ವಿಜಯಪುರ: ಒಂದು ಒಳ್ಳೆಯ ಕೆಲಸ ಮಾಡುವುದಕ್ಕೆ ಶ್ರದ್ಧೆ ಮತ್ತು ಒಳ್ಳೆಯ ಮನಸ್ಸು ಇರಬೇಕು ಎಂಬ ಮಾತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ವಿಜಯಪುರ ಜಿಲ್ಲೆಯ ವಿಶೇಷ ಚೆತನ ಮಕ್ಕಳು ಸಾಧನೆ ಮಾಡಿದ್ದಾರೆ. ಮಕ್ಕಳು ರಾಖಿ ತಯಾರಿಸುವ ಮೂಲಕ ತಾವು ಕೂಡ ಕೆಲಸದಲ್ಲಿ ಸದಾ ಕಾಲ ನಿರತರಾಗಿದ್ದೇವೆ ಎಂದು ತಿಳಿಸಿದ್ದಾರೆ. ವಿಜಯಪುರ ನಗರದ ಜಲ ನಗರದಲ್ಲಿನ ವಿಕಲಚೇತನದ ಪುನಶ್ಚೇತನ ಕೇಂದ್ರ ಈ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದೆ. ಶ್ರೀಮತಯಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಎಜುಕೇಷನಮ್ ಆ್ಯಂಡ್ ಸೋಷಿಯಲ್ ವೆಲ್ ಫೇರ್ ಸೊಸೈಟಿ ಇದರ ನೇತೃತ್ವ ವಹಿಸಿದೆ. ಇಲ್ಲಿ ವಿಶೇಷ ಚೇತನ ಮಕ್ಕಳಿಗೆ ವಸತಿ ಸಹಿತ ಶಿಕ್ಷಣವನ್ನು ಕೂಡ ನೀಡಲಾಗುತ್ತಿದೆ.
ರಕ್ಷಾ ಬಂಧನ ಹಬ್ಬದ ವಿಶೇಷ
ಭಾರತೀಯ ಸಂಪ್ರದಾಯದಲ್ಲಿ ಅನೇಕ ಹಬ್ಬ ಹರಿದಿನಗಳು. ಆಚರಣೆಗಳು ಹಾಗೂ ಪದ್ಧತಿಗಳು ಇವೆ. ಅಂತಹ ಆಚರಣೆಗಳಲ್ಲಿ ರಕ್ಷಾ ಬಂಧನ ಹಬ್ಬವೂ ಕೂಡ ಒಂದು. ಇದೇ ಮುಂಬರುವ ರವಿವಾರ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವಿದೆ. ದೇಶದೆಲ್ಲೆಡೆ ಸಡಗರ, ಸಂಭ್ರಮದಿಂದ ರಕ್ಷಾ ಬಂಧನ ಹಬ್ಬದ ಆಚರಣೆ ಆಗಲಿದೆ. ಸಹೋದರಿಯರನ್ನು ರಕ್ಷಣೆ ಮಾಡಲು ಸದಾ ಕಾಲ ಸಹೋದರರು ಕಂಕಣ ಬದ್ಧರಾಗಿರಬೇಕೆಂಬ ತತ್ವ ಈ ಹಬ್ಬದ ಹಿಂದಿದೆ. ಇಂಥ ರಕ್ಷಾ ಬಂಧನಕ್ಕೆ ಬೇಕಾಗಿರುವ ರಾಖಿಗಳನ್ನು ವಿಶೇಷವಾಗಿ ತಯಾರು ಮಾಡುತ್ತಿದ್ದಾರೆ ವಿಶೇಷ ಚೇತನ ಮಕ್ಕಳು.
ಪರಿಸರ ಪ್ರಿಯ ರಾಖಿ
ಮಹಾಮಾರಿ ಕೊರೊನಾದಿಂದ ಈಗ ವಿಶೇಷ ಚೇತನ ಮಕ್ಕಳ ಆರೈಕೆ ಮಾತ್ರ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ವಿಶೇಷ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಇದೇ ಮಕ್ಕಳ ಮೂಲಕ ರಕ್ಷಾ ಬಂಧನ ಆಚರಣೆಗೆ ವಿಶಿಷ್ಟ ರಾಖಿಗಳನ್ನು ತಯಾರು ಮಾಡಲಾಗುತ್ತಿದೆ. ಪರಿಸರ ಪ್ರೇಮಿ ರಾಖಿಗಳನ್ನು ತಯಾರು ಮಾಡುತ್ತಿದ್ದಾರೆ ಇಲ್ಲಿನ ವಿಶೇಷ ಚೇತನ ಮಕ್ಕಳು.
