
ವಿಜಯಪುರ, ಮೇ 19: ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಕಂಪನಿಯ ಕೈಗಾರಿಕಾ ಸ್ಥಾಪನೆಗೆ ವಿರೋಧವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ವಿಜಯಪುರ (Vijayapura) ತಾಲೂಕಿನ ತಿಡಗುಂದಿ ಗ್ರಾಮದ ಬಳಿ ಇಂಡಸ್ಟ್ರಿಯಲ್ ಹಬ್ (Industrial Hub) ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಭೂಸ್ವಾಧೀನಕ್ಕೆ ಒಳಗಾಗುವ ರೈತರಿಗೆ ಮೂರು ಬಾರಿ ನೊಟೀಸ್ ಸಹ ನೀಡಲಾಗಿದೆ. ಇಂದು ಸ್ವಾಧೀನಕ್ಕೊಳಪಡುವ ಭೂಮಿಗಳ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಬರುತ್ತಾರೆಂಬ ಕಾರಣ ರೈತರೆಲ್ಲಾ ಜಮೀನುಗಳಲ್ಲಿ ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಭೂಮಿ ನೀಡಿಲ್ಲವೆಂದು ಪಟ್ಟು ಹಿಡಿದಿದ್ದರು. ಕೊನೆಗೆ ಸರ್ವೆ ಮಾಡಲು ಅಧಿಕಾರಿಗಳು ಆಗಮಿಸಲಿಲ್ಲ. ಏನೇ ಆದರೂ ನಾವು ಭೂಮಿ ನೀಡಲ್ಲವೆಂದು ರೈತರು ಹೋರಾಟಕ್ಕೆ ಅಣಿಯಾಗಿದ್ದಾರೆ.
ಕೈಗಾರಿಕೆ ಪ್ರದೇಶ ನಿರ್ಮಾಣಕ್ಕಾಗಿ ವಿಜಯಪುರ ಜಿಲ್ಲೆಯ ತಿಡಗುಂದಿ ಗ್ರಾಮದ ಬಳಿ ಭೂಮಿ ವಶಕ್ಕೆ ರಾಜ್ಯ ಸರಕಾರ ಮುಂದಾಗಿದೆ. ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ರೈತರಿಗೆ ಸೇರಿದ 1203 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. 350 ಕುಟುಂಬಲ 230 ರೈತರ 1203 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಇದೀಗ ಮುಂದಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಭೂಸ್ವಾಧೀನ ನಡೆಯಲಿದೆ. ಕೈಗಾರಿಕೆಗೆ ನಾವು ಭೂಮಿ ನೀಡಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಫಲವತ್ತಾದ ಭೂಮಿ ಕಬಳಿಸಲು ನಾವು ಬಿಡಲ್ಲ ಅಂತಾ ರೈತರು ಕಪ್ಪು ಬಟ್ಟೆ ಕಟ್ಟಿಕೊಂಡು ಹೋರಾಟ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಸಿಂದಗಿ ಡಿಪೋದಲ್ಲಿ ಡೀಸೆಲ್ ಸಮಸ್ಯೆ, ನಿಂತಲ್ಲೇ ನಿಂತ ಬಸ್ಗಳು..ಪ್ರಯಾಣಿಕರು ಪರದಾಟ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ರೈತರಿಗೆ ಈಗಾಗಲೇ ಮೂರು ನೊಟೀಸ್ಗಳನ್ನು ಜಾರಿ ಮಾಡಲಾಗಿದೆ. ಇದಕ್ಕೆ ರೈತರೂ ಸಹ ಆಕ್ಷೇಪನಾ ಪತ್ರಗಳನ್ನು ಸರ್ಕಾರಕ್ಕೆ, ಕೈಗಾರಿಕಾ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಗೆ ನೀಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಆದರೆ ತಲೆ ತಲಾಂತರಿಂದ ಬಂದ ನಮ್ಮ ಪೂರ್ವಿಕರ ಜಮೀನುಗಳನ್ನು ಕೈಗಾರಿಕೆಗೆ ನಾವು ನೀಡಲ್ಲ. ಕೃಷಿ ಬಿಟ್ಟು