
ವಿಜಯಪುರ, ಆಗಸ್ಟ್ 07: ನಮ್ಮ ಮಗ ಓದಿ ವಿದ್ಯಾವಂತನಾಗಬೇಕೆಂಬ ಆಸೆಯಿಂದ ದೂರದ ಬಿಹಾರದಿಂದ ಬಂದು ವಿಜಯಪುರ ನಗರದ ಹೊರಭಾಗದಲ್ಲಿನ ಯೋಗಾಪುರದಲ್ಲಿ ನೆಲೆಸಿದ್ದ ಕುಟುಂಬ ಖಾಸಗಿ ಶಾಲೆಗೆ ಆತನನ್ನು ಸೇರಿಸಿದ್ದರು. ಆದರೆ ಇದೀಗ ಪೋಷಕರು ಕಣ್ಣೀರು ಹಾಕುವಂತಾಗಿದೆ. ಶಾಲೆಯಲ್ಲಿ ನಡೆದ ಅದೊಂದು ಜಗಳದಲ್ಲಿ 5ನೇ ತರಗತಿಯ ವಿದ್ಯಾರ್ಥಿ (student) ಸಾವನ್ನಪ್ಪಿದ್ದಾನೆ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಸಾವಾಗಿದೆ (death) ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆ ಮುಂದೆ ಬಾಲಕನ ಶವವಿಟ್ಟು ಪೋಷಕರು ಹಾಗೂ ಸ್ಥಳಿಯರು ಪ್ರತಿಭಟಿಸಿದರು.
ವಿಜಯಪುರ ನಗರದ ಹೊರಭಾಗದ ಯೋಗಾಪುರದಲ್ಲಿ ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಮುಂದೆ ಜನ ಸಾಗರ ಸೇರಿತ್ತು. ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಬಿಹಾರ ಮೂಲದ ಅನ್ಸ್ ಸುನೀಲ್ ಎಂಬ 11 ವರ್ಷದ ಬಾಲಕನ ಶವವನ್ನು ಇಟ್ಟು ಆತನ ತಂದೆ-ತಾಯಿ ರೋಧಿಸುತ್ತಿದ್ದರು. ಸ್ಥಳಿಯ ಜನರು ಸಹ ಬಾಲಕನ ಸಾವಿಗೆ ಮಮ್ಮಲ ಮರಗುತ್ತಿದ್ದರು. ಅಷ್ಟಕ್ಕೂ ಶಾಲೆ ಮುಂದೆ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಕಾರಣ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ.
ಬಿಹಾರ ಮೂಲದ ಸುನೀಲ್ ಹಾಗೂ ಶೃತಿ ದಂಪತಿ. ಸುನೀಲ್ ಅವರು ನಗರದಲ್ಲಿ ಪಾನಿಪುರಿ ಮಾರಾಟ ಮಾಡಿ ಜೀವನ ಮಾಡುತ್ತಿದ್ದರು. ಇತ್ತ ತನ್ನ ಮಗಾ ಅನ್ಸ್ ನನ್ನು ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗೆ ಸೇರಿಸಿದ್ದರು. ಕಳೆದ 5 ದಿನಗಳ ಹಿಂದೆ ಅನ್ಸ್ ಹಾಕಿಕೊಂಡಿದ್ದ ಅದೊಂದು ವಾಚ್ ಕಾರಣಕ್ಕೆ ಶಾಲೆಯಲ್ಲಿ ಗಲಾಟೆ ಆಗಿತ್ತಂತೆ. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ಮಾಡಿ ವಾಚ್ ಕಿತ್ತುಕೊಂಡಿದ್ದರಂತೆ. ಆ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ಗೆ ಹೊಡೆದ ಕಾರಣ ಆತ ಅಸ್ವಸ್ಥನಾಗಿದ್ದ.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಬಾಲಕನ ಕಿಡ್ನ್ಯಾಪ್-ಕೊಲೆ ಕೇಸ್: ಕೊನೆಗೂ ರಿವೀಲ್ ಆಯ್ತು ಹತ್ಯೆ ರಹಸ್ಯ!