ಮಕ್ಕಳ ಉತ್ಸಾಹ ಕಂಡು ಪೋಷಕರು ಸಹ ಸಾಥ್ ನೀಡುತ್ತಿದ್ದಾರೆ. ಆಕಳ ಸಗಣಿ, ವಿವಿಧ ಔಷಧಿಯುಕ್ತ ಮರಗಳ ಎಲೆಗಳು ಅಂಟು ಸೇರಿದಂತೆ ಆಯುರ್ವೇದಿಯ ಔಷಧಿಗಳ ಸತ್ವವಿರುವ ವಸ್ತುಗಳನ್ನು ರಾಖಿ ತಯಾರು ಮಾಡಲು ಉಪಯೋಗಿಸಲಾಗಿದೆ. ಕ್ರಮಬದ್ಧವಾಗಿ ಆಕಳ ಸಗಣಿಯನ್ನು ನೆರಳಿನಲ್ಲಿ ಒಣಗಿಸಿ, ನಂತರ ಅದನ್ನು ಪುಡಿ ಮಾಡಿ ಸ್ವಚ್ಛ ಮಾಡಲಾಗಿದೆ. ಅದಕ್ಕೆ ಅಂಟು ಹಾಗೂ ಔಷಧಿ ಸತ್ವವಿರುವ ಮರಗಳ ಎಲೆಗಳನ್ನು, ಹುಣಸೆ ಕಾಳು, ಚವಳಿ ಕಾಳುಗಳನ್ನು ನೆನೆಯಿಸಿ ಪೇಸ್ಟ್ ಮಾಡಿ ಮಿಶ್ರಣ ಮಾಡಿ ಮೂರು ದಿನಗಳ ಕಾಲ ಹದ ಮಾಡಿಡಲಾಗುತ್ತಿದೆ.
ಬಳಿಕ ಅಚ್ಚುಗಳಲ್ಲಿ ವಿವಿಧ ಬಗೆಯ ಡಿಸೈನ್ ಮಾದರಿಗಳ ರಾಖಿ ತಯಾರು ಮಾಡಲಾಗುತ್ತಿದೆ. ಹೀಗೆ ತಯಾರಾದ ಪ್ರತಿ ರಾಖಿಯಲ್ಲಿ 8 ರಿಂದ 10 ತುಳಸಿ ಬೀಜಗಳನ್ನು ಹಾಕಿಡಲಾಗಿದೆ. ರಕ್ಷಾ ಬಂಧನ ಆಚರಣೆ ಬಳಿಕ ಈ ರಾಖಿಗಳಲ್ಲಿ ಹಾಕಿದ ಸ್ಥಳದಲ್ಲಿ ತುಳಸಿ ಸಸಿಗಳು ಹುಟ್ಟಬೇಕು. ಔಷಧಿ ಗುಣವುಳ್ಳ ತುಳಸಿ ಬೆಳೆಯಲು ಸಗಣಿಯಿಂದ ಹಾಗೂ ವಿವಿಧ ಔಷಧೀಯ ಸಸ್ಯಗಳ ಎಲೆಗಳು ಗೊಬ್ಬರವಾಗಿ ಕೆಲಸ ಮಾಡುತ್ತವೆ ಎಂಬ ಯೋಚನೆ ಇದರಲ್ಲಿದೆ.
ರಾಖಿಗಳನ್ನು ಎಲ್ಲೆಂದರಲ್ಲಿ ಬಿಸಸಾಡುವ ಬದಲು ಮನೆಯ ಆವರಣದಲ್ಲಿ ಹಾಕಿದಾಗ ಅಲ್ಲಿ ತುಳಸಿ ಸಸಿಗಳು ಬೆಳೆಯುತ್ತದೆ. ಆರೋಗ್ಯಕ್ಕೆ ತುಳಸಿ ಸಹಾಯಕವಾಗಿದೆ. ಕೊರೊನಾದಂತ ಕಾಯಿಲೆ ತಡೆಯಲು ಪುಟ್ಟ ಪುಟ್ಟ ಮಕ್ಕಳಿಗೆ ಶೀತ ನೆಗಡಿ ರೋಗಗಳನ್ನು ತಡೆಯಲು ತುಳಸಿ ಮದ್ದಾಗಿ ಕೆಲಸ ಮಾಡುತ್ತದೆ. ಆದ ಕಾರಣ ಇಂಥ ಪರಿಸರ ಸ್ನೇಹಿ ರಾಖಿಗಳನ್ನು ವಿಶೇಷ ಚೇತನ ಮಕ್ಕಳು ತಯಾರು ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದು ವಿಕಲಚೇತನದ ಪುನಶ್ಚೇತನ ಕೇಂದ್ರ ವಿಜಯಪುರದ ಅಧ್ಯಕ್ಷ ಪ್ರಶಾಂತ ದೇಶಪಾಂಡೆ ತಿಳಿಸಿದ್ದಾರೆ.
