ನಾಗಾಲ್ಯಾಂಡ್​​ನಲ್ಲಿ 13 ಮಂದಿ ಕೂಲಿಕಾರ್ಮಿಕರು ಬಲಿಯಾಗಿದ್ದು ಭದ್ರತಾ ಪಡೆಯ ಗುಂಡಿನ ದಾಳಿಗೆ; ಪ್ರಮಾದದ ಬಗ್ಗೆ ವಿಷಾದವಿದೆ ಎಂದ ಸೇನೆ

ನಾಗಾಲ್ಯಾಂಡ್​​ನಲ್ಲಿ 13 ಮಂದಿ ಕೂಲಿಕಾರ್ಮಿಕರು ಬಲಿಯಾಗಿದ್ದು ಭದ್ರತಾ ಪಡೆಯ ಗುಂಡಿನ ದಾಳಿಗೆ; ಪ್ರಮಾದದ ಬಗ್ಗೆ ವಿಷಾದವಿದೆ ಎಂದ ಸೇನೆ
ಸೆಕ್ಯೂರಿಟಿ ವಾಹನಗಳಿಗೆ ಬೆಂಕಿ

ಘಟನೆಯ ಬಗ್ಗೆ ಉನ್ನತ ತನಿಖೆ ನಡೆಸಲು ಮುಖ್ಯಮಂತ್ರಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗೇ ಎಸ್​ಐಟಿ ರಚನೆ ಮಾಡಲಾಗಿದೆ ಎಂದು ನಾಗಾಲ್ಯಾಂಡ್ ಗವರ್ನರ್​ ಜಗದೀಶ್​ ಮುಖಿ ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Dec 05, 2021 | 4:38 PM

ಡಿ.4ರ ಸಂಜೆ ನಾಗಾಲ್ಯಾಂಡ್​​ನಲ್ಲಿ ಒಂದು ದುರಂತ ನಡೆದಿದೆ. ಅಲ್ಲಿನ ಮೋನ್​ ಜಿಲ್ಲೆಯಲ್ಲಿ ನಡೆದ ಫೈರಿಂಗ್​​​ನಲ್ಲಿ ಒಬ್ಬ ಯೋಧ ಸೇರಿ 14 ಜನರು ಮೃತಪಟ್ಟಿದ್ದಾರೆ. ಇಲ್ಲಿ ಮೃತಪಟ್ಟವರು ಅಮಾಯಕ ಕೂಲಿಕಾರ್ಮಿಕರಾಗಿದ್ದು ಉನ್ನ ಮಟ್ಟದ ತನಿಖೆ ನಡೆಸಲಾಗುತ್ತಿದೆ ಮತ್ತು ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ. ಆದರೆ ಈ ದುರ್ಘಟನೆಯಿಂದ ಕೊಶಿಮಾದಲ್ಲಿ ನಡೆಯಬೇಕಿದ್ದ ಹಾರ್ನ್​​ಬಿಲ್​ ಉತ್ಸವ ಸ್ಥಗಿತಗೊಂಡಿದೆ. ನಿನ್ನೆ ಓಟಿಂಗ್​ ಗ್ರಾಮದ ಒಂದಷ್ಟು ಮಂದಿ ಕೂಲಿ ಕಾರ್ಮಿಕರು ಬೆಳಗ್ಗೆ ಕೆಲಸಕ್ಕೆ ಹೋದವರು ಸಂಜೆ ಎಷ್ಟೊತ್ತಾದರೂ ಮನೆಗೆ ಮರಳದೆ ಇದ್ದಾಗ, ಗ್ರಾಮದ ಕೆಲವು ಸ್ವಯಂ ಸೇವಕರು ಅವರನ್ನು ಹುಡುಕುತ್ತ ಹೋದರು. ಆಗ ಅವರೆಲ್ಲ ಒಂದು ಮಿನಿ ಟ್ರಕ್​​ನಲ್ಲಿ ಶವವಾಗಿ ಬಿದ್ದಿದ್ದು ಪತ್ತೆಯಾಗಿದೆ.  ದೆಹಲಿಗೆ ತೆರಳಿದ್ದ ನಾಗಾಲ್ಯಾಂಡ್ ಸಿಎಂ ನಿಫಿಯು ರಿಯೊ ವಿಷಯ ತಿಳಿಯುತ್ತಿದ್ದಂತೆ ಧಾವಿಸಿದ್ದಾರೆ ಮತ್ತು ತುರ್ತು ಸಭೆ ನಡೆಸಿದ್ದಾರೆ. 