ಪೋಷಕರು ಮಗ ಅನ್ಸ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 5 ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ಹಲ್ಲೆ ವಿಚಾರ ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದರೂ ಸ್ಪಂದಿಸಿರಲಿಲ್ಲ. ನಿಮ್ಮ ಮಗ ಏನಾದರೂ ಸತ್ತಿದ್ದಾನಾ ಎಂದು ವಿದ್ಯಾರ್ಥಿ ಪೋಷಕರಿಗೆ ಬೆದರಿಕೆ ಹಾಕಿದ್ದು, ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು ಪೋಷಕರು, ಸ್ಥಳೀಯರ ಆರೋಪಿಸಿದ್ದಾರೆ.
ಬಾಲಕನ ಶವ ಶಾಲೆಯ ಗೇಟ್ ಬಳಿ ಇಟ್ಟು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಶಾಲೆಗೆ ಬೀಗ ಹಾಕಿ ಪರಾರಿಯಾಗಿದ್ಧಾರೆ. ನೆರೆದ ಜನರಂತೂ ಶ್ರೀ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಶಾಲೆಯ ಮುಖ್ಯಸ್ಥರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಘಟನೆಯ ಸುದ್ದಿ ತಿಳಿದ ಕೂಡಲೇ ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ, ಗೋಲಗುಂಬಜ್ ಇನ್ಸಪೆಕ್ಟರ್ ಮಲ್ಲಯ್ಯ ಮಠಪತಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ 20ಕ್ಕೂ ಅಧಿಕ ಕಾನ್ಸಸ್ಟೇಬಲ್ಸ್ಗಳು ಸ್ಥಳಕ್ಕೆ ಆಗಮಿಸಿದ್ದರು.
ಪ್ರತಿಭಟನಾ ನಿರತ ಮೃತ ಬಾಲಕನ ಪೋಷಕರು ಹಾಗೂ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು. ಘಟನೆ ಕುರಿತು ದೂರು ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆಂದು ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈಬಿಟ್ಟು ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಿ ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಕಾರಣ ಬಾಲಕನ ಶವವನ್ನು ಮಣೋತ್ತರ ಪರೀಕ್ಷೆಗೆ ರವಾನೆ ಮಾಡಲು ಪೋಷಕರು ಹಾಗೂ ಸ್ಥಳಿಯರು ಸಹಕಾರ ನೀಡಿದರು. ಪ್ರತಿಭಟನೆ ಕೈಬಿಟ್ಟು ಶಾಲಾ ಆಡಳಿತ ಮಂಡಳಿ ವಿರುದ್ದ ದೂರು ನೀಡೋದಾಗಿ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಮಾತ್ರ ಈ ಘಟನೆಗೆ ಶಾಲೆಯ ಮುಖ್ಯಸ್ಥರೇ ಕಾರಣವೆಂದು ತೀವ್ರ ಅಸಮಾಧಾನ ಹೊರ ಹಾಕಿದ್ಧಾರೆ.
ಇದನ್ನೂ ಓದಿ: ಬಳ್ಳಾರಿ: ಬಾಲಕಿಯ ಫೋಟೋ ಸ್ಟೇಟಸ್ ಇಟ್ಟಿದ್ದಕ್ಕೆ ಗ್ಯಾಂಗ್ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ
ಸದ್ಯ ಬಾಲಕ ಸಾವಿಗೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಕಾರಣವೆಂಬ ಆರೋಪ ಕೇಳಿ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಹಿರಿಯ ವಿದ್ಯಾರ್ಥಿಗಳು ಮಾಡಿದ ಹಲ್ಲೆಯಿಂದ ಮೃತಪಟ್ಟಿದ್ದಾ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದಾ ಎಂಬುದು ತಿಳಿದು ಬರಲಿದೆ. ಘಟನೆ ಕುರಿತು ಗೋಲಗುಂಬಜ್ ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Thu, 7 August 25