ವಿಜಯಪುರ: ಕೊರೊನಾ (Corona) ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ (Omicron Virus) ಭೀತಿಯ ಕಾರಣ ರಾಜ್ಯದ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ. ವಿಜಯಪುರದಿಂದ (Vijayapura) ಮಹಾರಾಷ್ಟ್ರವನ್ನು (Maharastra) ಸಂಪರ್ಕಿಸುವ 11 ರಸ್ತೆಗಳಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಚೆಕ್ ಪೋಸ್ಟ್ ಸ್ಥಾಪಿಸಿದೆ. ಆದರೆ ಹೆಸರಿಗೆ ಮಾತ್ರ ಚೆಕ್ ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಚೆಕ್ಪೋಸ್ಟ್ಗಳಿದ್ದರೂ ನೆರೆಯ ಮಹಾರಾಷ್ಟ್ರದಿಂದ ವಿಜಯಪುರ ನಗರದತ್ತ ಗಣನೀಯ ಪ್ರಮಾಣದಲ್ಲಿ ಜನರು ಆಗಮಿಸುತ್ತಿದ್ದಾರೆ. ಆದರೆ ಚೆಕ್ ಪೋಸ್ಟ್ಗಳಲ್ಲಿ (Check Post) ಯಾವುದೇ ತಪಾಸಣೆ ಮಾಡದೆ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿಯಿರುವ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸಲಾಗುತ್ತಿಲ್ಲ. ಕಂದಾಯ, ಆರೋಗ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಚೆಕ್ ಪೋಸ್ಟ್ನಲ್ಲಿ ಗೈರಾಗಿದ್ದಾರೆ. ಜನರು ಯಾವುದೇ ಅಂಜಿಕೆಯಿಲ್ಲದೇ ಮಹಾರಾಷ್ಟ್ರದಿಂದ ಓಡಾಡುತ್ತಿದ್ದಾರೆ. ಕೊರೊನಾ ಎರಡೂ ಲಸಿಕೆ ಹಾಕಿಸಿಕೊಂಡವರಿಗೆ ಅಥವಾ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಎರಡೂ ಡೋಸ್ ವ್ಯಾಕ್ಸಿನ್ ಅಥವಾ, ನೆಗೆಟಿವ್ ರಿಪೋರ್ಟ್ ಇರದವರಿಗೆ ಕರ್ನಾಟಕ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡುವವರೇ ಮಾಯವಾಗಿದ್ದಾರೆ. ಕೆಲ ಸಮಯದ ಬಳಿಕ ಚೆಕ್ ಪೋಸ್ಟ್ನತ್ತ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೆಪ ಮಾತ್ರಕ್ಕೆ ತಪಾಸಣೆ ನಡೆಸುತ್ತಿದ್ದಾರೆ.
ಇಲಾಖೆಗಳ ನಿರ್ಲಕ್ಷದಿಂದ ಗಡಿ ಭಾಗಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚೆಕ್ಪೋಸ್ಟ್ಗಳಲ್ಲಿ ಕಠಿಣ ನಿಯಮ ಪಾಲನೆಯಾಗಬೇಗದೇ, ಅವುಗಳನ್ನು ನಿರ್ಲಕ್ಷಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಕುರಿತು ಗಮನ ಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಆನೇಕಲ್: ತಾಲೂಕಿನಲ್ಲಿ ಕೊರೊನಾ ಸ್ಫೋಟ; ಅದಾಗ್ಯೂ ಸಮಾವೇಶದಲ್ಲಿ ಕೊವಿಡ್ ನಿಯಮಾವಳಿ ಮರೆತ ಬಿಜೆಪಿ ನಾಯಕರು!