Rozgar Mela: ವಿವಿಧ ಹುದ್ದೆಗಳಿಗೆ ಆಯ್ಕೆಯಾದ 71000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ, ಕರ್ನಾಟಕದಿಂದ ಆಯ್ಕೆಯಾದ 765 ಅಭ್ಯರ್ಥಿಗಳನ್ನು ಅಭಿನಂದಿಸಿದ ಪ್ರಲ್ಹಾದ್ ಜೋಶಿ
ರೋಜ್ಗಾರ್ ಮೇಳದಡಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ 71 ಸಾವಿರ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಅವರು ನೇಮಕಾತಿ ಪತ್ರ ವಿತರಣೆ ಮಾಡಿದರು. ಕರ್ನಾಟಕದಿಂದ ಆಯ್ಕೆಯಾದ 765 ಅಭ್ಯರ್ಥಿಗಳನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿನಂದಿಸಿದರು.
ಬೆಂಗಳೂರು: ರೋಜ್ಗಾರ್ ಮೇಳದ (Rozgar Mela) ಮೂಲಕ ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಕರ್ನಾಟಕದ 756 ಅಭ್ಯರ್ಥಿಗಳು ಸೇರಿದಂತೆ ಒಟ್ಟು 71,000 ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವರ್ಚುವಲ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶದ ವಿವಿಧ ಕಡೆಗಳಲ್ಲಿ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ ನಡೆದಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭಾಗಿಯಾಗಿ ಕರ್ನಾಟಕದಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಚಿವರು, ರೋಜ್ಗಾರ್ ಮೇಳ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದರು.
ಪ್ರತಿ ರಾಜ್ಯದ ಯುವಕರಿಗೆ ಕೂಡ ಈ ಮೇಳದಿಂದ ಲಾಭ ದೊರೆಯುತ್ತಿದೆ. ಸ್ವಯಂ ಧೃಡೀಕರಣ ಅವಕಾಶವಿರುವುದರಿಂದ ನೇಮಕಾತಿ ಪ್ರಕ್ರಿಯೆ ಸುಲಭವಾಗಿದ್ದು, ತಂತ್ರಜ್ಞಾನದ ಸಹಾಯದಿಂದ ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸಿ ಹಾಗೂ ಡಿ ವರ್ಗದ ಉದ್ಯೋಗಕ್ಕೆ ಅರ್ಹವಿರುವ ಅಭ್ಯರ್ಥಿಗಳಿಗೆ ಸಂದರ್ಶನವಿಲ್ಲದೆ, ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಧಾರ್ ಕಾರ್ಡ್ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವು ಯಾವುದೇ ಹಂತದಲ್ಲಿಯೂ ಕೂಡ ನುಸುಳದಂತೆ ಕಾಳಜಿ ವಹಿಸಲಾಗಿದೆ ಎಂದು ಹೇಳಿದ ಅವರು, ಜನ್ ಧನ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಈಗಾಗಲೇ ಪಾರದರ್ಶಕತೆ ತರಲಾಗಿದೆ ಎಂದರು.
ರೋಜಗಾರ್ ಮೇಳದಿಂದ ಯುವಕರ ಸಶಕ್ತಿಕರಣ ಹಾಗೂ ದೇಶದ ವಿಕಾಸ ಎರಡು ಸಾಧ್ಯವಾಗಲಿದೆ. ಈಗಾಗಲೇ ಸಾವಿರಾರು ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗಿದ್ದು, ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಸರ್ಕಾರಿ ನೌಕರಿಯ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಜೋಶಿಯವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Fri, 20 January 23