ಆನೇಕಲ್: ತಾಲೂಕಿನಲ್ಲಿ ಕೊರೊನಾ ಸ್ಫೋಟ; ಅದಾಗ್ಯೂ ಸಮಾವೇಶದಲ್ಲಿ ಕೊವಿಡ್ ನಿಯಮಾವಳಿ ಮರೆತ ಬಿಜೆಪಿ ನಾಯಕರು!

ಆನೇಕಲ್ ತಾಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ನಡುವೆ ಅತ್ತಿಬೆಲೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ.

ಆನೇಕಲ್: ತಾಲೂಕಿನಲ್ಲಿ ಕೊರೊನಾ ಸ್ಫೋಟ; ಅದಾಗ್ಯೂ ಸಮಾವೇಶದಲ್ಲಿ ಕೊವಿಡ್ ನಿಯಮಾವಳಿ ಮರೆತ ಬಿಜೆಪಿ ನಾಯಕರು!
ವಿಜಯ ಸಂಕಲ್ಪ ಸಮಾವೇಶದ ಉದ್ಘಾಟನೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು

ಬೆಂಗಳೂರು: ಆನೇಕಲ್ ತಾಲೂಕಿನಲ್ಲಿ ಒಂದೇ ದಿನ 29 ಕೊರೊನಾ ಕೇಸ್ ದೃಢಪಟ್ಟಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಸ್ಫೂರ್ತಿ ಕಾಲೇಜಿನಲ್ಲಿ 7 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದ್ದು, ದಿ ಇಂಟರ್​​ನ್ಯಾಷನಲ್​​ ಸ್ಕೂಲ್‌ನಲ್ಲಿ ಮತ್ತೆ 5 ಪ್ರಕರಣ ಪತ್ತೆಯಾಗಿದೆ. ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ 3 ಕೇಸ್ ದಾಖಲಾಗಿದೆ. ಈಗಾಗಲೇ ಆನೇಕಲ್​ನಲ್ಲಿ ಬಹಳಷ್ಟು ಪ್ರಕರಣಗಳು ಕಾಣಿಸಿಕೊಂಡಿವೆ. ಇದೇ ಕಾರಣದಿಂದ ಕಳೆದ ವಾರ ಜಿಲ್ಲಾಧಿಕಾರಿ ತಾಲೂಕಿಗೆ ಭೇಟಿ ನೀಡಿದ್ದರು.

ವೈದ್ಯಾಧಿಕಾರಿ ತಂಡದಿಂದ ಇನ್ನಷ್ಟು ಕೊರೊನಾ ಸ್ವಾಬ್ ಟೆಸ್ಟ್​ಗಾಗಿ ಮಾದರಿಗಳನ್ನು ಲ್ಯಾಬ್​ಗೆ ರವಾನೆ ಮಾಡಲಾಗಿದೆ. ಆಡ್ ಕಾಕ್ ಕಂಪನಿ ಯಲ್ಲಿ ಕಳೆದ 20ರಂದು ಸೌತ್ ಆಫ್ರಿಕಾದಿಂದ ಒಬ್ಬರು ಆಗಮಿಸಿದ್ದರು. ಬಂದು ಮೀಟಿಂಗ್ ಮುಗಿಸಿ ಅವರು ವಾಪಾಸಾಗಿದ್ದಾರೆ. ಅವರಿಂದಲೇ ಇದೀಗ ಕಂಪನಿಯಲ್ಲಿ ಮೂರು ಮಂದಿಗೆ ಪಾಸಿಟಿವ್ ವರದಿ ಬಂದಿರಬಹುದು ಎನ್ನಲಾಗಿದೆ. ಆನೇಕಲ್ ಸುತ್ತಮುತ್ತ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ನಿವಾಸಿಗಳು ಆತಂಕಿತರಾಗಿದ್ದಾರೆ.

ಆನೇಕಲ್​ನಲ್ಲಿ ಕೊರೊನಾ ಹೆಚ್ಚಿದ್ದರೂ ಬಿಜೆಪಿ ರಾಜಕೀಯ ಸಮಾವೇಶದಲ್ಲಿ ಕೊರೊನಾ ನಿಯಮ ಉಲ್ಲಂಘನೆ: ಆನೇಕಲ್: ಬೆಂಗಳೂರು ದಕ್ಷಿಣ ಬಿಜೆಪಿ ಇಂದು ಆನೇಕಲ್​ನ ಅತ್ತಿಬೆಲೆಯಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಸಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಮಾವೇಶದ ಉದ್ಘಾಟನೆ ವೇಳೆ ಬಿಜೆಪಿ ನಾಯಕರು ಗುಂಪಾಗಿ ಸೇರಿದ್ದು, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಪಾಲಿಸದೇ ಕೊವಿಡ್ ಪ್ರೋಟೋಕಾಲ್​ಗಳನ್ನು ಉಲ್ಲಂಘಿಸಲಾಗಿದೆ.

ಒಮಿಕ್ರಾನ್ ಆತಂಕವಿದ್ದರೂ ಕೂಡ, ನಿಯಮಾವಳಿಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ ಎಂದು ಸಾರ್ವಜನಿಕರು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆನೇಕಲ್ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ರಾಜಕೀಯ ಸಮಾವೇಶದಲ್ಲಿ ನಿಯಮಾವಳಿಗಳನ್ನು ಪಾಲಿಸದಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.

ಇದನ್ನೂ ಓದಿ:

ನಾಗಾಲ್ಯಾಂಡ್​​ನಲ್ಲಿ 13 ಮಂದಿ ಕೂಲಿಕಾರ್ಮಿಕರು ಬಲಿಯಾಗಿದ್ದು ಭದ್ರತಾ ಪಡೆಯ ಗುಂಡಿನ ದಾಳಿಗೆ; ಪ್ರಮಾದದ ಬಗ್ಗೆ ವಿಷಾದವಿದೆ ಎಂದ ಸೇನೆ

ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾಗಾಲ್ಯಾಂಡ್  ಘಟನೆ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ

Published On - 5:04 pm, Sun, 5 December 21

Click on your DTH Provider to Add TV9 Kannada