ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು(Siddheshwara Swamiji) ಲಿಂಗೈಕ್ಯರಾಗಿದ್ದಾರೆ. 82 ವರ್ಷದ ಪಾಂಡಿತ್ಯಪೂರ್ಣ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಳೆದ ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಗೆ ಸೇರಲಿಚ್ಚಿಸದ ಅವರಿಗೆ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಆದ್ರೆ ವೈಕುಂಠ ಏಕಾದಶಿಯ ಪುಣ್ಯ ದಿನದಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದೇಶ್ವರ ಶ್ರೀಗಳು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸದ್ಯ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಹೂಗಳಿಂದ ಅಲಂಕಾರ ಗೊಂಡಿರುವ ತೆರೆದ ವಾಹನದಲ್ಲಿ ಸೈನಿಕ ಶಾಲೆಯ ಆವರಣಕ್ಕೆ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರ ಆಗಮಿಸಿದ್ದು ಸೈನಿಕ ಶಾಲೆಯ ಆವರಣದಲ್ಲಿ ಹಾಕಲಾಗಿರುವ ವೇದಿಕೆಯಲ್ಲಿ ಶ್ರೀಗಳ ಪಾರ್ಥಿವ ಶರೀರ ಇಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಖ್ಯದ್ವಾರದ ಮೂಲಕ ಆಗಮಿಸಿ 2ನೇ ಗೇಟ್‌ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಗರೋಪಾದಿಯಲ್ಲಿ ಬೆಳಂ ಬೆಳಗ್ಗೆ ಭಕ್ತರ ದಂಡು ಹರಿದು ಬರುತ್ತಿದೆ. ನಸುಕಿನ ಜಾವವೇ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಕಿದ ಕಾರಿಡಾರ್ ಸಂಪೂರ್ಣ ಭರ್ತಿಯಾಗಿದೆ.
ಇನ್ನು ಮತ್ತೊಂದೆಡೆ ಮಹಾ ಮಂಗಳಾರತಿ ಮಾಡಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಪೂಜೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ವಿಜಯಪುರ ಎಸ್‌ಪಿ ಹೆಚ್.ಡಿ.ಆನಂದಕುಮಾರ್, ಸಹಸ್ರಾರು ಭಕ್ತರು ಆಗಮಿಸುವುದರಿಂದ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಐವರು ಎಸ್‌ಪಿ, 25 ಡಿವೈಎಸ್‌ಪಿಗಳು, 60 ಸಿಪಿಐ, 200 ಪಿಎಸ್‌ಐಗಳು, 1500 ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದೇವೆ. ಅಕ್ಕಪಕ್ಕದ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಿಂದ ಸೈನಿಕ ಶಾಲೆವರೆಗೆ ನಡೆದುಕೊಂಡು ಹೋಗಬೇಕು. ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಎಸ್‌ಪಿ ಹೆಚ್.ಡಿ.ಆನಂದಕುಮಾರ್ ಮನವಿ ಮಾಡಿದ್ದಾರೆ. ಹಾಗೂ ಆಶ್ರಮದಲ್ಲಿ ಮಂಗಳವಾರ ಬೆಳಗ್ಗೆ 4.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪೂಜ್ಯರ ಪಾರ್ಥಿವ ಶರೀರ ತೆರೆದ ವಾಹನದಲ್ಲಿ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೂ ಮೆರವಣಿಗೆ ಮಾಡಿ ತರಲಾಗಿದೆ. ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೆ ಸೈನಿಕ ಶಾಲೆಯಲ್ಲಿ ಭಕ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3-4 ಗಂಟೆವರೆಗೆ ಸರ್ಕಾರಿ ಗೌರವ ಸಲ್ಲಿಸಲಾಗುತ್ತೆ. ಇಂದು ಸಂಜೆ 4 ಗಂಟೆಗೆ ವಾಹನದಲ್ಲಿ ಪಾರ್ಥಿವ ಶರೀರವನ್ನು ಜ್ಞಾನಯೋಗಾಶ್ರಮಕ್ಕೆ ಪಾರ್ಥಿವ ಶರೀರ ಶಿಫ್ಟ್ ಮಾಡಿ ಇಂದು ಸಂಜೆ 5 ಗಂಟೆಗೆ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಶ್ರೀಗಳ ಅಂತಿಮ ದರ್ಶನಕ್ಕೆ ಶ್ರೀಗಳ ಹುಟ್ಟೂರು ಬಿಜ್ಜರಗಿಯಿಂದ ವಿಜಯಪುರಕ್ಕೆ ಜನರು ಆಗಮಿಸುತ್ತಿದ್ದಾರೆ. ಬಿಜ್ಜರಗಿ ಗ್ರಾಮದಿಂದ ಹೊರಡಲು ಬಸ್, ಕ್ರೂಸರ್ಗಳ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿದೆ. ವಿಜಯಪುರ ಹೊರವಲಯದ ಆಕಾಶವಾಣಿ ಕೇಂದ್ರದ ಬಳಿ ಸಿದ್ದೇಶ್ವರ ಸಂಸ್ಥೆ, ಬಿಎಲ್ಡಿಇ ಸಂಸ್ಥೆಯಿಂದ ಭಕ್ತರಿಗಾಗಿ ಅನ್ನ, ಸಾಂಬಾರ್, ಸಜ್ಜಕ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ಜಿಲ್ಲಾಡಳಿತ ವತಿಯಿಂದ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಧಾನಮ್ಮನವರ, ವರಿಷ್ಠಾಧಿಕಾರಿ ಹೆಚ್.ಡಿ.ಆನಂದ ಕುಮಾರ್ ಗೌರವ ಸಮರ್ಪಿಸಿದ್ದಾರೆ.
ಅಂತಿಮ ದರ್ಶನಕ್ಕೆ ಹುಟ್ಟೂರು ಬಿಜ್ಜರಗಿ ಗ್ರಾಮದಿಂದ ಮಹಿಳಾ ಭಕ್ತರು ಹೊರಟಿದ್ದು ಬಸ್ ನಲ್ಲಿ ಶಿವಾಯನಮಃ ಎಂದು ಶಿವನಾಮ ಜಪ ಮಾಡುತ್ತಿದ್ದಾರೆ. ಶ್ರೀಗಳ ಪ್ರವಚನ ಕೇಳೋದಕ್ಕೆ ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಈಗ ಅವರ ಅಂತಿಮ ದರ್ಶನಕ್ಕೆ ಹೋಗುವಂತಾಗಿದೆ. ನಿನ್ನೆ ಇಡೀ ದಿನ ಪ್ರಾರ್ಥನೆ ಮಾಡಿದ್ದೆವು. ಆದರೂ ನಮ್ಮ ಶ್ರೀಗಳು ಬದುಕಲಿಲ್ಲ. ಇದು ನಮಗೆ ಬಹಳ ದುಃಖದ ದಿನ. ನಮ್ಮೂರ ಮಾಣಿಕ್ಯನನ್ನು ನಾವು ಕಳೆದುಕೊಂಡಿದ್ದೇವೆ. ಒಂದು ವರ್ಷದ ಮಗುವಿನಿಂದ ವೃದ್ದರವರೆಗೂ ಅವರು ಅಪ್ಪಾಜಿ ಆಗಿದ್ದರು. ಶ್ರೀಗಳು ಪುನಃ ನಮ್ಮೂರಲ್ಲೇ ಹುಟ್ಟಿ ಬರಲಿ ಎಂದು ಭಕ್ತರು ಕಣ್ಣೀರು ಸುರಿಸಿದ್ದಾರೆ.
ಪಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:51 am, Tue, 3 January 23