ವಿಜಯಪುರ: ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಸಂಬಂಧಿಯನ್ನೇ ಕೊಲೆ ಮಾಡಿದ ಗಂಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 21, 2023 | 9:54 AM

ಜಿಲ್ಲೆಯ ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನನ್ನು ಆತನ ಸಂಬಂಧಿಯೇ ತನ್ನ ಪತ್ನಿಯ ಜೊತೆ ಸಲುಗೆಯಿಂದ ಮಾತಾಡುತ್ತಿಯಾ ಎಂದು ಅನುಮಾನಪಟ್ಟು ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿಕೊಳ್ಳಬೇಕಾದ ಸಮಸ್ಯೆ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ವಿಜಯಪುರ: ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಸಂಬಂಧಿಯನ್ನೇ ಕೊಲೆ ಮಾಡಿದ ಗಂಡ
ಮೃತ ಈರಯ್ಯಾ ಮಠ
Follow us on

ವಿಜಯಪುರ: ನಗರದ ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಹೊತ್ತು ಗೊತ್ತು ಇಲ್ಲದೇ ಕರೆ ಮಾಡಿ ಮಾತನಾಡುತ್ತಿದ್ದನಂತೆ. ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ನ್ಯಾಯ ಪಂಚಾಯಿತಿಯಿಂದ ಬಗೆ ಹರಿಸಿಕೊಳ್ಳಬೇಕಿದ್ದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕೊಲೆ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾಳಿಕಾ ನಗರದ ವಾಸಿಯಾಗಿದ್ದ ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಇವರ ಮನೆಯ ಸನೀಹವೇ ಇವರ ಸಂಬಂಧಿಕರಾದ ದಾನಯ್ಯ ಗಣಾಚಾರಿ ಮನೆಯಿದೆ. ಎರಡು ಮನೆಯವರು ಒಂದೇ ಸುಮುದಾಯದವರು ಜೊತೆಗೆ ಸಂಬಂಧಿಕರೂ ಆಗಿದ್ದಾರೆ. ಡಿಸೆಂಬರ್ 17 ರ ಬೆಳಿಗ್ಗೆ 9 ಗಂಟೆ ಸುಮಾರು ಈರಯ್ಯನ ಮನೆಗೆ ಬಂದ ದಾನಯ್ಯ ಗಣಾಚಾರಿ ಹಾಗೂ ಆತನ ಸಹೋದರ ಸಿದ್ದಯ್ಯಾ ಹಾಗೂ ಸ್ನೇಹಿತ ಸಚಿನ್ ಬಂದು ಈರಯ್ಯಾ ಮಠನನ್ನು ಕರೆದಿದ್ದಾರೆ. ಆಗ ಯಾಕೆ ಎಂದು ಕವಿತಾ ಪ್ರಶ್ನೆ ಮಾಡಿದ್ದಾಳೆ. ಆಗ ಮಾತನಾಡಿದ ದಾನಯ್ಯ ನನ್ನ ಪತ್ನಿ ವಾಣಿಯ ತಂದೆ ಗುರಣ್ಣ ಉರ್ಫ ಗುರಯ್ಯಾ ನ್ಯಾಯ ಪಂಚಾಯತಿ ಮಾಡುವುದು ಇದೆ. ಈರಯ್ಯಾ ನನ್ನ ಪತ್ನಿ ವಾಣಿಯ ಜೊತೆಗೆ ಸಲುಗೆಯಿಂದ ಮಾತನಾಡುತ್ತಾನೆ. ಹೊತ್ತು ಗೊತ್ತು ಇಲ್ಲದೇ ಮೊಬೈಲ್ ಕರೆ ಮಾಡಿ ಮಾತನಾಡುತ್ತಾನೆ. ಈ ವಿಚಾರದ ಕುರಿತು ವಾಣಿ ತಂದೆ ಗುರಣ್ಣ ಮಾತನಾಡುವುದು ಇದೆ ಎಂದಿದ್ದಾನೆ.

