣ ಕೊಣ್ಣೂರ ಎಂಬಾತನನ್ನು ಪ್ರೀತಿಸಿ, 2017ರಲ್ಲಿ ಮದುವೆಯಾಗಿದ್ದಳು. ಯುವತಿ ಗರ್ಭಿಣಿಯಾಗಿದ್ದನ್ನರಿತ ಕುಟುಂಬ ಸದಸ್ಯರು, ಯುವತಿ ಹಾಗೂ ಯುವಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಮದುವೆಯಾಗಿ ಬೇರೆ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರೇಮಿಗಳು ಬಾನುಬೇಗಂ ಗರ್ಭಿಣಿಯಾದ ಬಳಿಕ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು‌. ಪತಿ ಸಾಯಬಣ್ಣ ಹಾಗೂ ಗರ್ಭಿಣಿಯ ತವರು ಒಂದೇ ಊರಾದ ಕಾರಣ ಇವರ ಮೇಲೆ ಭಾನು ಬೇಗಂ ಕುಟುಂಬಸ್ಥರ ಕೆಂಗಣ್ಣು ಬಿದ್ದಿತ್ತು.‌ ಏನಾದರೂ ಮಾಡಿ ಬಾನು ಬೇಕಂ ಹಾಗು ಸಾಯಬಣ್ಣರನ್ನ ಕೊಲೆ ಮಾಡ ಬಿಡಬೇಕೆಂದು ಆಕೆಯ ಪೋಷಕರು ನಿರ್ಧಾರ ಮಾಡಿದ್ದರು.

ಗರ್ಭಿಣಿಯಾಗಿ ಗಂಡನ ಮನೆಗೆ ಬಂದಿದ್ದ ವೇಳೆ ಆಕೆ ಹಾಗೂ ಸಾಯಬಣ್ಣರನ್ನು ಕೊಲೆ ಮಾಡಲು ಮುಂದಾಗಿದ್ದರು. ಆಗ ಕೈಗೆ ಸಿಕ್ಕ ಯುವತಿಯನ್ನು ಹೊಡೆಯುತ್ತಿದ್ದಾಗ ಆಕೆ ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಳು. ಆಗ ಆರೋಪಿತರು ಈಕೆ ಬೇರೆಯವರ ವಂಶ ಉದ್ದಾರ ಮಾಡಲಿಕ್ಕೆ ನಮ್ಮ‌ ಮನೆತನದ ಮರ್ಯಾದೆ ಮಣ್ಣು ಪಾಲು ಮಾಡಿದ್ದಾಳೆ. ಹೀಗಾಗಿ ಈಕೆಯನ್ನು ಸುಟ್ಟು ಬಿಡೋಣ ಎಂದು ನಿರ್ಧರಿಸಿ, ಆಕೆಯ ಮೈಮೇಲೆ ಸೀಮೆಎಣ್ಣೆ ಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಏತನ್ಮಧ್ಯೆ ಆಕೆಯ ಪತಿ ಸಾಯಬಣ್ಣ ಆರೋಪಿಗಳಿಂದ ರಕ್ಷಣೆಯಾಗಿದ್ದ ಎಂದು ತಾಳಿಕೋಟೆ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸತೀಶ್​ ಎಲ್.ಪಿ. ಅವರು, ಆರೋಪಿಗಳ ಮೇಲಿನ ಆಪಾಧನೆಗಳು ರುಜುವಾತಾಗಿವೆ ಎಂದು ತೀರ್ಮಾನಿಸಿ, 1 ಮತ್ತು 2ನೇ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಹಾಗೂ ಬಾಕಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇನ್ನು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್. ಲೋಕೂರ ವಾದ ಮಂಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