ಗಂಡು ಮಗುವಿನಾಸೆಗೆ ಮಾಟಗಾತಿಯ ಮಾತು ಕೇಳಿ ಹೆಂಡತಿ ತಲೆ ಕೂದಲನ್ನೇ ಕತ್ತರಿಸಿದ ಪತಿ!
ವಿಜಯಪುರದ ಹೊನ್ನುಟಗಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದ್ದು, ನಾಗರಿಕ ಸಮಾಜ ನಾಚುವಂತಾಗಿದೆ. ಮೂಢ ನಂಬಿಕೆಗೊಳಗಾಗಿದ್ದ ಪತಿ, ಗಂಡು ಮಗುವಿಗಾಗಿ ಮಾಟಗಾತಿಯ ಮಾತಿನಂತೆ ಮಹಿಳೆಯ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ.ಘಟನೆಯ ಬಳಿಕ ರಕ್ತಸ್ರಾವದಿಂದ ಬಳಲಿದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ದೂರು ದಾಖಲಿಸಿದ್ದಾರೆ.

ವಿಜಯಪುರ, ಡಿಸೆಂಬರ್ 08: ಮಾಟಗಾತಿಯ ಮಾತು ಕೇಳಿ ಮಹಿಳೆಯ ಕೂದಲು ಕತ್ತರಿಸಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂರು ಹೆಣ್ಣು ಮಕ್ಕಳನ್ನು ಹೆತ್ತ ಮಹಿಳೆ ನಾಲ್ಕನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಲಿ ಎಂಬ ಕಾರಣಕ್ಕೆ ಆಕೆಯ ಪತಿ ಮತ್ತು ಅತ್ತೆ ಸೇರಿ ಈ ಕೃತ್ಯ (Black magic) ಎಸಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡು ಮಗು ಹೆರದ ಕಾರಣಕ್ಕೆ ಪತ್ನಿಗೆ ಕಿರುಕುಳ
ಈ ಅಮಾನವೀಯ ಕೃತ್ಯಕ್ಕೊಳಗಾದ ಮಹಿಳೆಯ ಹೆಸರು ಜ್ಯೋತಿ ದಳವಾಯಿ. ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಮತ್ತು ಡುಂಡೇಶ್ ವಿವಾಹವಾಗಿದ್ದು, ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಮತ್ತು ಆತನ ತಂದೆ ತಾಯಿ, ಜ್ಯೋತಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪ್ರತಿದಿನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ದುಂಡೇಶ್, ಗಂಡು ಮಗು ಬೇಕೇ ಬೇಕೆಂಬ ಆಸೆ ಹೊದಿದ್ದ. ಈ ಹಿನ್ನೆಲೆ ಆತ ಮತ್ತು ಆತನ ತಂದೆ, ತಾಯಿ ಸೇರಿ ಕೊಲ್ಹಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿಯೊಬ್ಬಳ ಮೊರೆ ಹೋಗಿದ್ದರು.
ಪತ್ನಿ ಕೂದಲು ಕತ್ತರಿಸಿ ಸ್ಮಶಾನದಲ್ಲಿ ಸುಟ್ಟ ಪತಿ
ಮಾಟಗಾತಿಯ ಬಳಿ ತಮಗೆ ಸತತವಾಗಿ 3 ಹೆಣ್ಣು ಮಕ್ಕಳು ಜನಿಸಿದ್ದು, ನಾಲ್ಕನೇಯದು ಗಂಡು ಮಗುವೇ ಆಗಬೇಕೆಂಬ ಆಸೆಯಿದೆ ಎಂಬುದನ್ನು ಹೇಳಿಕೊಂಡಿದ್ದ. ಇದನ್ನು ಕೇಳಿದ ಮಂಗಳಾ, ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ. ಇದೇ ಕಾರಣದಿಂದ ನಿಮಗೆ ಗಂಡು ಮಗು ಪಡೆಯಲು ಸಾಧ್ಯವಾಗುತ್ತಿಲ್ಲ. ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ದುಂಡೇಶ್ಗೆ ಹೇಳಿದ್ದಳು.
ಇದನ್ನೂ ಓದಿ ಮಾಟ-ಮಂತ್ರದ ವಿಚಾರವಾಗಿ ಕಲಹ, ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿದ ಪತಿ
ಇದನ್ನು ಕೇಳಿದ ಪತಿ, ಜ್ಯೋತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಕೆಯ ತಲೆಯೆ ಮಧ್ಯಭಾಗದ ಕೂದಲನ್ನು ಬಲವಂತವಾಗಿ ಬ್ಲೇಡ್ನಿಂದ ಕಟ್ ಮಾಡಿದ್ದ. ನಂತರ ಮಾಟಗಾತಿ ಹೇಳಿದಂತೆ ಪತ್ನಿಯ ಕೂದಲನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಸುಟ್ಟುಹಾಕಿದ್ದ. ಘಟನೆಯ ಪರಿಣಾಮ ತೀವ್ರ ರಕ್ತಸ್ರಾವದಿಂದ ಬಳಲಿದ್ದ ಜ್ಯೋತಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ತವರು ಮನೆಗೆ ಹೋಗಿದ್ದರು. ಘಟನೆ ನಡೆದು 12 ದಿನಗಳ ಬಳಿಕ ಡಿ.1ರಂದು ಜ್ಯೋತಿ ಹಾಗೂ ಆಕೆಯ ಕುಟುಂಬಕಸ್ಥರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



