Vijaya Sankalpa Yatra: ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಇಂದು ರಾಜ್ಯಕ್ಕೆ ಜೆ.ಪಿ.ನಡ್ಡಾ ಆಗಮನ
ಇಂದು ವಿಜಯಪುರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆರ್.ಡಿ.ಕಾಲೇಜು ಎದುರಿನ ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಬೆಂಗಳೂರು: ಇಂದಿನಿಂದ 9 ದಿನ ರಾಜ್ಯದ ವಿವಿಧೆಡೆ ಬಿಜೆಪಿ ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ(Vijaya Sankalpa Yatra) ಚಾಲನೆ ಸಿಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯಕ್ಕೆ ಮೋದಿ ಆಗಮಿಸಿ ದಿನ ಕಳೆಯೋಷ್ಟರಲ್ಲೇ ಇಂದು ವಿಜಯಪುರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆರ್.ಡಿ.ಕಾಲೇಜು ಎದುರಿನ ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. 30 ಸಾವಿರ ಕಾರ್ಯಕರ್ತರು, ಸಾರ್ವಜನಿಕರನ್ನು ಸೇರಿಸಿ ಸಮಾವೇಶ ನಡೆಯಲಿದೆ.
ಇಂದು ಬೆಳಗ್ಗೆ 11ಕ್ಕೆ ಕಲಬುರಗಿ ಏರ್‌ಪೋರ್ಟ್‌ಗೆ ಜಗತ್ ಪ್ರಕಾಶ್ ನಡ್ಡಾ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ನಲ್ಲಿ ವಿಜಯಪುರದ ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 11.40ಕ್ಕೆ ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಲಿಂಗೈಕ್ಯ ಸಿದ್ದೇಶ್ವರಶ್ರೀ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜ್ಞಾನ ಯೋಗಾಶ್ರಮದಿಂದ J.P.ನಡ್ಡಾ ನಿರ್ಗಮಿಸಲಿದ್ದಾರೆ. 12.05ಕ್ಕೆ ನಾಗಠಾಣ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನೆ ಮಾಡಿ ಮನೆ ಮನೆ ಅಭಿಯಾನ, ಕರಪತ್ರ ವಿತರಣೆ, ಫಲಾನುಭವಿಗಳ ಸಭೆ ನಡೆಸಿ ಗೋಡೆ ಬರಹ ಮತ್ತು ಮಿಸ್ ಕಾಲ್ ಸದಸ್ಯತ್ವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ 12.30ಕ್ಕೆ ನಾಗಠಾಣದಿಂದ ರಸ್ತೆ ಮಾರ್ಗವಾಗಿ ಹೆಲಿಪ್ಯಾಡ್‌ಗೆ ಬಂದು 12.55ಕ್ಕೆ ಸಿಂದಗಿಯ ಆರ್.ಡಿ.ಪಾಟೀಲ್ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಿ ಮಧ್ಯಾಹ್ನ 1.05ಕ್ಕೆ ಸಿಂದಗಿಯ ಚೌಧರಿ ಲೇಔಟ್‌ನಲ್ಲಿ ವಿಜಯ ಸಂಕಲ್ಪ ಅಭಿಯಾನದ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕೊನೆಗೆ ಮಧ್ಯಾಹ್ನ 2.25ಕ್ಕೆ ಕಲಬುರಗಿ ಏರ್‌ಪೋರ್ಟ್‌ನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ನಡ್ಡಾ ಆಗಮನ ಹಿನ್ನೆಲೆ ಪೊಲೀಸ್ ಸರ್ಪಗಾವಲು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಗಮನ ಹಿನ್ನೆಲೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಿಜಯಪುರ SP ಹೆಚ್.ಡಿ.ಆನಂದಕುಮಾರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗುತ್ತಿದ್ದು ಓರ್ವ ಎಎಸ್‌ಪಿ, ಓರ್ವ ಡಿವೈಎಸ್‌ಪಿ, 4 ಇನ್ಸ್ಪೆಕ್ಟರ್ಗಳು, 10 ಸಬ್ಇನ್ಸ್ಪೆಕ್ಟರ್ಗಳು, ನೂರಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು, 1 ಐಆರ್‌ಬಿ ತುಕಡಿ, 3 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ಕಲಬುರಗಿಗೆ ಪ್ರಯಾಣ ಬೆಳೆಸಲಿರುವ ಬಿಎಸ್ ಯಡಿಯೂರಪ್ಪ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸ ಹಿನ್ನೆಲೆ ಬೆಳಗ್ಗೆ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಪ್ರಯಾಣ ಬೆಳೆಸಲಿದ್ದಾರೆ. ಕಲಬುರಗಿ ಏರ್‌ಪೋರ್ಟ್‌ನಲ್ಲಿ ನಡ್ಡಾ ಸ್ವಾಗತಿಸಲಿದ್ದಾರೆ. ಹಾಗೂ ನಡ್ಡಾ ಅವರೊಂದಿಗೆ ಜ್ಞಾನ ಯೋಗಾಶ್ರಮ ಭೇಟಿ ಮತ್ತು ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಬೀಳ್ಕೊಟ್ಟು ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುವ ನಾಯಕರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ-ನಾಗಠಾಣ ಮತ್ತು ಸಿಂದಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್‌ವೈ-ನಾಗಠಾಣ, ಸಿಂದಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್-ಚಿಕ್ಕಬಳ್ಳಾಪುರ ಕೇಂದ್ರ ಗಣಿ ಇಲಾಖೆಯ ಸಚಿವ ಪ್ರಹ್ಲಾದ್ ಜೋಶಿ-ದಾವಣಗೆರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-ದಾಬಸ್‌ಪೇಟೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು-ಜಯನಗರ, ಬಿಟಿಎಂ ಲೇಔಟ್ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ-ಮಹಾಲಕ್ಷ್ಮೀ ಲೇಔಟ್
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