ನಾರಾಯಣಪುರದ ಸ್ಕಾಡಾ ಯೋಜನೆ ಉದ್ಘಾಟನೆ: ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಎಂ.ಬಿ.ಪಾಟೀಲ್
ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ನವೀಕರಣ ಹಾಗೂ ಆಧುನಿಕ ಕಾಮಗಾರಿಯನ್ನು ಪ್ರಧಾನಿ ಮೋದಿ ಅವರು ಜನವರಿ 19ರಂದು ಉದ್ಘಾಟಿಸಲಿದ್ದಾರೆ.
ವಿಜಯಪುರ: ನಾರಾಯಣಪುರದ ಸ್ಕಾಡಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 19ರಂದು ಉದ್ಘಾಟಿಸಲಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆ (Narayanapura Left Bank Canal) ವಿಸ್ತರಣೆ ನವೀಕರಣ ಹಾಗೂ ಆಧುನಿಕ ಕಾಮಗಾರಿಯನ್ನು ಉದ್ಘಾಟನೆಯನ್ನು ಮುಂದಿಟ್ಟುಕೊಂಡು ಟ್ವಿಟರ್ ಮೂಲಕ ಪ್ರಧಾನಿ ಮೋದಿಗೆ ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ ಪಾಟೀಲ್ (M.B.Patil) ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಸ್ಕಾಡಾ ಮೊದಲ ಹಂತ ಹಾಗೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸ್ಕಾಡಾ 2 ಹಂತ ಕಾಮಗಾರಿ ಮಾಡಿತ್ತು ಎಂದು ಟ್ವೀಟ್ ಮಾಡಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 2014ರಲ್ಲಿ ಪ್ರಾರಂಭಿಸಿ 2017ರಲ್ಲಿ ಕಾರ್ಯರೂಪಗೊಳಿಸಿದ ನನ್ನ ಕನಸಿನ SCADA ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ಎಂ.ಬಿ.ಪಾಟೀಲ್ ಅವರು ಟ್ವೀಟ್ ಮಾಡಿದ್ದಾರೆ.
ಶ್ರೀ @siddaramaiah ನವರ ನೇತೃತ್ವದ @INCKarnataka ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 2014ರಲ್ಲಿ ಪ್ರಾರಂಭಿಸಿ 2017ರಲ್ಲಿ ಕಾರ್ಯರೂಪಗೊಳಿಸಿದ ನನ್ನ ಕನಸಿನ #SCADA in #NLBCModernization (Phase-1) ಯೋಜನೆಯನ್ನು ಮಾನ್ಯ @PMOIndia ಅವರು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. 1/2 pic.twitter.com/2jDvDEm5Bc
— M B Patil (@MBPatil) January 17, 2023
ಎರಡನೇ ಟ್ವೀಟ್ ಮಾಡಿದ ಪಾಟೀಲರು, SCADA-Phase2 ಕೂಡ ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭಿಸಿದ್ದು. ರಾಜ್ಯ ಬಿಜೆಪಿ ಸರ್ಕಾರ ಯಾವುದೇ ನಿರ್ಣಾಯಕ ಅಭಿವೃದ್ಧಿ ಮಾಡದಿದ್ದರೂ ಹಿಂದಿನ ಸರ್ಕಾರದ ಕೆಲಸಗಳಿಗೆ ಮೈಲೇಜ್ ಪಡೆಯಲು ಹಿಂಜರಿಯುವುದಿಲ್ಲ ಎಂದು ಟಾಂಗ್ ನೀಡಿದರು.