ಆಗಿದ್ದೇನು? ಓಟಿಂಗ್​ ಗ್ರಾಮದ ಸುಮಾರು 13 ಜನರ ಕೂಲಿ ಕಾರ್ಮಿಕರು ಕೆಲಸಕ್ಕೆಂದು ಸಮೀಪದ ಕಲ್ಲಿದ್ದಲು ಗಣಿಗೆ ಹೋಗಿದ್ದರು. ಸಂಜೆ ಕೆಲಸ ಮುಗಿದ ಬಳಿಕ ಒಂದು ಪಿಕ್​ ಅಪ್​ ವಾಹನದಲ್ಲಿ ಅವರೆಲ್ಲ ಮನೆಗೆ ಮರಳುತ್ತಿದ್ದರು. ಆದರೆ ಭದ್ರತಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.  ಇವರು ಭದ್ರತಾ ಪಡೆಯ ದಾಳಿಗೆ ಬಲಿಯಾಗಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಗ್ರಾಮದ ಸ್ವಯಂಸೇವಕರು ಸಿಟ್ಟಿಗೆದ್ದು, ಅವರ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಗಲಾಟೆ ಮಾಡಿದ್ದಾರೆ.

ಸೇನೆ ಶೂಟ್ ಮಾಡಿದ್ದೇಕೆ? ಅಂದಹಾಗೆ ಸೇನೆಯ ಯೋಧರು ಉದ್ದೇಶ ಪೂರ್ವಕವಾಗಿ ಈ ಕೂಲಿ ಕಾರ್ಮಿಕರನ್ನು ಕೊಂದಿದ್ದಲ್ಲ ಎಂದು ಸೇನೆಯ ಅಸ್ಸಾಂ ರೈಫಲ್ಸ್​ ಹೇಳಿಕೆ ನೀಡಿದೆ. ಮ್ಯಾನ್ಮಾರ್‌ನಲ್ಲಿ ನೆಲೆಗೊಂಡಿರುವ ನಿಷೇಧಿತ ಸಂಘಟನೆ ಎನ್‌ಎಸ್‌ಸಿಎನ್ (ಕೆ) ನ ಯುಂಗ್ ಆ್ಯಂಗ್​ ಬಣದ ಉಗ್ರಗಾಮಿಗಳ ಗುಂಪೊಂದರ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ದುರದೃಷ್ಟಕ್ಕೆ ಕೂಲಿಕಾರ್ಮಿಕರ ವಾಹನದ ಮೇಲೆ ಗುಂಡಿನ ದಾಳಿ ನಡೆಯಿತು. ಈ ದುರ್ಘಟನೆ ಬಗ್ಗೆ ನಿಜಕ್ಕೂ ಪಶ್ಚಾತ್ತಾಪ, ವಿಷಾದವಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.  ಹಾಗೇ, ಯೋಧನೊಬ್ಬ ಕೂಡ ಮೃತಪಟ್ಟಿದ್ದು, ಇನ್ನೂ ಕೆಲವು ಗಂಭೀರವಾಗಿ ಗಾಯಗೊಂಡಿದ್ದಾಗಿ ಮಾಹಿತಿ ನೀಡಿದೆ. ಮೋನ್​ ಜಿಲ್ಲೆ ಮ್ಯಾನ್ಮಾರ್​​ನೊಟ್ಟಿಗೆ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ಕಾರಣ ಇಲ್ಲಿ ನುಸುಳುಕೋರರ ವಿರುದ್ಧ ಆಗಾಗ ಕಾರ್ಯಾಚರಣೆ ನಡೆಯುತ್ತಿರುತ್ತದೆ.

ರಾಜ್ಯಪಾಲರ ಪ್ರತಿಕ್ರಿಯೆ ಏನು?  ಘಟನೆಯ ಬಗ್ಗೆ ಉನ್ನತ ತನಿಖೆ ನಡೆಸಲು ಮುಖ್ಯಮಂತ್ರಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗೇ ಎಸ್​ಐಟಿ ರಚನೆ ಮಾಡಲಾಗಿದೆ ಎಂದು ನಾಗಾಲ್ಯಾಂಡ್ ಗವರ್ನರ್​ ಜಗದೀಶ್​ ಮುಖಿ ತಿಳಿಸಿದ್ದಾರೆ. ಎಸ್​ಐಟಿ ಈ ಘಟನೆಯನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಿದೆ ಎಂದಿದ್ದಾರೆ. ಹಾಗೇ, ಕೂಲಿಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆದ ಘಟನೆಯಲ್ಲಿ ಭಾಗಿಯಾದ ಸೇನಾ ಸಿಬ್ಬಂದಿ ವಿರುದ್ಧ ನ್ಯಾಯಾಲಯದಲ್ಲಿ ಕೂಡ ವಿಚಾರಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್​​ನಲ್ಲಿ ಭೀಕರ ಗುಂಡಿನ ದಾಳಿ, ಭದ್ರತಾ ವಾಹನಗಳಿಗೆ ಬೆಂಕಿ; ಯೋಧ ಸೇರಿ 13 ಜನರ ದುರ್ಮರಣ

Follow us on

Related Stories

Most Read Stories

Click on your DTH Provider to Add TV9 Kannada