ವಿಜಯಪುರ: ಸಚಿವರ ಹೆಸರಿನಲ್ಲಿದ್ದ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ಭಾರೀ ಗೋಲ್ಮಾಲ್; ಸಿಐಡಿ ವಿಚಾರಣೆ ಬಳಿಕವೂ ಸಿಗದ ಠೇವಣಿ ಇಟ್ಟ ಹಣ
ಜಿಲ್ಲೆಯಲ್ಲಿ ಈ ಹಿಂದೆ ಸಚಿವ ಮರುಗೇಶ್ ನಿರಾಣಿ ಸೌಹಾರ್ದ ಸಹಕಾರಿ ನಿಯಮಿತ ಎಂಬ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿತ್ತು. ಜನರು ಸಹ ಪ್ರಭಾವಿ ರಾಜಕಾರಣಿ, ಹಲವಾರು ಸಕ್ಕರೆ ಕಾರ್ಖಾನೆಗಳ ಒಡೆತನ ಹೊಂದಿದವರು ಎಂಬ ನಂಬಿಕೆಯಿಂದ ತಮ್ಮ ಉಳಿತಾಯ ಹಣವನ್ನು ಈ ಬ್ಯಾಂಕ್ನಲ್ಲಿ ಡೆಪಾಸಿಟ್ ಇಟ್ಟರು. ಆದರೆ ಡೆಪಾಸಿಟ್ ಇಟ್ಟ ಹಣ ಮೆಚ್ಯೂರಿಟಿಯಾದರೂ ಡೆಪಾಸಿಟ್ರ್ ಕೈಗೆ ಸಿಗದಂತಾಗಿತ್ತು.
ವಿಜಯಪುರ: ಸಚಿವರ ಹೆಸರಿನಲ್ಲಿದ್ದ ಸೌಹಾರ್ದ ಬ್ಯಾಂಕ್ನಲ್ಲಿ ಬಾರೀ ಗೋಲ್ಮಾಲ್ ಆಗಿದ್ದು, ಸಿಐಡಿ ವಿಚಾರಣೆ ಬಳಿಕವೂ ಠೇವಣಿ ಇಟ್ಟ ಹಣಕ್ಕಾಗಿ ಪರಿತಪಿಸುತ್ತಿದ್ದಾರೆ ಠೇವಣಿದಾರರು. ಆರಂಭದಲ್ಲಿ ಶ್ರೀ ಮುರುಗೇಶ್ ನಿರಾಣಿ ಸೌಹಾರ್ದ ಸಹಕಾರಿ ನಿಯಮಿತ(Shri Murugesha Nirani Souharda Cooperative Bank)ಎಂಬ ಬ್ಯಾಂಕ್ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಬ್ಯಾಂಕ್ನ 21 ಶಾಖೆಗಳು ಇದ್ದು, 16,000 ಗ್ರಾಹಕರನ್ನು ಹೊಂದಿದೆ. 2009 ರಿಂದಲೇ ಶ್ರೀ ಮುರುಗೇಶ್ ನಿರಾಣಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಜನರು ಹೆಚ್ಚಿನ ಬಡ್ಡಿ ಬರುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಕಷ್ಟಗಾಲದಲ್ಲಿ ಹೆಚ್ಚಿನ ಹಣ ಸಿಗುತ್ತದೆ ಎಂದು ಕನಸು ಕಂಡಿದ್ದರು. ಆದರೆ ಠೇವಣಿ ಮೆಚ್ಯೂರಿಟಿಯಾದ ಬಳಿಕವೂ ಠೇವಣಿದಾರರ ಕೈಗೆ ಇನ್ನು ಹಣ ಸಿಕ್ಕಿಲ್ಲ.
ಒಂದು ಮೂಲದ ಪ್ರಕಾರ 29.29 ಕೋಟಿ ಹಣ ಠೇವಣದಾರರಿಗೆ ವಾಪಸ್ ಬರಬೇಕಿತ್ತು. ಇಷ್ಟರ ಮದ್ಯೆ ಸಚಿವ ಮರುಗೇಶ್ ನಿರಾಣಿ ನನ್ನ ಹೆಸರಿನ ಬ್ಯಾಂಕ್ ನಾನು ಸ್ಥಾಪಿಸಿಲ್ಲ. ಈ ಬ್ಯಾಂಕಿಗೂ ನನಗೂ ಸಂಬಂಧವಿಲ್ಲಾ ಎಂದು ನ್ಯಾಯಾಲಯದ ಮೂಲಕ ಆದೇಶ ತಂದರು. ಆಗ ಬ್ಯಾಂಕಿನ ಆಡಳಿತ ಮಂಡಳಿ ಈ ಬ್ಯಾಂಕ್ ಮರುಗೇಶ್ ನಿರಾಣಿ ಸೌಹಾರ್ಧ ಸಹಕಾರ ನಿಯಮಿತವಲ್ಲ, ಬದಲಾಗಿ ಎಸ್ಎಂಎನ್ ಸೌಹಾರ್ದ ಸಹಕಾರಿ ನಿಯಮಿತ ಎಂದು ದಾಖಲೆ ಸಲ್ಲಿಸಿ ಇದಕ್ಕೂ ನಿರಾಣಿ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಯಾವುದೇ ಠೇವಣಿದಾರರಿಗೆ ಇನ್ನು ಡಿಪಾಸಿಟ್ ಹಣವನ್ನು ವಾಪಸ್ ನೀಡಲಿಲ್ಲ.
2020 ರ ನವೆಂಬರ್ನಲ್ಲಿ ಆಮರಣ ಧರಣಿ ಸತ್ಯಾಗ್ರಹ
ಗ್ರಾಹಕರು ಸೇರಿ ವಿಜಯಪುರ ಜಿಲ್ಲಾ ಸಹಕಾರಿ ಇಲಾಖೆಯ ಕಚೇರಿ ಎದುರಿಗೆ ಕಳೆದ 2020 ರ ನವೆಂಬರ್ನಲ್ಲಿ ಆಮರಣ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಇದು ಗಂಭೀರತೆ ಪಡೆದು ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ತಂಡ ತನಿಖೆ ನಡೆಸಿ, ಆಡಳಿತ ಮಂಡಳಿ ಹಾಗೂ ಕೆಲ ಸಿಬ್ಬಂದಿಗಳ ತಪ್ಪುಗಳನ್ನು ಕಂಡು ಹಿಡಿದಿತ್ತು. ಎಸ್ಎಂಎನ್ ಕ್ರೆಡಿಟ್ ಸೌಹಾರ್ಧದ ಅಧ್ಯಕ್ಷ ಅನೀಲ ದೇಶಪಾಂಡೆ, ಉಪಾಧ್ಯಕ್ಷ ಶಂಕರ ವಿ. ನಾಯ್ಕರ, ಗುಮಾಸ್ತ ಮೊಹ್ಮದ ಯುಸೂಫ್ ಭಾಗವಾನ, ಸಿಸ್ಟಮ್ ಎಡ್ಮಿನ್ ರಾಮು ಬಂಡಿವಾಡ, ಕಂಪ್ಯೂಟರ್ ಹಾರ್ಡವೇರ್ ಉಸ್ತುವಾರಿ ಶ್ರೀಧರ ಕಾತರಕಿ ಎಂಬುವವರನ್ನಾ ಬಂಧಿಸಿತ್ತು. ಬಳಿಕ ಜಿಲ್ಲಾಡಳಿತದ ಮೂಲಕ ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆದವರು ಸಾಲ ಮರು ಪಾವತಿ ಮಾಡಲು ವಿಶೇಷ ಅಕೌಂಟ್ ಓಪನ್ ಮಾಡಿತ್ತು.
ಜಲನಗರ ಕೆನೆರಾ ಬ್ಯಾಂಕ್ನಲ್ಲಿ ಕಂಪೆಂಟೆಂಟ್ ಅಥಾರಿಟಿ ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರ ಆ್ಯಂಡ್ ಅಸಿಸ್ಟಂಟ್ ಕಮೀಷನರ್ ಸಬ್ ಡಿವಿಜನ್ ವಿಜಯಪುರ ಹೆಸರಿನ ಉಳಿತಾಯ ಖಾತೆ ತೆರೆಯಲಾಗಿತ್ತು. ಆದರೆ ಯಾವ ಸಾಲಗಾರರು ಸಹ ವಾಪಸ್ ಹಣ ಸಂದಾಯ ಮಾಡಿಲ್ಲ. ಇದರಿಂದ ರೋಸಿ ಹೋದ ಗ್ರಾಹಕರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮಗಾದ ಅನ್ಯಾಯವನ್ನು ಸರಿ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಜೊತೆಗೆ ಈಗಲೂ ಮುರುಗೇಶ ನಿರಾಣಿ ಸೌಹಾರ್ಧ ಸಹಕಾರ ನಿಯಮಿತದ ಹೆಸರಿನಲ್ಲಿ ಬ್ಯಾಂಕ್ ಇದ್ದ ಕಾರಣ ಹಣ ಇಟ್ಟಿದ್ದೇವೆ. ನಮಗೆ ನ್ಯಾಯ ನೀಡಿ ಎಂದು ಅಂಗಲಾಚಿದ್ದಾರೆ.