ಆಗ ಕವಿತಾ ನಾನೂ ಜೊತೆಗೆ ಬರುತ್ತೇನೆಂದು ಪಟ್ಟು ಹಿಡಿದಿದ್ದಾಳಂತೆ. ಅಸಲಿಗೆ ದಾನಯ್ಯನ ಪತ್ನಿ ವಾಣಿ ಇದೇ ಕೊಲೆಗೀಡಾದ ಈರಯ್ಯಾ ಮಠನ ಸೋದರ ಮಾವನ ಮಗಳು. ಈ ಹಿಂದೆ ದಾನಯ್ಯ ಗಣಾಚಾರಿ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾಗ ದಾನಯ್ಯನಿಗೆ ತನ್ನ ಸೋದರ ಮಾವನ ಮಗಳು ವಾಣಿಯನ್ನು ತೋರಿಸಿದ್ದಾನೆ. ಎಲ್ಲರಿಗೂ ಒಪ್ಪಿಗೆಯಾದ ಕಾರಣ ದಾನಯ್ಯ ಹಾಗೂ ವಾಣಿ ಮದುವೆ ಮಾಡಿದ್ದಾರೆ. ಇಬ್ಬರಿಗೆ ಒಂದು ಗಂಡು ಮಗುವಾಗಿದೆ. ಇಷ್ಟರ ಮದ್ಯೆ ಈರಯ್ಯಾ ವಾಣಿ ಜೊತೆಗೆ ಸಲುಗೆಯಿಂದ ಇರೋದು ಮೊಬೈಲ್ ಕರೆ ಮಾಡಿ ಮಾತನಾಡುವುದು ದಾನಯ್ಯನಿಗೆ ಕೋಪ ತರಿಸಿದೆ. ಇದನ್ನು ವಾಣಿ ಹಾಗೂ ಆಕೆಯ ತಂದೆ ತಾಯಿಗೂ ತಿಳಿಸಿದ್ದಾರೆ. ಈ ವಿಚಾರವಾಗಿ ನ್ಯಾಯ ಪಂಚಾಯತಿ ಮಾಡೋಣವೆಂದು ಈರಯ್ಯನನ್ನು ಡಿಸೆಂಬರ್ 17 ರಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆತನ ಜೊತೆಗೆ ಪತ್ನಿ ಕವಿತಾಳೂ ಹೋಗಿದ್ಧಾಳೆ. ಕಾರಿನಲ್ಲಿ ಕರೆದುಕೊಂಡು ಅವರನ್ನು ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ಹೊರ ಭಾಗದಲ್ಲಿನ ಕಬ್ಬಿನ ಜಮೀನಿಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ:ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆ ಸಂಚು ಪ್ರಕರಣ: ಸೈಲೆಂಟ್ ಸುನೀಲ್‌ನಿಗೆ ರಿಲೀಫ್ ನೀಡಿದ ಹೈಕೋರ್ಟ್

