ವಿಜಯಪುರ, ಜ.27: ಮಗು ಜೀವಂತವಾಗಿ ಉಳಿಯುತ್ತದೆ ಎಂಬ ಭರವಸೆಯೂ ಇರದ ನವಜಾತ ಶಿಶುವಿಗೆ ವಿಜಯಪುರ ಜಿಲ್ಲಾ ಆಸ್ಪತ್ರೆ(Vijayapur district hospital)ಯಲ್ಲಿ ನಿರಂತರ 53 ದಿನಗಳ ಚಿಕಿತ್ಸೆ ನೀಡಿ, ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ. ಜನಿಸಿದಾಗಲೇ 700 ಗ್ರಾಂ ತೂಕ ಹೊಂದಿದ್ದ ನವಜಾತ ಶಿಶು, ಉಳಿಯೋ ಸಾಧ್ಯತೆ ಇರಲಿಲ್ಲ. ಆದರೂ ಛಲ ಬಿಡದ ಜಿಲ್ಲಾ ಆಸ್ಪತ್ರೆಯ ವೈದ್ಯರು ಪವಾಡವೆಂಬಂತೆ ಅತೀ ಕಡಿಮೆ ತೂಕದೊಂದಿಗೆ ಜನನವಾಗಿದ್ದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದ ನಿವಾಸಿ ಆಯಿಶಾ ಎಂಬುವವರು 7ನೇ ತಿಂಗಳು ಗರ್ಭಿಣಿ ಇದ್ದಾಗಲೇ ಹೆರಿಗೆಯಾಗಿ ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಅದರಲ್ಲಿ ಒಂದು ಮಗು ಒಂದೂವರೆ ಕಿಲೋ ಇದ್ದರೆ, ಇನ್ನೊಂದು ಮಗು ಮಾತ್ರ ಕೇವಲ 750 ಗ್ರಾಂ ತೂಕ ಹೊಂದಿತ್ತು. ಜೊತೆಗೆ ಉಸಿರಾಟದ ಸಮಸ್ಯೆ ಹಾಗೂ ಇನಫೆಕ್ಷನ್ನಿಂದ ಕೂಡಿತ್ತು. ಅದಾದ ಬಳಿಕ ಮತ್ತೆ ತೂಕ ಕಳೆದುಕೊಂಡ ಮಗು 700 ಗ್ರಾಂ ತೂಕಕ್ಕೆ ಬಂದಿದ್ದರಿಂದ ಮಗು ಉಳಿಯೋದಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ:ಬೆಂಗಳೂರು: ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಆರು ವರ್ಷ ಕೋಮಾಕ್ಕೆ ಜಾರಿದ್ದ ಯುವಕ ಸಾವು
ಆದರೂ ಸಹ ಹೇಗಾದರೂ ಮಾಡಿ ನಮ್ಮ ಮಗುವನ್ನು ಉಳಿಸಿ ಎಂದು ಆಯಿಶಾ-ಖಾದರಸಾಬ್ ದಂಪತಿಗಳು ವೈದ್ಯರನ್ನು ಕೇಳಿಕೊಂಡಿದ್ದರು. ಒಂದು ಪ್ರಯತ್ನ ಮಾಡಿ ನೊಡೋಣ ಎಂದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಪೂರ್ಣಪ್ರಮಾಣದಲ್ಲಿ ಬೆಳವಣಿಗೆ ಆಗದೆ ಹುಟ್ಟಿದ್ದ ಮಗುವಿಗೆ ನವಜಾತ ಶಿಶು ಆರೈಕೆ ಘಟಕದಲ್ಲಿರಿಸಿ ಏನೇನು ಚಿಕಿತ್ಸೆ ಮಾಡಬೇಕೋ ಅದನ್ನೆಲ್ಲ ಮಾಡಿ ಬರೋಬ್ಬರಿ 53 ದಿನಗಳ ಕಾಲ ಆರೈಕೆ ಮಾಡಿ ಕೊನೆಗೆ ಮಗುವನ್ನು ಉಳಿಸುವಲ್ಲಿ ಸಫಲರಾಗಿದ್ದಾರೆ.
ನವಜಾತ ಶಿಶು ಉಳಿಯುವ ಲಕ್ಷಣ ಇಲ್ಲದಿದ್ದರೂ ಸಹ ಇದನ್ನೇ ಸವಾಲಾಗಿ ಸ್ವೀಕರಿಸಿದ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಹಾಗೂ ಅವರ ತಂಡ ಅವಿರತವಾಗಿ ಶ್ರಮಿಸಿ ಮಗುವಿಗೆ ಬೇಕಾದ ಎಲ್ಲ ಚಿಕಿತ್ಸೆಗಳನ್ನು ನೀಡಿದ್ದರಿಂದ ಮಗುವಿನ ತೂಕ ಇದೀಗ 1650 ಕಿಲೋಗ್ರಾಂ ಗೆ ಹೆಚ್ಚಾಗಿದೆ. ಹಾಗಾಗಿ ಸಧ್ಯ ಶಿಶುವನ್ನು ನವಜಾತ ಶಿಶು ಆರೈಕೆ ಘಟಕದಿಂದ ಹೊರತಂದು ತಾಯಿಯ ಮಡಿಲಿಗೆ ಹಾಕಿದ್ದಾರೆ. ಇನ್ನು ಶಿಶುವಿಗೆ ಇದೇ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡಿದ್ದರೆ ಕಡಿಮೆ ಎಂದರೂ 3 ಲಕ್ಷ ರೂಪಾಯಿ ಖರ್ಚು ಆಗುತ್ತಿತ್ತು. ಆದರೆ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಉಚಿತವಾಗಿ ಆಗಿದ್ದು, ಒಂದೇ ಒಂದು ರೂಪಾಯಿ ಖರ್ಚಿಲ್ಲದೆ ಮಗುವನ್ನು ಬದುಕಿಸಿಕೊಂಡ ಅದೆಷ್ಟೋ ಬಡವರಿಗೆ ಅತ್ಯಂತ ಸಹಕಾರಿಯಾಗಿದೆ. ತಮ್ಮ ಮಗುವಿಗೆ ಚಿಕಿತ್ಸೆ ನೀಡಿ ಉಳಿಸಿದ್ದಕ್ಕೆ ಮಗುವಿನ ಪೋಷಕರು ಜಿಲ್ಲಾಸ್ಪತ್ರೆಯ ವೈಧ್ಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಕಳೆದ 2018 ರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಎಸ್ಎನ್ಸಿಯೂ ಸ್ಥಾಪನೆಯಾಗಿದ್ದು, ನವಜಾತ ಶಿಶುಗಳ ಚಿಕಿತ್ಸೆ ನೀಡಿ ಶಿಶುಗಳನ್ನು ಬದುಕಿಸುವಲ್ಲಿ ಇಲ್ಲಿನ ವೈದ್ಯರ ತಂಡ ಸಕ್ಸಸ್ ಆಗಿದೆ. ಸದ್ಯ 750 ಗ್ರಾಂ ತೂಕವಿದ್ದ ಮಗವಿಗೆ 53 ದಿನಗಳ ಕಾಲ ನಿರಂತರ ಚಿಕಿತ್ಸೆ ನೀಡಿ ಆ ಮಗುವನ್ನು ಬದುಕಿಸಿದ್ದು ಸಹ ಸಾಧನೆಯೇ ಆಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ವೈದ್ಯರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