ಸಹಜವಾಗಿರುವ ಮಕ್ಕಳು ಮಾಡದಂತಹ ಕೆಲಸವನ್ನು ನಮ್ಮ ವಿಶೇಷ ಚೇತನ ಮಕ್ಕಳು ಮಾಡುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿ ವಿಕಲಚೇತನರಾಗಿರುವ ಮಕ್ಕಳು ಯಾರಿಗೇನು ನಾವು ಕಮ್ಮಿ ಇಲ್ಲಾ ಎಂದು ಬಹಳ ಹುಮ್ಮಸ್ಸಿನಿಂದ ಪರಿಸರ ಪ್ರೇಮಿ ರಾಖಿಗಳನ್ನು ತಯಾರು ಮಾಡುತ್ತಿದ್ದಾರೆ. ಮಕ್ಕಳ ಈ ಲವಲವಿಕೆ ಕಂಡು ವಿಶೇಷ ಚೇತನ ಮಕ್ಕಳ ಜೊತೆಗೆ ನಮಗೂ ಸಹ ಖುಷಿಯಾಗಿದೆ ಎಂದು ವಿಶೇಷ ಚೇತನ ಮಕ್ಕಳ ಪೋಷಕರು ಹೇಳಿದ್ದಾರೆ.
ವಿಶೇಷ ಚೇತನ ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣ ಮಾಡಲು. ನಾವೂ ಎಲ್ಲರಂತೆ ಸಹಜವಾಗಿದ್ದೇವೆ ಎಂದು ಅವರಿಗೆ ಆತ್ಮವಿಶ್ವಾಸ ಮುಡಿಸಲು ರಾಖಿ ತಯಾರು ಮಾಡಲು ಮುಂದಾಗಿದ್ದೇವೆ. ಅಷ್ಟೇಯಲ್ಲಾ ಪರಿಸರ ಪ್ರೇಮಿ ರಾಖಿಗಳಿಗೆ ಬೆಂಗಳೂರು, ಮುಂಬೈ, ಪೂನಾ ಸೇರಿದಂತೆ ಇತರಡೆಗಳಿಂದಲೂ ಬೇಡಿಕೆ ಬಂದಿದೆ. ಒಬ್ಬೊಬ್ಬರು ಕರೆ ಮಾಡಿ ಇಪ್ಪತ್ತು ಮೂವತ್ತು ರಾಖಿಗಳನ್ನು ಕಳುಹಿಸಲು ಕೋರಿದ್ದಾರೆ.
ಪರಿಸರಪ್ರೇಮಿ ರಾಖಿಗಳನ್ನು ಮಾರಾಟ ಮಾಡಿದ ಹಣವನ್ನು ಪಾರದರ್ಶಕವಾಗಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಲಾಗುತ್ತದೆ. ರಾಖಿಗಳನ್ನು ಮಾರಾಟ ಮಾಡಿ ಬಂದ ಹಣವನ್ನು ವಿಕಲಚೇತನ ಮಕ್ಕಳಿಗಾಗಿಯೇ ವಿನಿಯೋಗಿಸಲಾಗುತ್ತದೆ. ಇದು ವ್ಯಾಪಾರಕ್ಕಾಗಿ ಮಾಡಿದ್ದಲ್ಲಾ ಎಂದು ವಿಕಲಚೇತನದ ಪುನಶ್ಚೇತನ ಕೇಂದ್ರದ ವಿಜಯಪುರದ ಅಧ್ಯಕ್ಷ ಪ್ರಶಾಂತ ದೇಶಪಾಂಡೆ ತಿಳಿಸಿದ್ದಾರೆ.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ:
ಹುಬ್ಬಳ್ಳಿ: ತರಕಾರಿ ಬೀಜದಿಂದ ತಯಾರಾಯ್ತು ರಾಷ್ಟ್ರಧ್ವಜ; ದೇಶ ಪ್ರೇಮಕ್ಕೂ ಸೈ, ಪರಿಸರ ಕಾಳಜಿಗೂ ಜೈ
ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು