ಭಾರಿ ಮಳೆ ಕಾರಣ ಮೇ ತಿಂಗಳಲ್ಲೇ ಆಲಮಟ್ಟಿ ಡ್ಯಾಂಗೆ 52,650 ಕ್ಯೂಸೆಕ್ ಒಳ ಹರಿವು: ಸಂಭ್ರಮದಲ್ಲಿ ರೈತರು

ಕರ್ನಾಟಕದಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದೆ. ಈ ವರ್ಷ ಮೇ ಕೊನೆಯ ವಾರದಲ್ಲೇ ಮಾನ್ಸೂನ್ ಪ್ರವೇಶವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಕಾರಣ ಆಲಮಟ್ಟಿ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. ಆಲಮಟ್ಟಿ ಡ್ಯಾಂಗೆ ಪ್ರತಿ ವರ್ಷ ಜೂನ್ ಕೊನೆಯ ವಾರದಲ್ಲಿ ಅಥವಾ ಜುಲೈನಲ್ಲಿ ಒಳ ಹರಿವು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ ಕೊನೆಯ ವಾರದಲ್ಲೇ ಒಳ ಹರಿವು ಆರಂಭವಾಗಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಭಾರಿ ಮಳೆ ಕಾರಣ ಮೇ ತಿಂಗಳಲ್ಲೇ ಆಲಮಟ್ಟಿ ಡ್ಯಾಂಗೆ 52,650 ಕ್ಯೂಸೆಕ್ ಒಳ ಹರಿವು: ಸಂಭ್ರಮದಲ್ಲಿ ರೈತರು
ಆಲಮಟ್ಟಿ ಡ್ಯಾಂ
Updated By: Ganapathi Sharma

Updated on: May 26, 2025 | 2:24 PM

ವಿಜಯಪುರ, ಮೇ 26: ವಿಜಯಪುರ, ಬಾಗಲಕೋಟೆ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿ ಕೃಷ್ಣಾ ನದಿಗೆ ಆಲಮಟ್ಟಿ ಬಳಿ (Almatti Dam) ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಅಣೆಕಟ್ಟೆಗೆ (Lal Bahadur Shastri Dam) ಈ ವರ್ಷ ಮೇ ಅಂತ್ಯದಲ್ಲೇ ಒಳಹರಿವು ಆರಂಭವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಮುಂಗಾರು (Monsoon) ವಿಳಂಬವಾಗಿ ಆರಂಭವಾಗುತ್ತದೆ. ಇಲ್ಲಿಗೂ ಮುಂಚೆಯೇ ನೆರೆಯ ಮಹಾರಾಷ್ಟ್ರದಲ್ಲಿ ಕೃಷ್ಣೆಯು ಉಗಮ ಸ್ಥಾನ ಮಹಾಬಳೇಶ್ವರದಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯ ಕಾರಣ ಕೃಷ್ಣೆ ಮೈದುಂಬಿ ಹರಿಯುತ್ತಿತ್ತು. ಇತ್ತ ವಿಜಯಪುರದಲ್ಲಿನ ಆಲಮಟ್ಟಿ ಡ್ಯಾಂಗೆ ಜೂನ್ ಕೊನೆಯ ವಾರದಲ್ಲಿ ಒಳ ಹರಿವು ಉಂಟಾಗುತ್ತಿತ್ತು. ಆದರೆ ಈ ಬಾರಿ ಮಹಾರಾಷ್ಟ್ರ ಭಾಗದಲ್ಲಿ ಹಾಗೂ ರಾಜ್ಯದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಡ್ಯಾಂಗೆ ಒಳ ಹರಿವು ಆರಂಭವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ 450 ಕ್ಯೂಸೆಕ್ ಪ್ರಮಾಣದ ಒಳ ಹರಿವು ದಾಖಲಾಗಿತ್ತು. ಸದ್ಯ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಸದ್ಯ 52,650 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

ಮೇ ಕೊನೆಯ ವಾರದಲ್ಲೇ ಆಲಮಟ್ಟಿ ಡ್ಯಾಂಗೆ ಒಳ ಹರಿವು ಉಟಾಗಿದ್ದು ಈ ಭಾಗದಲ್ಲಿ ಖುಷಿಗೆ ಕಾರಣವಾಗಿದೆ. ಡ್ಯಾಂ ಆಗಷ್ಟ್​ನಲ್ಲಿ ಭರ್ತಿಯಾದ ಬಳಿಕ ಮುಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆಗಳಿಗೆ ನೀರು ಬಿಡಲಾಗುತ್ತಿತ್ತು. ಕಾಲುವೆಗಳಿಗೆ ನೀರು ಹರಿಸಬೇಕಾದರೆ ರೈತರು ಹೋರಾಟಗಳನ್ನು ಮಾಡಬೇಕಾಗುತ್ತಿತ್ತು. ಆದರೆ ಈ ಬಾರಿ ಡ್ಯಾಂ ಬೇಗನೇ ಭರ್ತಿಯಾದರೆ ನಮ್ಮ ಜಮೀನುಗಳಿಗೂ ಬೇಗನೇ ನೀರು ಬರಲಿದೆ ಎಂಬ ಆಶಯವನ್ನು ರೈತರು ವ್ಯಕ್ತಪಡಿಸಿದ್ದಾರೆ. ಮೇನಲ್ಲೇ ಒಳ ಹರಿವು ಆರಂಭವಾಗಿದ್ದರಿಂದ ಮತ್ತು ಇದೇ ರೀತಿ ಮಳೆಯಾಗಿ ಒಳ ಹರಿವು ಹೆಚ್ಚಾದರೆ ಡ್ಯಾಂ ಬೇಗನೇ ಭರ್ತಿಯಾಗುತ್ತದೆ. ಮುಂಗಾರು ಹಂಗಾಮಿಗೆ ನೀರು ಬೇಗನೇ ಸಿಗುತ್ತದೆ ಎಂದು ನಿಡಗುಂದಿ ರೈತ ಮೆಹಬೂಬ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: ಭಕ್ತರಿಗೆ ಮಹತ್ವದ ಸೂಚನೆ

ಇದನ್ನೂ ಓದಿ
ಕರ್ನಾಟಕದಲ್ಲಿ‌ ಹಿಟ್ಲರ್ ಆಡಳಿತ ಇದೆಯಾ: ಪ್ರಲ್ಹಾದ್ ಜೋಶಿ ಪ್ರಶ್ನೆ
3 ಸಾವಿರ ಕೋಟಿ ಪಿಎಫ್ ಬಾಕಿ ಉಳಿಸಿಕೊಂಡ ಸಾರಿಗೆ ನಿಗಮಗಳು: ನೌಕರರಿಗೆ ಸಂಕಷ್ಟ
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು?

ಆಲಮಟ್ಟಿ ಡ್ಯಾಂ 519.60 ಮೀಟರ್ ಎತ್ತರವಿದ್ದು ಸದ್ಯ ಡ್ಯಾಂನಲ್ಲಿ 510.38 ಮೀಟರ್ ನೀರು ಸಂಗ್ರಹವಾಗಿದೆ. ಡ್ಯಾಂನಿಂದ 555 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಟಿಎಂಸಿ ಲೆಕ್ಕದಲ್ಲಿ ನೋಡುವುದಾದರೆ, 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 31.785 ಟಿಎಂಸಿ ನೀರು ಸಂಗ್ರಹವಾಗಿದೆ. 92 ಟಿಎಂಸಿ ನೀರು ಭರ್ತಿಯಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