SCADA-Phase2 ಕೂಡ ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭಿಸಿದ್ದು!@BJP4Karnataka ಸರ್ಕಾರ ಯಾವುದೇ ನಿರ್ಣಾಯಕ ಅಭಿವೃದ್ಧಿ ಮಾಡದಿದ್ದರೂ ಹಿಂದಿನ ಸರ್ಕಾರದ ಕೆಲಸಗಳಿಗೆ ಮೈಲೇಜ್ ಪಡೆಯಲು ಹಿಂಜರಿಯುವುದಿಲ್ಲ! 2/2#SCADA in #NLBCModernization pic.twitter.com/U32vQleyr1
— M B Patil (@MBPatil) January 17, 2023
ಪ್ರಧಾನಿ ನರೇಂದ್ರ ಮೋದಿ ಜ.19 ಬೆಳಗ್ಗೆ 11ಕ್ಕೆ ನವದೆಹಲಿಯಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ಹೆಲಿಪ್ಯಾಡ್ಗೆ ತೆರಳುತ್ತಾರೆ. ಮಧ್ಯಾಹ್ನ 12 ಗಂಟೆಗೆ ಕೊಡೆಕಲ್ ಗ್ರಾಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ಮತ್ತು ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇ ಪ್ಯಾಕೇಜ್-3 ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಇದನ್ನೂ ಓದಿ: ಮಹಿಳೆ ನೋಡಿ ಟ್ರೋಲ್ ಆದ ಸಿದ್ದು; ಬಾಗಲಕೋಟೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕಾಧ್ಯಕ್ಷೆ ರಿಯಾಕ್ಷನ್ ಇಲ್ಲಿದೆ
ನಾರಾಯಣಪುರದ ಬಸವಸಾಗರ ಜಲಾಶಯವು ಯಾದಗಿರಿ, ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಈ ಜಲಾಶಯವು ಎಡದಂಡೆ ಮತ್ತು ಬಲದಂಡೆ ಎಂಬ ಎರಡು ಕಾಲುವೆಗಳನ್ನು ಹೊಂದಿದೆ. ಈ ಪೈಕಿ ಎಡದಂತೆ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತದೆ. ಎಡದಂಡೆಯು 78 ಕಿ.ಮೀ ವ್ಯಾಪ್ತಿ ಹೊಂದಿದ್ದು, 4.5 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಕ್ಷೇತ್ರ ಹೊಂದಿದೆ. ಇದಕ್ಕಾಗಿ ಸರ್ಕಾರವು ಸ್ಟೀಲ್ ಗೇಟ್ಗಳನ್ನು ಹಾಕಿತ್ತು. ಆದರೆ ಈ ಗೇಟ್ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಪರಿಣಾಮ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ.
ಗೇಟ್ಗಳ ಸಮಸ್ಯೆ ನಿವಾರಣೆಗಾಗಿ ಈಗಿನ ಕೇಂದ್ರ ಸರಕಾರ ರಾಷ್ಟ್ರೀಯ ಜಲ ಮಿಷನ್ ಮೂಲಕ ರಾಜ್ಯ ಸರಕಾರದ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ಹೈಟೆಕ್ ತಂತ್ರಜ್ಞಾನ ಹೊಂದಿರುವ ಸ್ಕಾಡಾ ಗೇಟ್ಗಳನ್ನು ಅಳವಡಿಕೆ ಮಾಡಿದೆ. ಕೇಂದ್ರ ಸರಕಾರ 70 ಪ್ರತಿಶತ ಹಾಗೂ ರಾಜ್ಯ ಸರಕಾರ 30 ಪ್ರತಿಶತ ಅನುದಾನದೊಂದಿಗೆ 1180 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕಾಡಾ ಯೋಜನೆ ಮೂಲಕ ಒಟ್ಟು 4558 ಹೈಟೆಕ್ ಗೇಟ್ ಅಳವಡಿಕೆ ಮಾಡಲಾಗಿದೆ.
ಸ್ಯಾಡಾ ಗೇಟ್ಗಳನ್ನು ನಾರಾಯಣಪುರದಲ್ಲಿ ಆಪರೇಟ್ ಮಾಡಲಾಗುತ್ತಿದ್ದು, ಕಂಪ್ಯೂಟರ್ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಗೇಟ್ಗಳು ಸೋಲಾರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸೆನ್ಸಾರ್ ಮೂಲಕವೇ ನೀರು ಬಿಡುಗಡೆ ಮಾಡಲಾಗುತ್ತದೆ. ಸಿಸಿ ಕ್ಯಾಮೆರಾ, ವಯರ್ಲೆಸ್ ಮೂಲಕ ನೀರಿನ ದತ್ತಾಂಶ ಮಾಹಿತಿ ಸಂಗ್ರಹ ಇತ್ಯಾದಿ ಸೌಲಭ್ಯಗಳು ಇರಲಿದೆ.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Tue, 17 January 23