ಇದನ್ನೂ ಓದಿ:ತಿಂಗಳಿಗೊಮ್ಮೆಯಾದರೂ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಬೇಕು; ಯಾಕೆಂಬುದು ಇಲ್ಲಿದೆ ನೋಡಿ
2009 ರಲ್ಲಿ ಬ್ಯಾಂಕ್ ಆರಂಭವಾದಾಗಲೇ ಜಿಲ್ಲೆಯ ಸುಮಾರು 16000 ಗ್ರಾಹಕರು ತಮ್ಮ ಬಳಿಯಿದ್ದ ಹಣವನ್ನು ಡಿಪಾಸಿಟ್ ಇಟ್ಟಿದ್ದರು. ಆದರೆ 13 ವರ್ಷವಾದರೂ ಇವರೆಲ್ಲರ ಕೋಟಿ ಕೋಟಿ ಹಣ ಮಾತ್ರ ಸಿಕ್ಕಿಲ್ಲ. ಕಷ್ಟ ಪಟ್ಟು ದುಡಿದ ಹಣ ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಚಿಕಿತ್ಸೆಗೆ ಮುಂದಿನ ಜೀವನಕ್ಕೆ ಎಂದು ಇಟ್ಟಿದ್ದ ಹಣ ಮಂಗ ಮಾಯವಾದಂತಾಗಿದೆ. ಸಿಐಡಿ ತನಿಖೆಯಿಂದ ಬ್ಯಾಂಕಿನವರ ಬಂಧನವಾದ ಬಳಿಕವಾದರೂ ನಮ್ಮ ಹಣ ನಮಗೆ ವಾಪಸ್ ಬರುತ್ತದೆ ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಸಿಐಡಿ ತನಿಖೆಯಾಗಿ ಎರಡು ವರ್ಷವಾದರೂ ಹಣ ಯಾವುದೇ ಠೇವಣಿದಾರರ ಕೈಗೆ ಸಿಕ್ಕಿಲ್ಲ. ಕೈಯಲಿದ್ದ ಕಾಸು ಕಳೆದುಕೊಂಡು 13 ವರ್ಷಗಳಿಂದ ಪರಿತಪಿಸುತ್ತಿದ್ದಾರೆ. ಇನ್ನು ಠೇವಣಿ ಇಟ್ಟಿದ್ದವರು ಇದೇ ಚಿಂತೆಯಲ್ಲಿ ಹತ್ತಾರು ಜನರು ನಿಧನರಾಗಿದ್ದಾರೆ.
ಇನ್ನು ಈ ಸೌಹಾರ್ದ ಬ್ಯಾಂಕಿನ ಮೂಲ ಸಮಸ್ಯೆಯೇ ಆಧಿಕವಾಗಿ ಸಾಲ ನೀಡಿದ್ದು. ಬ್ಯಾಂಕ್ ನಿಂದ ಅವೈಜ್ಞಾನಿಕವಾಗಿ ಹಾಗೂ ಕಾನೂನು ಬಾಹೀರವಾಗಿ 70 ರಿಂದ 75 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಇದೇ ಸಾಲದ ಹಣವನ್ನು ವಸೂಲಿ ಮಾಡಿದರೆ ಎಲ್ಲಾ ಠೇವಣಿದಾರರ ಡೆಪಾಸಿಟ್ ಹಣವನ್ನು ವಾಪಸ್ ನೀಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ಸಹಕಾರಿ ಸಚಿವರು ಹಾಗೂ ಸಂಬಂಧಿಸಿದ ಆಧಿಕಾರಿಗಳು ವಿಚಾರ ಮಾಡಬೇಕಿದೆ. ಎಸ್ಎಂಎನ್ ಸೌಹಾರ್ದ ಸಹಕಾರಿ ನಿಯಮಿತದ ಮೂಲಕ ಸಾಲ ಪಡೆದವರಿಂದ ಸಾಲ ಮರು ಪಾವತಿ ಮಾಡಿ ಅದೇ ಹಣವನ್ನು ಡಿಪಾಸಿಟ್ ಮಾಡಿದವರಿಗೆ ನೀಡಬೇಕಿದೆ.
ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Mon, 27 February 23