ಹೀಗೆ ಈರಯ್ಯಾ ಮಠ ಹಾಗೂ ಆತನ ಪತ್ನಿ ಕವಿತಾಳನ್ನು ಕರೆದುಕೊಂಡು ಬಂದಿದ್ದ ತಂಡಕ್ಕೆ ದಾನಯ್ಯ ಗಣಚಾರಿ ಪತ್ನಿ ವಾಣಿ ಆಕೆಯ ತಂದೆ ಗುರಣ್ಣ ಉರ್ಫ್ ಗುರಯ್ಯಾ ಹಾಗೂ ವಾಣಿಯ ತಾಯಿ ಬಾಗಮ್ಮ ಸಹ ಸೇರಿಕೊಂಡಿದ್ದಾರೆ. ಕಾರಿನಿಂದ ಮೊದಲು ಈರಯ್ಯನನ್ನು ಕೆಳಗೆ ಇಳಿಸಿ ಹಸಿ ಕಬ್ಬಿನ ಜಲ್ಲೆ ಹಾಗೈ ಕೈಗೆ ಸಿಕ್ಕ ಬಡಿಗೆಗಳಿಂದ ಹೊಡೆಯಲು ಆರಂಭಿಸಿದ್ದಾರೆ. ಯಾಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರೂ ಯಾವುದೇ ಉತ್ತರ ಕೊಡದೇ ಮನ ಬಂದಂತೆ ಹೊಡೆದಿದ್ದಾರೆ. ಇದನ್ನು ಕಂಡು ಓಡಿ ಬಂದ ಈರಯ್ಯನ ಪತ್ನಿ ಕವಿತಾ ಹೊಡೆಯುವದನ್ನು ಬಿಡಿಸಲು ಬಂದಿದ್ದಾಳೆ. ಬಿಡಿಸಲು ಬಂದರೆ ನಿನ್ನನ್ನೂ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಆಗ ಕವಿತಾ ತನ್ನ ತಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದು ಕವಿತಾಳ ಸಹೋದರ ಹಾಗೂ ಕವಿತಾಳ ಅಕ್ಕ, ಭಾವ ಅಲ್ಲಿಗೆ ಬಂದಿದ್ದಾರೆ.

ಅಷ್ಟರಲ್ಲಿ ಈರಯ್ಯನನ್ನು ಮನಸೋಯಿಚ್ಛೇ ಥಳಿಸಿದ್ದರು. ಇವರೆಲ್ಲಾ ಬಂದು ದಾನಯ್ಯ ಹಾಗೂ ಇತರರ ಕಾಲು ಹಿಡಿದು ಹೊಡೆಯಬೇಡಿ. ಏನಿದ್ದರೂ ನ್ಯಾಯ ಪಂಚಾಯತಿ ಮಾಡಿ ಜಗಳ ಬಗೆಹರಿಸೋಣಾ ಎಂದು ಬೇಡಿಕೊಂಡಿದ್ದರಂತೆ. ಆದರೂ ಬಿಡದೇ ಈರಯ್ಯನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಈರಯ್ಯ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಹೊಡೆಯವುದನ್ನು ಬಿಟ್ಟಿದ್ದಾರೆ. ಈ ವೇಳೆ ಈರಯ್ಯನನ್ನು ಆತನ ಪತ್ನಿ ಹಾಗೂ ಸಂಬಂಧಿಕರು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಆಸ್ಪತ್ರೆಯಲ್ಲಿ ನಾವೆಲ್ಲಾ ಹೊಡೆದಿದ್ದೇವೆ ಎಂದು ಹೇಳಿದರೆ ಯಾರೂ ಚಿಕಿತ್ಸೆ ಕೊಡುವುದಿಲ್ಲ ಹಾಗಾಗಿ ಮನೆಯ ಮೇಲ್ಚಾವಣಿಯಿಂದ ಕೆಳಗೆ ಬಿದ್ದಿದ್ದಾನೆ ಎಂದು ಹೇಳಿ. ಆಗ ಚಿಕಿತ್ಸೆ ನೀಡುತ್ತಾರೆಂದು ಹೆದರಿಸಿದ್ದಾರೆ.ಅದರಂತೆ ಈರಯ್ಯನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಮನೆಯ ಮೇಲ್ಚಾವಣಿಯಿಂದ ಬಿದ್ದಿದ್ದಾನೆ ಎಂದು ಹೇಳಿದ್ದರಂತೆ.