ಬೇರೆ ಕಾಯಕ ಗೊತ್ತಿಲ್ಲ. ಕೈಗಾರಿಕೆಗೆ ಭೂಮಿ ನೀಡಿದರೆ ನಾವು ಕುಟುಂಬ ಸಮೇತ ಗುಳೆ ಹೋಗುವಂತಾಗುತ್ತದೆ ಎಂದು ರೈತರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಸದ್ಯ ತಿಡಗುಂದಿ ಗ್ರಾಮದ 1203 ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಸರ್ಕಾರದ ಉದ್ದೇಶವಾಗಿದೆ. ನೆರೆಯ ಮಹಾರಾಷ್ಟ್ರ ಸಂಪರ್ಕಿಸುವ ಎನ್ಎಚ್ 52ಕ್ಕೆ ಹೊಂದಿಕೊಂಡ ಭೂಮಿಗಳನ್ನು ಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಇಲ್ಲಿ ಫಲವತ್ತಾದ ಭೂಮಿಯಿದೆ. ತೋಟಗಾರಿಕೆ ಬೆಳೆಗಳು ಕಬ್ಬು ಹಾಗೂ ಇತರೆ ಬೆಳೆಗಳನ್ನು ಇಲ್ಲಿ ಬೆಳೆಯುತ್ತೇವೆ. ಬಂಜರು ಭೂಮಿ ಏನು ಬೆಳೆಯದ ಭೂಮಿಯಲ್ಲಿ ಕೈಗಾರಿಕಾ ಸ್ಥಾಪನೆ ಮಾಡಿ ಎಂದು ಹೇಳಿದ್ದಾರೆ. ಇಂದು ಭೂಮಿ ಸರ್ವೆಗೆ ಆಗಮಿಸುತ್ತೇವೆಂದು ಕೆಐಎಡಿಬಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.
ಸರ್ವೆ ಕಾರ್ಯ ಮಾಡುವ ವೇಳೆ ಜಮೀನು ಮಾಲೀಕರು ಹಾಜರಿರಬೇಕು. ಇಲ್ಲದಿದ್ದರೆ ಸ್ಥಳದಲ್ಲಿ ದೊರೆತ ಮಾಹಿತಿಯಂತೆ ಸರ್ವೆ ಕಾರ್ಯ ಮಾಡಲಾಗುತ್ತದೆ ಎಂದು ನೊಟೀಸ್ ನೀಡಿದ್ದಾರೆ. ಈ ಹಿನ್ನಲೆ ಅಧಿಕಾರಿಗಳ ಬಳಿ ಮಾಹಿತಿಯನ್ನಾದರೂ ಪಡೆಯೋಣವೆಂದು ಇನ್ನೂರಕ್ಕೂ ಹೆಚ್ಚು ರೈತರು ಕೆಐಎಡಿಬಿ ಹಾಗೂ ಸರ್ವೆ ಅಧಿಕಾರಿಗಳಿಗಾಗಿ ಬೆಳಿಗ್ಗೆಯಿಂದಲೇ ಕಾಯುತ್ತಿದ್ದರು. ಮಧ್ಯಾಹ್ನ 3 ಗಂಟೆಯಾದರೂ ಅಧಿಕಾರಿಗಳ ಸುಳಿವಿರಲಿಲ್ಲ. ನಾಳೆ ಹಾಗೂ ನಾಡಿದ್ದು ಸಮಯವಿದ್ದು ಅಲ್ಲಿಯವರೆಗೂ ರೈತರು ಕೆಲಸಗಳನ್ನು ಬಿಟ್ಟು ಕಾಯುವಂತಾಗಿದೆ. ರೈತರನ್ನು ಕಾಯಿಸುವುತ್ತಿರುವ ಅಧಿಕಾರಿಗಳ ನಡೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾದ್ಯಕ್ಷ ಸಂಗಮೇಶ ಸಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಾಲ ಬಿಚ್ಚಿದ ಪಾಕ್ ಪ್ರೇಮಿ: ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್ ಪರ ಪೋಸ್ಟ್, ದೂರು ದಾಖಲು
ಸದ್ಯ ತಿಡಗುಂದಿ ಗ್ರಾಮದ ಬಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ದಿನದಿಂದ ದಿನಕ್ಕೆ ವಿರೋಧ ಹೆಚ್ಚುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದಾಗ ನೀರಾವರಿ ಯೋಜನೆ ಹೆಸರಿನಲ್ಲಿ ಭೂಮಿಗಳ ಪರೀಕ್ಷೆ ಮಾಡಲಾಗಿತ್ತು. ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಕೈಗಾರಿಕೆ ಪ್ರದೇಶ ನಿರ್ಮಾಣದ ವಿಚಾರದಲ್ಲಿ ಉಗ್ರ ಹೋರಾಟವವಾಗುವ ಸಾಧ್ಯತೆಯಿದೆ. ಸರ್ಕಾರ ಹಾಗೂ ಸಚಿವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.