ಇನ್ನು ಈರಯ್ಯಾ ಮಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಆ ಸುದ್ದಿ ತಿಳಿದು ಆತನ ಮೇಲೆ ಹಲ್ಲೆ ಮಾಡಿದ ದಾನಯ್ಯ ಗಣಾಚಾರಿ, ಆತನ ಸಹೋದರ ಸಿದ್ದಯ್ಯಾ ಗಣಾಚಾರಿ, ಪತ್ನಿ ವಾಣಿ, ಪತ್ನಿಯ ತಂದೆ ಗುರಣ್ಣ ಪತ್ನಿಯ ತಾಯಿ ಬಾಗಮ್ಮ ಹಾಗೂ ಸ್ನೇಹಿತ ಸಚಿನ್ ಮನೆ ಬಿಟ್ಟು ಓಡಿ ಹೋಗಿದ್ದರು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಹೆಚ್.ಡಿ ಆನಂದಕುಮಾರ, ಗೋಲಗುಮ್ಮಟ ವೃತ್ತದ ಇನ್ಸಪೆಕ್ಟರ್ ಸೀತಾರಾಮ ಮಠಪತಿ ನೇತೃತ್ವದ ತನಿಖಾ ತಂಡವನ್ನು ರಚಿಸಿ, ಈರಯ್ಯಾ ಮಠ ಕೊಲೆಗೆ ಕಾರಣವಾದವರನ್ನು ಬಂಧಿಸಲು ಸೂಚನೆ ನೀಡಿದ್ದರು. ಘಟನೆ ಬಳಿಕ ಎಲ್ಲಾ ಆರೋಪಿತರು ತಮ್ಮ ತಮ್ಮ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದರು. ಜೊತೆಗೆ ನಗರ ಪ್ರದೇಶ ಬಿಟ್ಟು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು.ಪೊಲೀಸರ ಭೀತಿ ಕಡಿಮೆಯಾದ ವೇಳೆ ಪ್ರಮುಖ ಆರೋಪಿತರಾದ ದಾನಯ್ಯ ಗಣಾಚಾರಿ ಹಾಗೂ ಗುರಣ್ಣ ಉರ್ಫ್ ಗುರುಮೂರ್ತಯ್ಯಾ ಮಣಿಕಂಟಮಠ ಎಂಬಿಬ್ಬರು ವಿಜಯಪುರ ನಗರಕ್ಕೆ ಬಂದಿದ್ದಾರೆ. ಈ ಸುಳಿವನ್ನು ಅರಿತ ಪೊಲೀಸರು ತಡ ಮಾಡದೇ ಇಬ್ಬರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಾದ ವಾಣಿ, ಸಿದ್ದಯ್ಯಾ, ಸಚಿನ್ ಹಾಗೂ ಬಾಗಮ್ಮರನ್ನು ಶೀಘ್ರವೇ ಬಂಧಿಸೋದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಬಿಸಿ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಇಬ್ಬರು ಆರೋಪಿಗಳ ಬಂಧನ

ಇಡೀ ಪ್ರಕರಣದ ಪ್ರಮುಖ ಆರೋಪಿಗಳಾದ ದಾನಯ್ಯ ಗಣಾಚಾರಿ, ಗುರಣ್ಣ ಉರ್ಫ್ ಗುರುಮೂರ್ತಯ್ಯಾ ಮಣಿಕಂಟಮಠ ಇದೀಗಾ ಅಂದರ್ ಆಗಿದ್ಧಾರೆ. ಇತರೆ ನಾಲ್ಕು ಆರೋಪಿತರು ಪರಾರಿಯಲ್ಲಿದ್ದು ಅವರನ್ನೂ ತ್ವರಿತವಾಗಿ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಅದೇನೇ ಇರಲಿ ಒಂದು ಕ್ಷಣದ ಸಿಟ್ಟು ಆಕ್ರೋಶ ಇಂದು ಇಡೀ ಕುಟುಂಬವನ್ನು ಅನಾಥವನ್ನಾಗಿ ಮಾಡಿದೆ. ಮತ್ತೊಂದು ಕುಟುಂಬವಿಡೀ ಜೈಲಿನಲ್ಲಿ ಕೊಳೆಯುವಂತಾಗಿದೆ. ಮಾತುಕತೆಗಳಲ್ಲಿ ಬಗೆ ಹರಿಸಬೇಕಿದ್ದ ಕ್ಷುಲ್ಲಕ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಇಲ್ಲಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